ನವದೆಹಲಿ/ಬೀಜಿಂಗ್:ತೈವಾನ್ ನೂತನ ರಾಷ್ಟ್ರಾಧ್ಯಕ್ಷೆಯಾಗಿ ತ್ಸಾಯಿ ಇಂಗ್ ವೆನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಬಿಜೆಪಿ ಸಂಸದರನ್ನು ಭಾಗಿ ಮಾಡುವ ಮೂಲಕ ಭಾರತ ಚೀನಾಕ್ಕೆ ಎಚ್ಚರಿಕೆ ಸಂದೇಶ ರವಾನಿಸಿತ್ತು. ಮತ್ತೊಂದೆಡೆ ಕಳೆದ ವಾರ ಲಡಾಖ್ ನಲ್ಲಿ ಪಹರೆ ನಡೆಸುತ್ತಿದ್ದ ಭಾರತೀಯ ಯೋಧರು ಹಾಗೂ ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ(ಐಟಿಬಿಪಿ)ರನ್ನು ಚೀನಾ ಬಂಧಿಸಿ ನಂತರ ಬಿಡುಗಡೆ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಭಾರತೀಯ ಸೇನಾ ಮೂಲಗಳ ಪ್ರಕಾರ, ಭಾರತೀಯ ಯೋಧರನ್ನು ಬಂಧಿಸಿದ್ದಾರೆ ಎಂಬುದನ್ನು ಅಲ್ಲಗಳೆದಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ ಎಂದು ವರದಿ ವಿವರಿಸಿದೆ. ಚೀನಾ ಸೈನಿಕರು ಭಾರತೀಯ ಯೋಧರನ್ನು ಅಲ್ಪಾವಧಿಗೆ ಬಂಧಿಸಿ ನಂತರ ಬಿಡುಗಡೆಗೊಳಿಸಿದ್ದರು. ಅಲ್ಲದೇ ಶಸ್ತ್ರಾಸ್ತ್ರಗಳನ್ನು ಹಿಂದಿರುಗಿಸಿದ್ದರು ಎಂದು ಮೂಲಗಳು ಹೇಳಿವೆ.
ಕಳೆದ ವಾರ ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್ ಸಮೀಪ ಎರಡು ದೇಶಗಳ ಯೋಧರ ನಡುವೆ ಘರ್ಷಣೆ ನಡೆದಿತ್ತು. ಪರಿಸ್ಥಿತಿ ಕೈಮೀರುವ ಮೊದಲು ಉಭಯ ದೇಶಗಳ ಕಮಾಂಡರ್ ಗಳು ಸಭೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಲಾಗಿತ್ತು ಎಂದು ವರದಿ ತಿಳಿಸಿದೆ.
ಪ್ಯಾಂಗ್ ಗೋಂಗ್ ಲೇಕ್ ಸಮೀಪ ನಡೆದ ಸಂಪೂರ್ಣ ಘಟನೆ ಬಗ್ಗೆ ಭಾರತೀಯ ಸೇನೆ ಪ್ರಧಾನ ಮಂತ್ರಿ ಕಚೇರಿ(ಪಿಎಂಒ)ಗೆ ವಿವರ ನೀಡಿತ್ತು. ಭಾರತೀಯ ಯೋಧರು, ಐಟಿಬಿಪಿ ಯೋಧರನ್ನು ಚೀನಾ ಸೈನಿಕರು ಬಂಧಿಸಿ, ಶಸ್ತ್ರಾಸ್ತ್ರ ವಶಪಡಿಸಿಕೊಂಡಿದ್ದರು. ನಂತರ ಅದನ್ನು ವಾಪಸ್ ನೀಡಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಶನಿವಾರ ಉತ್ತರ ಸಿಕ್ಕಿಂನ ನಾಕುಲಾ ಸೆಕ್ಟರ್ ಬಳಿ ಭಾರತೀಯ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಯಲ್ಲಿ ಎರಡು ದೇಶಗಳ ಸೈನಿಕರು ಗಾಯಗೊಂಡಿದ್ದರು. ಉಭಯ ದೇಶಗಳ ಸೈನಿಕರು ಮುಖಾಮುಖಿಯಾದಾಗ ಈ ಘಟನೆ ನಡೆದಿದ್ದು, ನಂತರ ಕೂಡಲೇ ಬಗೆಹರಿದಿರುವುದಾಗಿ ವರದಿ ತಿಳಿಸಿದೆ. ಚೀನಾ ಸೈನಿಕರ ಸಂಘರ್ಷದಿಂದ ಲಡಾಖ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹೆಚ್ಚಾದ ಹಿನ್ನೆಲೆಯಲ್ಲಿ ಕಳೆದ ವಾರ ಭಾರತೀಯ ಸೇನಾ ಮುಖ್ಯಸ್ಥ ಎಂಎಂ ನರವಾಣೆ ಲೇಹ್ ಗೆ ಭೇಟಿ ನೀಡಿದ್ದರು.