Advertisement

Chhattisgarh: ನಕ್ಸಲ್‌ಮುಕ್ತ ರಾಜ್ಯದ ಭರವಸೆ- ಕೇಂದ್ರ ಸಚಿವ ಅಮಿತ್‌ ಶಾ

09:55 PM Oct 19, 2023 | Team Udayavani |

ನವದೆಹಲಿ: “ಕಾಂಗ್ರೆಸ್‌ ಸದಾ ನಕ್ಸಲ್‌ವಾದಕ್ಕೆ ಬೆಂಬಲ ನೀಡುತ್ತಾ ಬಂದಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ 9 ವರ್ಷಗಳ ಆಡಳಿತಾವಧಿಯಲ್ಲಿ ನಕ್ಸಲ್‌ ಹಿಂಸಾಚಾರ ಶೇ.52ರಷ್ಟು ಇಳಿಮುಖವಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

Advertisement

ಛತ್ತೀಸ್‌ಗಡದ ಜಗದಲ್ಪುರದಲ್ಲಿ ಗುರುವಾರ ಚುನಾವಣಾ ಪ್ರಚಾರ ರ್ಯಾಲಿ ನಡೆಸಿ ಮಾತನಾಡಿದ ಅವರು, ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದರೆ, ನಾವು ಇಡೀ ರಾಜ್ಯವನ್ನು ನಕ್ಸಲ್‌ವುುಕ್ತ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ. ಛತ್ತೀಸ್‌ಗಡದ ಜನರು ಈ ಬಾರಿ 3 ಸಲ ದೀಪಾವಳಿ ಆಚರಿಸಲಿದ್ದಾರೆ. ಒಂದು ಹಬ್ಬದ ದಿನ, ಮತ್ತೂಂದು ಡಿ.3ಕ್ಕೆ ಬಿಜೆಪಿ ಅಧಿಕಾರಕ್ಕೇರಿದ ದಿನ ಹಾಗೂ ಜನವರಿಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ದಿನ ಎಂದೂ ಶಾ ಹೇಳಿದ್ದಾರೆ.

ಜಾತಿಗಣತಿ ಬಗ್ಗೆ ಮೌನವೇಕೆ?
ಇನ್ನು, ಚುನಾವಣೆ ಹೊಸ್ತಿಲಲ್ಲಿರುವ ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್‌ಎಸ್‌ ಮುಖ್ಯಸ್ಥ ಕೆ.ಚಂದ್ರಶೇಖರ್‌ ರಾವ್‌ ಅವರಿಗೆ ಹೊಸ ಸವಾಲು ಹಾಕಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, “ಜಾತಿಗಣತಿ ಬಗ್ಗೆ ನಿಮ್ಮ ಮೌನವೇಕೆ’ ಎಂದು ಪ್ರಶ್ನಿಸಿದ್ದಾರೆ. ತೆಲಂಗಾಣದ ಭೂಪಲ್‌ಪಳ್ಳಿಯಲ್ಲಿ ರ್ಯಾಲಿ ನಡೆಸಿ ಮಾತನಾಡಿದ ಅವರು, ನಾವು ಅಧಿಕಾರಕ್ಕೇರಿದರೆ ರಾಜ್ಯದಲ್ಲಿ ಜಾತಿಗಣತಿ ಮಾಡುತ್ತೇವೆ. ಕೆಸಿಆರ್‌ ಕುಟುಂಬವು ತೆಲಂಗಾಣವನ್ನು ಎಷ್ಟು ಲೂಟಿ ಮಾಡಿದೆ ಎಂಬುದು ಜಾತಿಗಣತಿಯಿಂದ ಹೊರಬೀಳುತ್ತದೆ ಎಂದಿದ್ದಾರೆ. ಜತೆಗೆ, ಕೆಸಿಆರ್‌ ಮತ್ತು ಪ್ರಧಾನಿ ಮೋದಿ ಬಂದು ಭಾಷಣ ಮಾಡುವಾಗ, ಜಾತಿಗಣತಿ ಯಾವಾಗ ಮಾಡುತ್ತೀರಿ ಎಂದು ನೀವೆಲ್ಲ ಪ್ರಶ್ನಿಸಬೇಕು ಎಂದೂ ಹೇಳಿದ್ದಾರೆ.

ನಾನು ಬಿಟ್ಟರೂ, “ಸಿಎಂ ಹುದ್ದೆ” ನನ್ನನ್ನು ಬಿಡುತ್ತಿಲ್ಲ!
“ನಾನು ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಲು ಸಿದ್ಧನಿದ್ದೇನೆ. ಆದರೆ, ನನ್ನನ್ನು ಬಿಟ್ಟುಕೊಡಲು ಆ ಹುದ್ದೆ ಸಿದ್ಧವಿಲ್ಲ. ಭವಿಷ್ಯದಲ್ಲೂ ಅದು ನನ್ನನ್ನು ಬಿಟ್ಟುಕೊಡಲಿಕ್ಕಿಲ್ಲ.” ಹೀಗೆಂದು ಹೇಳಿದ್ದು ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌. ಗುರುವಾರ ಮಾತನಾಡಿದ ಅವರು, ಪಕ್ಷದ ನಾಯಕತ್ವ ಕೈಗೊಳ್ಳುವ ಯಾವುದೇ ನಿರ್ಧಾರವನ್ನೂ ಸ್ವಾಗತಿಸುತ್ತೇನೆ ಎಂದೂ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಟಿಕೆಟ್‌ ವಿಚಾರದಲ್ಲಿ ಪಕ್ಷದೊಳಗೆ ಯಾವುದೇ ಭಿನ್ನಮತ ಇಲ್ಲ ಎಂದೂ ಹೇಳಿದ್ದಾರೆ.

ಗೆಲುವಿಗಾಗಿ ಮಾಟ-ಮಂತ್ರ
ಬಿಜೆಪಿಯು ಮತ ಯಾಚನೆಗೆ ಜನರ ಬಳಿಗೆ ಹೋಗುತ್ತಿದ್ದರೆ, ಕೆಲವರು “ಮಾಟ ಮಂತ್ರ’ದ ಮೊರೆ ಹೋಗುತ್ತಿದ್ದಾರೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಆರೋಪಿಸಿದ್ದಾರೆ. ಉಜ್ಜೆ„ನ್‌ನ ಚಿತಾಗಾರವೊಂದರಲ್ಲಿ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಕಮಲ್‌ನಾಥ್‌ ಅವರ ಫೋಟೋವನ್ನು ಇಟ್ಟು ತಾಂತ್ರಿಕ ವಿಧಿವಿಧಾನಗಳನ್ನು ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಬೆನ್ನಲ್ಲೇ ಚೌಹಾಣ್‌ರಿಂದ ಈ ಹೇಳಿಕೆ ಹೊರಬಿದ್ದಿದೆ. ನಾವು ಜನರನ್ನು ತಲುಪಿ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡುತ್ತಿದ್ದರೆ, ಕೆಲವರು ಸ್ಮಶಾನದಲ್ಲಿ ತಾಂತ್ರಿಕ ಕ್ರಿಯೆಗಳನ್ನು ನಡೆಸುತ್ತಿದ್ದಾರೆ. ಇದೇನಾ ಪ್ರಜಾಪ್ರಭುತ್ವ? ಪ್ರಜಾಪ್ರಭುತ್ವದಲ್ಲಿ ಪ್ರಜೆಗಳನ್ನು ಪೂಜಿಸಬೇಕು. ಅವರ ಸೇವೆ ಮಾಡುತ್ತಾ, ವಿಶ್ವಾಸ ಗಳಿಸಿ ಗೆಲುವು ಸಾಧಿಸಬೇಕು ಎಂದೂ ಅವರು ಹೇಳಿದ್ದಾರೆ. ಇದೇ ವೇಳೆ ಪ್ರಚಾರಕ್ಕಾಗಿ ಹೈಟೆಕ್‌ ವ್ಯಾನ್‌ಗಳನ್ನೂ ಚೌಹಾಣ್‌ ಭೋಪಾಲ್‌ನಲ್ಲಿ ಉದ್ಘಾಟಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next