ಜೀವನದಲ್ಲಿ ಕಷ್ಟಪಟ್ಟು ದುಡಿದು ಹೆಸರು, ಯಶಸ್ಸು ಪಡೆಯುವ ಕಾಲ ಸರಿಯುತ್ತಿದೆ. ಇನ್‌ಸ್ಟಂಟ್ ನೂಡಲ್ಸ್, ರೆಡಿ ಮಿಕ್ಸ್ ಅಡುಗೆ ಭಕ್ಷ್ಯಗಳು ನಮ್ಮ ಅಡುಗೆ ಮನೆಗಳನ್ನು ಅಲಂಕರಿಸಿರುವ ಈ ಹೊತ್ತಿನಲ್ಲಿ ಬದುಕಿನಲ್ಲೂ ಇನ್‌ಸ್ಟಂಟ್ ಫೇಮ್, ಇನ್‌ಸ್ಟಂಟ್ ಸಕ್ಸಸ್‌ನ ಜಪ ಜೋರಾಗಿದೆ. ರಿಯಾಲಿಟಿ ಶೋಗಳಿಗೆ ಇಂಥ ಮಂದಿಯೇ ಆಹಾರ. ಮಿಡಲ್ ಕ್ಲಾಸ್ ಮಂದಿಯ ಈ ಹೊಸ ಹುಚ್ಚಿನ ಬಗ್ಗೆ “ತಾರೇ ಜಮೀನ್ ಪರ್’ ಖ್ಯಾತಿಯ ನಿರ್ದೇಶಕ ಗುಪ್ಟೆ ಇಲ್ಲಿ ಸ್ವಂತ ಅನುಭವ ತೆರೆದಿಟ್ಟಿದ್ದಾರೆ…
ಸೆಲೆಬ್ರಿಟಿಗಳನ್ನು ಭೇಟಿ ಮಾಡಬೇಕು, ತಮ್ಮ ಮಕ್ಕಳೂ ಅವರಂತೆಯೇ ಆಗಬೇಕು ಎನ್ನುವ ಆಸೆ ಈಗಿನ ಮಿಡಲ್ ಕ್ಲಾಸ್ ಮಂದಿಯದ್ದು. ರಿಯಾಲಿಟಿ ಶೋಗಳನ್ನು ಟಿ.ವಿ.ಯಲ್ಲಿ ನೋಡಿ ಆಕರ್ಷಿತರಾಗಿ ಆ ಶೋಗಳ ಕುರಿತು ಏನೇನೋ ಕಲ್ಪನೆ, ಆಶಾವಾದಗಳನ್ನು ಇಟ್ಟುಕೊಂಡಿರುತ್ತಾರೆ. ತೆರೆಯ ಮೇಲೆ ತೋರಿಸುವ ವೈಭವವನ್ನು, ಸಂಭ್ರಮವನ್ನು ಕಂಡು ಮರುಳಾಗುತ್ತಾರೆ. ಆದರೆ, ಇವುಗಳ ವಾಸ್ತವ ಮುಖವೇ ಬೇರೆಯಿದೆ.
ಭಾರತದ ಮೂಲೆ ಮೂಲೆಗಳಿಂದ ಮಕ್ಕಳನ್ನು ಆರಿಸಿ ತಂದು, ಅವರ ಪಾಲಕರ ಸಹಿತ ಮುಂಬೈನ ಚೀಪ್ ಹೋಟೆಲ್ಲುಗಳಲ್ಲಿ ಇಳಿಸಿಕೊಳ್ಳುತ್ತಾರೆ. ಪ್ರತಿದಿನ ಮುಂಜಾನೆ ಅವರನ್ನು ರಿಹರ್ಸಲ್‌ಗಾಗಿ ಸ್ಟುಡಿಯೋಗೆ ಕರೆದೊಯ್ಯುತ್ತಾರೆ. ಈ ಮಕ್ಕಳು ತಮ್ಮ ದೈನಂದಿನ ಚಟುವಟಿಕೆಗಳಿಂದ ವಂಚಿತರಾಗುತ್ತಾರೆ. ಅವರ ತಲೆಯಲ್ಲಿ ಪ್ರಶಸ್ತಿ ಗೆಲ್ಲುವುದೊಂದನ್ನೇ ತುಂಬಲಾಗುತ್ತದೆ. ಸಮಯದ ಪರಿವೇ ಇಲ್ಲದಂತೆ ಶೂಟಿಂಗ್ ಮಾಡುತ್ತಾರೆ. ಊಟ ತಿಂಡಿ ನಿದ್ದೆ ಇವ್ಯಾವುದನ್ನೂ ಲೆಕ್ಕಿಸದೆ ಮಕ್ಕಳು ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಾರೆ.
ನಾನೊಮ್ಮೆ ಮ್ಯಾಗಿ ನೂಡಲ್ಸ್ ಜಾಹೀರಾತನ್ನು ಚಿತ್ರೀಕರಿಸುತ್ತಿದ್ದೆ. ಆಗ ರಾತ್ರಿಯಾಗಿತ್ತು. ಮುಖ್ಯ ಪಾತ್ರಧಾರಿಯಾಗಿದ್ದ ಮಗು ನಿದ್ದೆ ಮಾಡಿಬಿಟ್ಟಿತು. ನಾವೆಲ್ಲರೂ ಶೂಟಿಂಗ್‌ಗೆ ತಯಾರಾಗಿ ನಿಂತಿದ್ದು ಕಂಡು ಮಗುವಿನ ತಾಯಿ ಮಗುವನ್ನು ಎಬ್ಬಿಸಲು ನೋಡಿದಳು. ನಾನು ಆಕೆ ಬಳಿ ತೆರಳಿ ಮಗು ಮಲಗಲಿ, ನಾಳೆ ಶೂಟಿಂಗ್ ಮಾಡಿದರಾಯಿತು ಎಂದು ಪ್ಯಾಕಪ್ ಹೇಳಿದೆ.
ಎಲ್ಲ ರಿಯಾಲಿಟಿ ಶೋಗಳಿಂದಲೂ ಮಕ್ಕಳ ನೆಮ್ಮದಿ ಬಲಿಯಾಗುತ್ತಿದೆ. ಸರಕಾರ ಈ ಕುರಿತು ಕಾನೂನನ್ನು ರೂಪಿಸಬೇಕಾಗಿದೆ. ಮಕ್ಕಳನ್ನು ಹೆಚ್ಚು ಸಮಯ ಶೂಟಿಂಗ್‌ನಲ್ಲಿ ದುಡಿಸಿಕೊಳ್ಳದಂತೆ ಎಚ್ಚರವಹಿಸುವುದು ವಾಹಿನಿಗಳ ಜವಾಬ್ದಾರಿಯೂ ಆಗಬೇಕಿದೆ. ನಾನು ಮಕ್ಕಳ ಫಿಲಂ ಸೊಸೈಟಿಯ ಕಾರ್ಯಾಧ್ಯಕ್ಷನಾಗಿದ್ದಾಗ ಮಕ್ಕಳನ್ನು ಐದಾರು ಗಂಟೆಗಳಿಗಿಂತ ಹೆಚ್ಚಾಗಿ ಕೆಲಸ ಮಾಡಿಸಿಕೊಳ್ಳುವಂತಿಲ್ಲ ಎಂಬ ನಿಯಮ ರೂಪಿಸಿದ್ದೆ. ಅದನ್ನೂ ಈಗ ಎಲ್ಲರೂ ಬದಿಗೊತ್ತಿದ್ದಾರೆ.
ಮಕ್ಕಳ ಮೇಲೆ ಒತ್ತಡ ಹೇರಬಾರದು. ಅವರಿಗೆ ಒತ್ತಡವನ್ನು ಹ್ಯಾಂಡಲ್ ಮಾಡುವ ಸಾಮರ್ಥಯ ಇರೋದಿಲ್ಲ. ಒಬ್ಬ ಕುರುಡ ಹುಡುಗ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಫೈನಲ್ಸ್ ಪ್ರವೇಶಿಸಿದ್ದ. ಮಧ್ಯಾಹ್ನ ರೆಕಾರ್ಡಿಂಗ್ ಇತ್ತು. ಬೆಳಗ್ಗಿನಿಂದ ರಿಹರ್ಸಲ್ ಮಾಡಿಸುತ್ತಿದ್ದರು. ಮಧ್ಯಾಹ್ನ ರೆಕಾರ್ಡಿಂಗ್ ಸಮಯ ಹತ್ತಿರ ಬಂದಾಗ ಅವನ ದನಿ ಕೈಕೊಟ್ಟಿತು. ಆ ಮುಗ್ಧ ಹುಡುಗನಿಗೆ ಪ್ರಪಂಚವೇ ಮುಳುಗಿ ಹೋದಷ್ಟು ಆಘಾತವಾಯಿತು. ಗಳಗಳನೆ ಅತ್ತುಬಿಟ್ಟ. ಆ ಮಟ್ಟಿಗಿನ ಒತ್ತಡ ಇರುತ್ತದೆ, ಅಲ್ಲಿ. ಮಕ್ಕಳನ್ನು ದೇವರು ಅಂತ ಹೇಳುತ್ತಾರೆ. ದೇವರನ್ನು ಈ ರೀತಿ ನಡೆಸಿಕೊಳ್ಳುವುದು ಎಷ್ಟು ಸರಿ?
– ಅಮೋಲ್ ಗುಪ್ಟೆ, ಹಿಂದಿ ಚಿತ್ರ ನಿರ್ದೇಶಕ