ರಾಯ್ ಪುರ: ಛತ್ತೀಸ್‌ಗಢದ ನೂತನ ಮುಖ್ಯಮಂತ್ರಿಯಾಗಿ ಬುಡಕಟ್ಟು ನಾಯಕ ವಿಷ್ಣು ದೇವ್ ಸಾಯಿ ಅವರನ್ನು ಆಯ್ಕೆ ಮಾಡಿದ ಕೆಲವೇ ಗಂಟೆಗಳ ನಂತರ ಬಿಜೆಪಿ ನಾಯಕರಾದ ವಿಜಯ್ ಶರ್ಮ ಮತ್ತು ಅರುಣ್ ಸಾವೊ ಅವರನ್ನು ಭಾನುವಾರ ಛತ್ತೀಸ್‌ಗಢದ ನೂತನ ಉಪಮುಖ್ಯಮಂತ್ರಿಗಳಾಗಿ ಬಿಜೆಪಿ ಹೆಸರಿಸಿದೆ.
ಮಹತ್ವದ ಬೆಳವಣಿಗೆಯಲ್ಲಿ, 2003 ರಿಂದ 2018 ರವರೆಗೆ ಮೂರು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ರಮಣ್ ಸಿಂಗ್ ಅವರು ಛತ್ತೀಸ್ ಗಢ ವಿಧಾನಸಭೆಯ ಸ್ಪೀಕರ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿಯಾಗಿ ಬಿಜೆಪಿ ಹೆಸರಿಸಿದ ಬೆನ್ನಲ್ಲೇ ವಿಷ್ಣು ದೇವ್ ಸಾಯಿ ಅವರು ರಾಜ್ಯಪಾಲ ಬಿಸ್ವಭೂಷಣ ಹರಿಚಂದನ್ ಅವರನ್ನು ರಾಜಭವನದಲ್ಲಿ ಭೇಟಿಯಾಗಿ ಸರಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.
“ಬಿಜೆಪಿ ಯಾವಾಗಲೂ ಬುಡಕಟ್ಟು ಸಮುದಾಯವನ್ನು ಗೌರವಿಸುತ್ತದೆ.ಆದಿವಾಸಿಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ರಚಿಸಿದ್ದು ಬಿಜೆಪಿಯೇ. ರಾಜ್ಯದಲ್ಲಿ ನಡೆದಿರುವ ಎಲ್ಲಾ ಅಕ್ರಮಗಳ ಬಗ್ಗೆ ವಿಚಾರಣೆ ಮತ್ತು ತನಿಖೆ ನಡೆಸಲಾಗುವುದು” ಎಂದು ವಿಷ್ಣು ದೇವ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ದೊಡ್ಡ ಸಾಧನೆ ಎಂದ ಮಾಜಿ ಸಿಎಂ
ಛತ್ತೀಸ್‌ಗಢದ ಮಾಜಿ ಸಿಎಂ ರಮಣ್ ಸಿಂಗ್ ಅವರು ಪ್ರತಿಕ್ರಿಯಿಸಿ, ”ಅರ್ಹ ಅಭ್ಯರ್ಥಿಗೆ ಸಿಎಂ ಜವಾಬ್ದಾರಿ ನೀಡಿದ್ದು ದೊಡ್ಡ ಸಾಧನೆ.ವಿಷ್ಣು ದೇವ್ ಸಾಯಿ ಹೊಸ ಅವಕಾಶದೊಂದಿಗೆ ಖಂಡಿತಾ ಯಶಸ್ವಿಯಾಗುತ್ತಾರೆ.ಪಕ್ಷದಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ನಿರ್ಧಾರವಾಗಿದೆ.ಎರಡು ಉಪಮುಖ್ಯಮಂತ್ರಿ ಹುದ್ದೆಗಳನ್ನು ನಿರ್ಧರಿಸಲಾಗಿದ್ದು, ಸ್ಪೀಕರ್ ಹುದ್ದೆ ಸೇರಿ ಯಾವುದೇ ಜವಾಬ್ದಾರಿ ನೀಡಿದರೂ ಈಡೇರಿಸಲಾಗುವುದು” ಎಂದು ಹೇಳಿದ್ದಾರೆ.