Advertisement

ಚಿಕ್ಕಮಗಳೂರು: 436 ಗ್ರಾಮಗಳಲ್ಲಿ ಕುಡಿವ ನೀರಿನ ಅಭಾವ

05:24 PM May 08, 2024 | Team Udayavani |

ಉದಯವಾಣಿ ಸಮಾಚಾರ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅಂರ್ತಜಲ ಮಟ್ಟ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಚಿಕ್ಕಮಗಳೂರು ತಾಲೂಕು ಹೊರತುಪಡಿಸಿ ಉಳಿದ ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲಾಗಿದೆ. 436 ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯತ್ಮಾಕ ಗ್ರಾಮಗಳು ಎಂದು ಗುರುತಿಸಲಾಗಿದೆ. ನೀರಿನ ಅಭಾವ ಸೃಷ್ಟಿಯಾಗಲು ಅನೇಕ ಕಾರಣಗಳಿವೆ. ಅವುಗಳಲ್ಲಿ ಜಿಲ್ಲೆಯಲ್ಲಿ ಎಗ್ಗಿಲ್ಲದೆ ತಲೆ ಎತ್ತುತ್ತಿರುವ ಅಡಕೆ ತೋಟಗಳು ಒಂದು ಕಾರಣ ಎನ್ನಲಾಗುತ್ತಿದೆ.

Advertisement

ಜಿಲ್ಲೆಯ ಕಡೂರು, ತರೀಕೆರೆ ಹಾಗೂ ಅಜ್ಜಂಪುರ ತಾಲೂಕು ವ್ಯಾಪ್ತಿಯಲ್ಲಿ ಸಾವಿರ ಅಡಿಗಳಷ್ಟು ಕೊಳವೆ ಬಾವಿ ತೋಡಿದರೂ ನೀರು ಲಭ್ಯವಾಗುತ್ತಿಲ್ಲ. ನೀರಿನ ಅಭಾವಕ್ಕೂ ಅಡಕೆ ಬೆಳೆಗೂ ಏನು ಸಂಬಂಧವೆಂಬ ಪ್ರಶ್ನೆ ಮೂಡಬಹುದು. ಅಡಕೆ ಬೆಳೆಗೆ ಯಥೇಚ್ಚವಾಗಿ ನೀರು ಬೇಕಾಗುತ್ತದೆ. ಈ ಕಾರಣದಿಂದ ಬಯಲುಸೀಮೆ ಭಾಗದಲ್ಲಿ ಎಗ್ಗಿಲ್ಲದೆ ಕೊಳವೆ ಬಾವಿಯನ್ನು ಕೊರೆಸಿ ನೀರು ಎತ್ತಲಾಗುತ್ತದೆ. ಇದರಿಂದ ನೀರಿನ ಅಭಾವ ಉಂಟಾಗಲು ಕಾರಣವಿರಬಹುದು ಎಂದು ಹೇಳಲಾಗುತ್ತಿದೆ.

ಕಳೆದ ಅನೇಕ ವರ್ಷಗಳ ಹಿಂದೆ ಜಿಲ್ಲೆಯ ಶೃಂಗೇರಿ, ನರಸಿಂಹರಾಜಪುರ, ಮೂಡಿಗೆರೆ ಮಲೆನಾಡು ಭಾಗದಲ್ಲಿ ಮಾತ್ರ ಅಡಕೆ
ಬೆಳೆಯಲಾಗುತ್ತಿತ್ತು. ಅಡಕೆ ದರ ಗಗನಕ್ಕೆ ಏರುತ್ತಿದ್ದಂತೆ ಜಿಲ್ಲೆಯ ಕಡೂರು, ತರೀಕೆರೆ, ಅಜ್ಜಂಪುರ ಹಾಗೂ ಚಿಕ್ಕಮಗಳೂರು ಬಹುತೇಕ ಭಾಗದಲ್ಲಿ ಅಡಕೆ ಕಾಲಿಟ್ಟಿತ್ತು. ಸದ್ಯ ಎಲ್ಲೇ ಕಣ್ಣು ಹಾಯಿಸಿದರೂ ಅಡಕೆ ತೋಟಗಳೇ ಕಾಣಿಸುತ್ತಿವೆ.

ಈ ಹಿಂದೆ ಬಯಲುಸೀಮೆ ಭಾಗದಲ್ಲಿ ಅಡಕೆ ಹೊರತುಪಡಿಸಿ ಬೇರೆ ಬೇರೆ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಆದರೆ ಅಡಕೆ ಲಾಭದಾಯಕ ಎಂಬ ಕಾರಣಕ್ಕಾಗಿ ಬೇರೆ ಬೆಳೆಗಳನ್ನು ಕೈಬಿಟ್ಟು ಅಡಕೆ ಬೆಳೆಯಲಾಗುತ್ತಿದೆ. ಈ ಹಿಂದೆ ಜಿಲ್ಲೆಯಲ್ಲಿ 50,830 ಹೆಕ್ಟೇರ್‌ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿತ್ತು. ಪ್ರಸ್ತುತ 77,404 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಅಡಕೆ ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಅಗತ್ಯವಿದ್ದು ಕೊಳವೆ ಬಾವಿಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಪ್ರಸ್ತುತ ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ 7,748 ಹೆಕ್ಟೇರ್‌, ಚಿಕ್ಕಮಗಳೂರು 5,511, ಕಡೂರು 11,306, ಕೊಪ್ಪ 9,375, ಕಳಸ 5,885, ಮೂಡಿಗೆರೆ 6,567, ನರಸಿಂಹರಾಜಪುರ 5,980, ಶೃಂಗೇರಿ 4,300, ತರೀಕೆರೆ 21,614 ಹೆಕ್ಟೇರ್‌ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಈ ಪ್ರಮಾಣದಲ್ಲಿ ಅಡಕೆ ಬೆಳೆ ಪ್ರದೇಶ ಏರಿಕೆ ಕಂಡಿದ್ದು ಕೂಡ ನೀರಿನ ಕೊರತೆಗೆ ಕಾರಣವಾಗುತ್ತಿದೆ ಎನ್ನಲಾಗುತ್ತಿದೆ. ನೀರಿನ ಕೊರತೆ ಎದುರಾಗಲು ಹವಾಮಾನದಲ್ಲಿನ ವೈಪರೀತ್ಯ, ವಾತಾವರಣದಲ್ಲಿನ ತಾಪಮಾನ ಏರಿಕೆ,
ಮೀತಿ ಮೀರಿದ ಕೊಳವೆ ಬಾವಿ, ಕೆರೆಕಟ್ಟೆಗಳಲ್ಲಿ ಹೂಳು ತುಂಬಿರುವುದು, ಒತ್ತುವರಿಯಾಗಿರುವುದು, ಮಳೆ ನೀರು ಇಂಗಲು ಸಾಧ್ಯವಾಗದಿರುವುದು ಹೀಗೆ ಹತ್ತಾರು ಕಾರಣಗಳಿವೆ. ಇವುಗಳ ನಡುವೆ ಅಡಕೆ ಬೆಳೆಗೆ ಅತಿಯಾದ ನೀರು ಬೇಕಾಗುವುದು ಒಂದು
ಕಾರಣ ಎನ್ನಲಾಗುತ್ತಿದೆ. ಅಡಕೆ ತೋಟ ಇದೇ ಪರಿಯಲ್ಲಿ ಹೆಚ್ಚಳಗೊಳ್ಳುತ್ತಿದ್ದರೆ ಮುಂದಿನ ದಿನಗಳಲ್ಲಿ ಅಡಕೆ ಧಾರಣೆ ಕಳೆದುಕೊಳ್ಳುವ ಜತೆಗೆ ನೀರಿನ ಅಭಾವ ಇನ್ನಷ್ಟು ಸೃಷ್ಟಿಸುವ ಸಂಭವ ಇದೆ. ಈ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಕಡಿಮೆ ನೀರಿನಲ್ಲಿ ಲಾಭದಾಯಕ ಬೆಳೆಗಳನ್ನು ಪರಿಚಯಿಸುವ ಅಗತ್ಯವಿದೆ.

Advertisement

ಮಲೆನಾಡು ಭಾಗದಲ್ಲಿ ಅಡಕೆ ಬೆಳೆಗೂ ಕಂಟಕ ಎದುರಾಗಿದೆ. ಎಲೆಚುಕ್ಕಿ ರೋಗ, ಹಳದಿ ಎಲೆರೋಗ, ಕೊಳೆರೋಗ ಬಾಧೆಯಿಂದ ಅಡಿಕೆ ತೋಟಗಳು ನಶಿಸುತ್ತಿವೆ. ಅದೇ ಪ್ರಮಾಣದಲ್ಲಿ ಬಯಲುಸೀಮೆ ಭಾಗದಲ್ಲಿ ಅಡಕೆ ತೋಟಗಳು
ವೇಗಗತಿಯಲ್ಲಿ ಹೆಚ್ಚಳಗೊಳ್ಳುತ್ತಿವೆ. ಬಯಲುಸೀಮೆ ಭಾಗದಲ್ಲಿ ಮೊದಲೇ ನೀರಿನ ಲಭ್ಯತೆ ಕಡಿಮೆ ಇದೆ. ಇದರ ಜತೆಗೆ ಅಡಕೆಗೆ
ಅ ಧಿಕ ನೀರಿನ ಲಭ್ಯತೆ ಬೇಕಾಗಿದ್ದು, ಮುಂದಿನ ದಿನಗಳಲ್ಲಿ ನೀರಿನ ಕೊರತೆ ಇನ್ನಷ್ಟು ಹೆಚ್ಚಳಗೊಳ್ಳುವ ಸಾಧ್ಯತೆಯೂ ಇದೆ.

ಜಿಲ್ಲೆಯಲ್ಲಿ ಅಡಕೆ ಬೆಳೆಯ ಪ್ರಮಾಣ ಹೆಚ್ಚಳಗೊಳ್ಳುತ್ತಿದೆ. ಅಡಕೆ ಬೆಳೆಗೆ ನೀರು ಜಾಸ್ತಿ ಪ್ರಮಾಣದಲ್ಲಿ ಬೇಕಾಗುತ್ತದೆ. ಜತೆಗೆ ಪ್ರತೀ ರೈತರು ಅಡಕೆ ಬೆಳೆ ಉಳಿಸಿಕೊಳ್ಳಲು ಮೂರರಿಂದ ನಾಲ್ಕು ಕೊಳವೆಬಾವಿಗಳನ್ನು ಕೊರೆಸುತ್ತಿದ್ದು ಕೊಳವೆಬಾವಿಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ಸಾವಿರ ಅಡಿ ಅಳದವರೆಗೂ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಅಡಕೆಗೆ ನೀರಿನ ಪ್ರಮಾಣ ಹೆಚ್ಚಿಗೆ ಬೇಕಾಗುವುದರಿಂದ ಅಡಕೆ ಬದಲಿಗೆ ರೈತರಿಗೆ ಬೇರೆ ಲಾಭದಾಯಕ ಬೆಳೆಯನ್ನು ಪರಿಚಯಿಸುವ ಅಗತ್ಯವಿದೆ.

■ ಸಂದೀಪ ಜಿ.ಎನ್‌.ಶೇಡ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next