Advertisement

ಹಿಮಾಲಯನ್‌ ಟ್ರಿಪ್‌ ಹೊರಟ ಮಕ್ಕಳು

10:27 AM Nov 15, 2017 | |

ಕನ್ನಡದಲ್ಲಿ ಮಕ್ಕಳ ಚಿತ್ರಗಳಿಗೆ ಬರವಿಲ್ಲ. ಹೊಸ ಚಿತ್ರಗಳು ಸೆಟ್ಟೇರುತ್ತಲೇ ಇವೆ. ಆ ಸಾಲಿಗೆ ಈಗ “ದಿ ಗ್ರೇಟ್‌ ಹಿಮಾಲಯನ್‌ ಟ್ರಿಪ್‌’ ಎಂಬ ಹೊಸ ಚಿತ್ರವೂ ಸೇರಿದೆ. ಇದು ಶಾಲೆಯೊಂದರ 40 ಮಕ್ಕಳ ಸಾಹಸದ ಕಥೆ ಹೊಂದಿರುವ ಚಿತ್ರ. ಈಗಾಗಲೇ ಚಿತ್ರಕ್ಕೆ ಮುಹೂರ್ತ ನಡೆದು, ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ.

Advertisement

ಇತ್ತೀಚೆಗೆ ನಡೆದ ಮುಹೂರ್ತದಲ್ಲಿ ಕುಮಾರಿ ನಿವೇದಿತಾ ಕ್ಲಾಪ್‌ ಮಾಡಿದರೆ, ಚಂದ್ರಕಲಾ ನಟರಾಜ್‌ ಅವರು ಚಿತ್ರಕ್ಕೆ ಚಾಲನೆ ನೀಡಿದರು. ಉದಿತ್‌ ಕ್ಯಾಮೆರಾಗೆ ಚಾಲನೆ ನೀಡಿದರು. ಈ ಚಿತ್ರಕ್ಕೆ “ಭಾರತ ದರ್ಶನ ಮಕ್ಕಳ ಶೈಕ್ಷಣಿಕ ಪ್ರವಾಸ’ ಎಂಬ ಅಡಿಬರಹವಿದೆ. ಅಲ್ಲಿಗೆ ಇದು ಶೈಕ್ಷಣಿಕ ಪ್ರವಾಸದಲ್ಲಾಗುವ ಘಟನೆಗಳನ್ನು ಹೊಂದಿರುವ ಕಥೆ ಎಂಬುದನ್ನು ಪ್ರತ್ಯೇಕವಾಗಿ ಹೇಳುವಂತಿಲ್ಲ. 

ಈ ಚಿತ್ರಕ್ಕೆ ಕೆ.ಈಶ್ವರ್‌ ಎಲೆಕೊಪ್ಪ ನಿರ್ದೇಶಕರು. ಕಥೆ, ಚಿತ್ರಕಥೆ ಅವರದೇ. ಸಿ.ನಾಗೇಶ್‌(ಸಿಂಗಸಂದ್ರ) ಮತ್ತು ಕೆ. ಈಶ್ವರ್‌ ಚಿತ್ರದ ನಿರ್ಮಾಪಕರು. ಈ ಚಿತ್ರದ ಬಗ್ಗೆ ಹೇಳುವುದಾದರೆ, ಶಾಲೆಯೊಂದರ 40 ಜನ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸದ ಮೂಲಕ ಭಾರತದ ಪ್ರಮುಖ ಪ್ರವಾಸಿ ತಾಣ ವೀಕ್ಷಿಸಲು ಹೊರಡುತ್ತಾರೆ. ಒಂದು ಬಸ್‌ ಮೂಲಕ ಪ್ರವಾಸ ಹೊರಡುವ ಮಕ್ಕಳು ಕೊನೆಗೆ ಹಿಮಾಲಯ ತಲುಪುತ್ತಾರೆ.

ಅಲ್ಲಿಂದ ಬರುವಾಗ ಮಕ್ಕಳಿದ್ದ ಬಸ್‌ ಅಪಾಯಕ್ಕೆ ಸಿಲುಕುತ್ತದೆ. ಅಲ್ಲಿ ಆರು ಜನ  ಮಕ್ಕಳು ತಮ್ಮ ಬುದ್ದಿ ಸಾಮರ್ಥ್ಯದಿಂದ ಆ ಬಸ್‌ನಲ್ಲಿದ್ದ  ಎಲ್ಲರನ್ನು ಹೇಗೆ ಕಾಪಾಡುತ್ತಾರೆ ಎಂಬುದು ಕಥೆ. ಮೈಸೂರು, ಗುರುವಾಯೂರು, ಮಧುರೈ ಸೇರಿದಂತೆ ಭಾರತದ ಎಲ್ಲಾ ರಾಜ್ಯಗಳಲ್ಲಿ ಸುಮಾರು 30 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ಮಾಡುವ ಯೋಜನೆ ನಿರ್ದೇಶಕರದ್ದು. ಚಿತ್ರಕ್ಕೆ ಸಂತೋಷ್‌ ಛಾಯಾಗ್ರಾಹಕರು.

Advertisement

Udayavani is now on Telegram. Click here to join our channel and stay updated with the latest news.

Next