Advertisement
ಈ ತಿಂಗಳ 12 ರಂದು ಮುಂಬಯಿನ ಅಜಾದ್ ಮೈದಾನದಲ್ಲಿ ಮಣ್ಣಿನ ಮಕ್ಕಳ ಮಹಾಜನಸಾಗರ. ಆ ವಿಶಾಲ ಮೈದಾನ 35,000 ಮಣ್ಣಿನ ಮಕ್ಕಳಿಂದ ಕಿಕ್ಕಿರಿದು ತುಂಬಿತ್ತು. ಅವರೆಲ್ಲ ಮಹಾರಾಷ್ಟ್ರದ ನಾಸಿಕದಿಂದ ಹೊರಟು ರೈತರ ಹಾಗೂ ಬುಡಕಟ್ಟು ಜನರ ಪ್ರತಿಭಟನಾ ಜಾಥಾದಲ್ಲಿ 180 ಕಿಮೀ ನಡೆದು ಬಂದವರು. ಉರಿ ಬಿಸಿಲನ್ನು, ಸುಸ್ತು ಹೊಡೆಸುವ ಹಸಿವನ್ನು, ಪಾದದಲ್ಲಿ ಎದ್ದ ಬೊಬ್ಬೆಗಳನ್ನು ಲೆಕ್ಕಿಸದೆ ಸಾಗಿ ಬಂದವರು. ಈ ದೇಶದ ಮಣ್ಣಿನ ಮಕ್ಕಳ ಆಕ್ರೋಶ ಎಲ್ಲಿಗೆ ಮುಟ್ಟಿದೆಯೆಂದು ತಿಳಿಯಬೇಕಾದರೆ, ಆ ಏಳು ದಿನಗಳ ಪ್ರತಿಭಟನಾ ಜಾಥಾವನ್ನು ಕಣ್ಣಾರೆ ಕಾಣಬೇಕಿತ್ತು.
Related Articles
Advertisement
ಗ್ರಾಮೀಣ ರಂಗದಲ್ಲಿ ನೀರಾವರಿಯಿಂದ ತೊಡಗಿ ಸಾರಿಗೆ ವ್ಯವಸ್ಥೆ ವರೆಗೆ ಹೂಡಿಕೆಯನ್ನು ಕಡಿಮೆ ಮಾಡಲಾಗಿದೆ ಮತ್ತು ಗ್ರಾಮೀಣ ಸಾಲ ವ್ಯವಸ್ಥೆ ರೈತರ ಕೈಗೆ ಎಟುಕದಂತಾಗಿದೆ. ಕೃಷಿಯ ಉತ್ಪಾದನಾ ವೆಚ್ಚ ವಿಪರೀತ ಜಾಸ್ತಿಯಾಗುತ್ತಿದೆ ಮತ್ತು ಬೆಳೆಗಾರನಿಗೆ ಸಿಗುವ ಕೃಷಿ ಉತ್ಪನ್ನಗಳ ಬೆಲೆ ಆ ವೆಚ್ಚವನ್ನು ಸರಿದೂಗಿಸುತ್ತಿಲ್ಲ. ಜಾಡು ತಪ್ಪಿದ ಮಳೆ, ಉಸಿರುಗಟ್ಟಿಸುವ ಸಾಲ ಮತ್ತು ನೆಲ ಕಚ್ಚಿದ ಬೆಲೆ – ಇವುಗಳಿಂದಾಗಿ ವರ್ಷದಿಂದ ವರ್ಷಕ್ಕೆ ರೈತರ ಬದುಕಿನ ಬವಣೆ ಹೆಚ್ಚುತ್ತಿದೆ. ಮಹಾರಾಷ್ಟ್ರದಲ್ಲಿ ಮಾತ್ರವಲ್ಲ, ಇತರ ಎಲ್ಲ ರಾಜ್ಯಗಳಲ್ಲಿಯೂ ಮಣ್ಣಿನ ಮಕ್ಕಳದ್ದು ಇದೇ ಕಥೆ-ವ್ಯಥೆ.
ಕೃಷಿರಂಗದ ಬಿಕ್ಕಟ್ಟನ್ನು ಪರಿಹರಿಸಲಿಕ್ಕಾಗಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ಬದಲಾಗಿ ಸರಕಾರಗಳು ರೈತರ ಆತ್ಮಹತ್ಯೆಗಳ ಅಂಕೆಸಂಖ್ಯೆಗಳನ್ನೇ ನಿರಾಕರಿಸುವ ಆಟ ಆಡುತ್ತಿವೆ. ಎಲ್ಲಿಯವರೆಗೆ ಎಂದರೆ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ, 2014 ಮತ್ತು 2015ರಲ್ಲಿ ರೈತ-ಆತ್ಮಹತ್ಯೆ ಖಚಿತಪಡಿಸುವ ಮಾನದಂಡಗಳನ್ನೇ ಬದಲಾಯಿಸಿತು! ಇದರ ಉದ್ದೇಶ, ರೈತ-ಆತ್ಮಹತ್ಯೆಗೆ ಸಂಬಂಧಿಸಿ ಹೊಸ ವಿಭಾಗಗಳಲ್ಲಿ ಅಂಕಿಸಂಖ್ಯೆ ಸಂಗ್ರಹಿಸಿ, ವರ್ಷದಿಂದ ವರ್ಷಕ್ಕೆ ರೈತ ಆತ್ಮಹತ್ಯೆ ಕಡಿಮೆಯಾಗಿದೆ ಎಂದು ತೋರಿಸುವುದು!
ನಮ್ಮ ದೇಶದಲ್ಲಿ ಅಧಿಕ ತಲಾ ಆದಾಯ ಹೊಂದಿರುವ ರಾಜ್ಯವಾದ ಮಹಾರಾಷ್ಟ್ರದಲ್ಲಿ ಅತ್ಯಧಿಕ ರೈತ ಆತ್ಮಹತ್ಯೆ ಘಟಿಸಿದ್ದು ವಿಪರ್ಯಾಸ. ವಿವಿಧ ರಾಜ್ಯಗಳ ಕೃಷಿರಂಗದ ಬಿಕ್ಕಟ್ಟಿನ ಬಗ್ಗೆ ಹಲವು ಅಧ್ಯಯನಗಳು ನಡೆದಿವೆ. ರಾಷ್ಟ್ರೀಯ ಕೃಷಿಕರ ಕಮೀಷನ್‌ನ 2004-2005ರ ಬೃಹತ್ ವರದಿಯಲ್ಲಿ ಕೃಷಿರಂಗದ ಸುಧಾರಣೆಗಾಗಿ ಅನೇಕ ಶಿಫಾರಸುಗಳನ್ನು ಮಾಡಲಾಗಿದೆ. ಅವುಗಳಲ್ಲಿ ಮುಖ್ಯವಾದ ಶಿಫಾರಸ್: ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚದ ಶೇ. 150ರಷ್ಟು ಅಧಿಕ ಬೆಲೆ ಪಾವತಿಸುತ್ತದೆ. ಇಲ್ಲಿಯವರೆಗೆ ಆ ಶಿಫಾರಸನ್ನು ಅಲಕ್ಷಿಸಿದ ಕೇಂದ್ರ ಸರಕಾರ, ಈ ವರುಷ 2018-19ರ ಬಜೆಟಿನಲ್ಲಿ ಮುಂದಿನ ಮಳೆಗಾಲದ ನಂತರ ಅದನ್ನು ಜಾರಿ ಮಾಡಲಾಗುವುದು ಎಂದು ತಿಳಿಸಿದೆ. ಆದರೆ ಹೇಗೆ? ಎಂದು ವಿವರಿಸಿಲ್ಲ!
ಕೃಷಿ ಲಾಭದಾಯಕವಲ್ಲ ಎಂದು ಸರಕಾರವೇ ಮತ್ತೆಮತ್ತೆ ಹೇಳುತ್ತಿದೆ. ಆದರೆ, ಅದಕ್ಕೆ ತನ್ನ ಧೋರಣಗಳೇ ಕಾರಣ ಎಂಬುದನ್ನು ಒಪ್ಪಿಕೊಳ್ಳುತ್ತಿಲ್ಲ. ಉದಾಹರಣೆಗೆ, ಬ್ಯಾಂಕಿನ ಕೃಷಿ ಸಾಲ ಎಂಬುದರ ವಿವರಣೆಯನ್ನು ಮತ್ತೆಮತ್ತೆ ತಿರುಚಲಾಗಿದೆ. ಇದರಿಂದಾಗಿ, ಕೃಷಿಕರಿಗೆ ಕೃಷಿಗಾಗಿ ಸಾಲ ಪಡೆಯುವುದೇ ಕಷ್ಟಸಾಧ್ಯ. ಆದರೆ, ಕೃಷಿಸಾಲದ ಹೆಸರಿನಲ್ಲಿ ಯಾವ್ಯಾವುದೋ ಉದ್ದೇಶಗಳಿಗೆ ಬ್ಯಾಂಕುಗಳಿಂದ ಸಾಲ ಪಡೆಯುವುದು ಸುಲಭ. 2014ರಲ್ಲಿ ರಾಮಕುಮಾರ್ ಮತ್ತು ಚೌವ್ಹಾಣ… ನಡೆಸಿದ ಅಧ್ಯಯನದ ಅನುಸಾರ, ಬ್ಯಾಂಕುಗಳ ಒಟ್ಟು ನೇರ-ಕೃಷಿಸಾಲದಲ್ಲಿ ಶೇ. 41 ನಗರ ಮತ್ತು ಮಹಾನಗರದ ಬ್ರಾಂಚುಗಳ ಮೂಲಕ ನೀಡಲಾಗಿದೆ. ಆ ನಗರಗಳಲ್ಲಿ ಅದೆಂಥ ಕೃಷಿ ಮಾಡಲಾಗುತ್ತಿದೆ? ರೈತರ ಕೃಷಿಸಾಲದ ಅವಶ್ಯಕತೆ ಬಗ್ಗೆ ಇದಕ್ಕಿಂತ ಮಿಗಿಲಾದ ಸಾಂಸ್ಥಿಕ ಅಸಡ್ಡೆ ಇದೆಯೇ?
ತಿನ್ನಲು ನಮಗೆಲ್ಲ ಆಹಾರ ಬೇಕು, ಆದರೆ ಆಹಾರ ಬೆಳೆಸುವ ರೈತರಿಗೆ ಸಾಲ ನಿರಾಕರಿಸಲು ಹತ್ತಾರು ನೆಪಗಳು! ಹಾಗಾಗಿ, ಇಂದಿಗೂ ಬಹುಪಾಲು ರೈತರು ಲೇವಾದೇವಿದಾರರಿಂದ ವಾರ್ಷಿಕ ಶೇ.18ರಿಂದ ಶೇ.36 ಬಡ್ಡಿಗೆ ಸಾಲ ಪಡೆದು, ಸಾಲದ ಸುಳಿಯಲ್ಲಿ ಬಳಲುತ್ತಿದ್ದಾರೆ. (2013ರಲ್ಲಿ ದೇಶದ ಒಟ್ಟು ಕೃಷಿಕುಟುಂಬಗಳಲ್ಲಿ ಸಾಲ ಪಡೆದಿದ್ದ ಕೃಷಿ ಕುಟುಂಬಗಳ ಪ್ರಮಾಣ ಶೇ.52) ಅದೇ, ನಿರವ್ ಮೋದಿ, ಮೆಹುಲ… ಚೋಕ್ಸಿ, ಗುಪ್ತಾ, ವಿಜಯ… ಮಲ್ಯ ಇಂಥವರಿಗೆ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ ಬ್ಯಾಂಕುಗಳು ಕೋಟಿಗಟ್ಟಲೆ ಸಾಲ ನೀಡುತ್ತವೆ. ಇಂಥ ಭರ್ಜರಿ ಮೋಸಗಳನ್ನು ಪ್ರಚಂಡ ಲೆಕ್ಕಪತ್ರ ಪರಿಶೋಧಕರಿಗೂ, ಮೇಲುಸ್ತುವಾರಿ ಅಧಿಕಾರಿಗಳಿಗೂ ವರ್ಷಗಟ್ಟಲೆ ಪತ್ತೆ ಮಾಡಲು ಸಾಧ್ಯವಾಗುವುದಿಲ್ಲ.
2014ರ ರಾಷ್ಟ್ರೀಯ ಸ್ಯಾಂಪಲ… ಸರ್ವೆ ಪ್ರಕಾರ, ನಮ್ಮ ದೇಶದ ಕೃಷಿಕರ ಸರ್ಕಾರಿ ಕೌಟುಂಬಿಕ ಆದಾಯ ತಿಂಗಳಿಗೆ ಸುಮಾರು 6,000ರೂ. ಗಮನಿಸಿ, ಮಹಾರಾಷ್ಟ್ರದ ವಿದರ್ಭ, ಒರಿಸ್ಸಾದ ಕಾಳಹಂದಿಯಂಥ ಪ್ರದೇಶಗಳಲ್ಲಿ ಇದು ತೀರಾ ಕಡಿಮೆ. ಅಂಥ ಪ್ರದೇಶಗಳಲ್ಲಿ ರೈತರು ಬದುಕಲಿಕ್ಕಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿ¨ªಾರೆ ಅಥವಾ ಹೈರಾಣಾಗಿ ಬದುಕುತ್ತಿ¨ªಾರೆ! ಆದ್ದರಿಂದ, 2016ರಿಂದೀಚೆಗೆ ವಿವಿಧ ರಾಜ್ಯಗಳಲ್ಲಿ ರೈತರ ಪ್ರತಿಭಟನೆಗಳು ತೀವ್ರವಾಗುತ್ತಿವೆ. ಮಹಾರಾಷ್ಟ್ರದಲ್ಲಂತೂ, 2017ರಲ್ಲಿ ರೈತರು ಒಂದು ವಾರ ಮುಷ್ಕರವನ್ನೇ ನಡೆಸಿದರು;
ಆಗ, ಹಾಲನ್ನೆಲ್ಲ ರಸ್ತೆಗೆ ಸುರಿದರು, ತರಕಾರಿಯನ್ನೆಲ್ಲ ರಸ್ತೆಗೆ ಚೆಲ್ಲಿದರು. ಆದರೂ, ಆಳುವವರಿಗೆ ರೈತರ ಆಕ್ರೋಶದ ಬಿಸಿ ತಟ್ಟಲಿಲ್ಲ. ಆದ್ದರಿಂದಲೇ 65ರ ವಯಸ್ಸಿನ ಶಂಕರ ವಘೇರೆಯಂಥ ವೃದ್ಧ ರೈತರೂ ಮಾರ್ಚ್ 6ರಂದೇ ನಾಸಿಕದಲ್ಲಿ ರೈತರ ಚಾರಿತ್ರಿಕ ಜಾಥಾ ಸೇರಿಕೊಂಡು, ಮುಂದಿನ ಏಳು ದಿನಗಳೂ ಬೆಂಕಿ ಬಿಸಿಲಿನಲ್ಲಿ ಮುಂಬೈಯತ್ತ ಮುನ್ನುಗ್ಗಿ ಬರುತ್ತಾರೆ, ಸಂವಿಧಾನದತ್ತವಾದ ಗೌರವದಿಂದ ಬದುಕುವ ತಮ್ಮ ಮೂಲಭೂತ ಹಕ್ಕಿನ ಸಾಧನೆಗಾಗಿ. ಅಂಥ ಕೋಟಿಗಟ್ಟಲೆ ಅನ್ನದಾತರ ಆಕ್ರೋಶದ ಬೆಂಕಿ ನಮ್ಮ ಊಟದ ಬಟ್ಟಲನ್ನು ಸುಟ್ಟು ಹಾಕುವ ಮುನ್ನ ಎಚ್ಚೆತ್ತುಕೊಳ್ಳೋಣ.
* ಅಡ್ಡೂರು ಕೃಷ್ಣ ರಾವ್