ಶಹಾಪುರ: ಪ್ರತಿಯೊಂದು ಮಗು ಶಿಕ್ಷಣದ ಹಕ್ಕು ಪಡೆದುಕೊಂಡಿದೆ. ಪಾಲಕರು ಕಡ್ಡಾಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಕಾಡಪ್ಪ ಹುಕ್ಕೇರಿ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಮಗನಲಾಲ್ ಜೈನ್ ಶಾಲೆಯಲ್ಲಿ ಶುಕ್ರವಾರ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ ಅ.2ರಿಂದ ತಾಲೂಕಿನ ಹಾಗೂ ನಗರ ಪ್ರದೇಶದಲ್ಲಿ ನಿರಂತರವಾಗಿ ವಕೀಲರ ಸಂಘದ ನೇತೃತ್ವದಲ್ಲಿ ಕಾನೂನು ಅರಿವು ಮೂಡಿಸುವುದರ ಜತೆಗೆ ನೆರವಿನ ಅಭಯ ನೀಡಲಾಗುತ್ತಿದೆ. ಶಾಲಾ ಹಂತದಲ್ಲಿ ಕನಿಷ್ಠ ಕಾನೂನು ಜ್ಞಾನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಅದರಲ್ಲಿ ವಾಹನ ಚಲಾವಣೆಗೆ ಕಡ್ಡಾಯವಾಗಿ ವಾಹನ ಪರವಾನಗಿ ಪತ್ರ, ವಾಹನ ವಿಮೆ, ಸಂಚಾರಿ ನಿಯಮ ಪಾಲನೆ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು.
ಇದನ್ನೂ ಓದಿ: ಹೋಟೆಲ್‌ನಲ್ಲಿ ಅಸ್ಪೃಶ್ಯತೆ ಆಚರಿಸಿದರೆ ಕ್ರಮ
ವಕೀಲರ ಸಂಘದ ಅಧ್ಯಕ್ಷ ಶಾಂತಗೌಡ ವಿ. ಪಾಟೀಲ್ ಹಾಲಬಾವಿ ಹಾಗೂ ಹಿರಿಯ ವಕೀಲರಾದ ಶ್ರೀನಿವಾಸರಾವ್ ಕುಲಕರ್ಣಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಮಾಂಗಿಲಾಲ್ ಜೈನ್, ವಕೀಲರಾದ ವಿಶ್ವನಾಥ ಫಿರಂಗಿ, ಗುರುರಾಜ ದೇಶಪಾಂಡೆ, ನಾಗರಡ್ಡಿ ಇದ್ದರು.