Advertisement
ಕೃಷಿ ಕುಟುಂಬಗಳು
ಶಿಶಿಲ ಗ್ರಾಮದ ಬಡ್ಲ, ಒಟ್ಲ, ದೇವಸ, ಗುತ್ತು, ಕೋಟೆಬಾಗಿಲು ಪ್ರದೇಶಗಳಲ್ಲಿ 100ಕ್ಕೂ ಹೆಚ್ಚು ಕೃಷಿ ಕುಟುಂಬಗಳಿವೆ. ಹಲವರಿಗೆ ಕೂಲಿ ಕೆಲಸವೇ ಜೀವನಾಧಾರ. ಈ ಕುಟುಂಬಗಳಿಗೆ ಮಳೆಗಾಲ ಬಂದರೆ ಎಷ್ಟು ಖುಷಿಯೇ ಅಷ್ಟೇ ಆತಂಕವೂ ಎದುರಾಗುತ್ತದೆ. ಇದಕ್ಕೆ ಕಾರಣ, ಇಲ್ಲಿ ಹರಿಯುವ ಹೊಳೆ. ವರ್ಷ ಪೂರ್ತಿ ನೀರು ಹರಿಯುವುದರಿಂದ ಹಾಗೂ ಈ ಪ್ರದೇಶದಲ್ಲಿ ಆಳವಾದ ಗುಂಡಿ ಇರುವುದರಿಂದ ಹೊಳೆಯನ್ನು ದಾಟುವುದು ಸಾಧ್ಯವಿಲ್ಲ. ಹೀಗಾಗಿ, ಈ ಹೊಳೆಗೆ ಬಡ್ಲ ಎಂಬಲ್ಲಿ ಏಳೆಂಟು ವರ್ಷಗಳಷ್ಟು ಹಿಂದೆ ಜಿ.ಪಂ. ಅನುದಾನದಲ್ಲಿ ಒಂದು ಕಾಲುಸಂಕ ನಿರ್ಮಿಸಲಾಗಿದೆ. ಕೃಷಿ ಚಟುವಟಿಕೆಗೆ ತೆರಳುವವರು, ಕೂಲಿ ಕೆಲಸಗಾರರು, ವಿದ್ಯಾರ್ಥಿಗಳು, ಆಸ್ಪತ್ರೆಗೆ ತೆರಳುವವರು ಎಲ್ಲರಿಗೂ ಈ ಸೇತುವೆಯೇ ಆಸರೆ. ಆದರೆ, ಕಳೆದ ಮಳೆಗಾಲದಲ್ಲಿಯೇ ಅದು ಮುರಿದಿದೆ. ಈ ಹಿಂದೆಯೂ ಒಮ್ಮೆ ನಿರ್ಮಿಸಿದ್ದ ಸೇತುವೆಗೆ ಇದೇ ಗತಿ ಒದಗಿತ್ತು. ಇದರೊಂದಿಗೆ ಹೊಳೆಯ ಇನ್ನೊಂದು ಭಾಗದಲ್ಲಿ ಮಣ್ಣು ಕುಸಿದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಭರವಸೆ ಮಾತ್ರ ಸಿಕ್ಕಿದೆ
ಈ ಸೇತುವೆಯನ್ನು ದುರಸ್ತಿಗೊಳಿಸುವಂತೆ ಅಥವಾ ಹೊಸದಾಗಿ ಉತ್ತಮ ಗುಣಮಟ್ಟದ ಸೇತುವೆ ನಿರ್ಮಿಸುವಂತೆ ಸ್ಥಳೀಯರು ಜನಪ್ರತಿನಿಧಿಗಳ ಗಮನ ಸೆಳೆದಿದ್ದಾರೆ. ಸೇತುವೆ ಸರಿಪಡಿಸುವ ಭರವಸೆಯೂ ಸಿಕ್ಕಿದೆ. ಆದರೆ, ವರ್ಷವೇ ಕಳೆದರೂ ಸೇತುವೆ ಇನ್ನೂ ಹಾಗೆಯೇ ಇದೆ. ಈ ಮಳೆಗಾಲದಲ್ಲಿ ಅದು ಮತ್ತಷ್ಟು ಅಪಾಯಕಾರಿಯಾಗಿ ಗೋಚರಿಸುತ್ತಿದೆ. ದೊಡ್ಡವರಲ್ಲದೆ, ಈ ಸೇತುವೆ ಮೂಲಕ ಶಾಲೆಗೆ ಹೋಗುವ 20ಕ್ಕೂ ಹೆಚ್ಚು ಮಕ್ಕಳ ಪ್ರಾಣಕ್ಕೇ ಕಂಟಕ ತರುವಂತಿದೆ.
ಈಗಲೇ ಬನ್ನಿ
ಜನಪ್ರತಿನಿಧಿಗಳೇ ಸಾಂತ್ವನ ಹೇಳಲು ಬರಬೇಡಿ! ಬರುವುದಾದರೆ ಈ ಸಮಯದಲ್ಲಿ ಬನ್ನಿ. ನಿತ್ಯ 20ಕ್ಕೂ ಹೆಚ್ಚು ಮಕ್ಕಳು ಇದೇ ಸೇತುವೆ ಮೇಲಿಂದ ಶಾಲೆಗೆ ಹೋಗುತ್ತಾರೆ. ಸೇತುವೆ ದುರಸ್ತಿ ಇಲ್ಲವೇ ಹೊಸ ಸೇತುವೆ ನಿರ್ಮಿಸಿ.
– ರಮೇಶ್ ವಿ. ಬಂಗೇರ, ಒಟ್ಲ ನಿವಾಸಿ