Advertisement

ಚೆಸ್‌: ಬಸ್ರೂರಿನ ಸಮರ್ಥ್ ವಿಶ್ವ ಚಾಂಪಿಯನ್‌

03:45 AM Jul 02, 2017 | Team Udayavani |

ಉಡುಪಿ: ಕುಂದಾಪುರ ತಾಲೂಕಿನ ಬಸ್ರೂರು ಮೂಲದ ಸಮರ್ಥ್ ಜೆ. ರಾವ್‌ ಅವರು ಅಮೆರಿಕದ ಫ್ಲೋರಿಡಾದಲ್ಲಿ ನಡೆದ ದೈಹಿಕ ನ್ಯೂನ್ಯತೆಯುಳ್ಳವರ ಜೂನಿಯರ್‌ ವಿಭಾಗದ ಪ್ರಥಮ ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 

Advertisement

ಇತ್ತೀಚೆಗಷ್ಟೇ ಸ್ಲೊವಾಕಿಯಾದಲ್ಲಿ ನಡೆದ ದೈಹಿಕ ಅಸಮರ್ಥರ ಟೂರ್ನಿಯಲ್ಲಿ ಚಿನ್ನ ಹಾಗೂ ಕಂಚಿನ ಪದಕ ಗೆದ್ದಿದ್ದ ಸಮರ್ಥ್ ಅವರು ಫ್ಲೋರಿಡಾದಲ್ಲಿ ಜೂ. 22 ರಿಂದ 29 ರವರೆಗೆ ನಡೆದ ಈ ಪಂದ್ಯಾವಳಿಯಲ್ಲಿ ಆಡಿರುವ 7 ಪಂದ್ಯಗಳಲ್ಲಿ ಆರನ್ನು ಗೆದ್ದು ಅಗ್ರಸ್ಥಾನ ಪಡೆಯುವುದರೊಂದಿಗೆ ವಿಶ್ವ ಚಾಂಪಿಯನ್‌ ಆಗಿ ಮೂಡಿಬಂದಿದ್ದಾರೆ. ಸ್ಪರ್ಧೆಯಲ್ಲಿ ಭಾರತ ಮಾತ್ರವಲ್ಲದೆ ಬೆಲ್ಜಿಯಂ, ಜರ್ಮನಿ, ಪೆರುಗ್ವೆ, ಉಗಾಂಡ, ಪೋಟೋìರಿಕ ಹಾಗೂ ಆತಿಥೇಯ ಅಮೆರಿಕಾದ ಸ್ಪರ್ಧಿಗಳು ಪಾಲ್ಗೊಂಡಿದ್ದರು. 

ಈ ಗೆಲುವಿನೊಂದಿಗೆ 53 ಪಾಯಿಂಟ್‌, ಸ್ಲೊವಾಕಿಯಾದಲ್ಲಿ 131 ಪಾಯಿಂಟ್‌ ಸಿಕ್ಕಿದ್ದು, ಇದರೊಂದಿಗೆ ಸಮರ್ಥ್ ಅವರ ಒಟ್ಟು ಅಂಕ ಗಳಿಕೆ 1579ಕ್ಕೆ ಏರಿದೆ. 2015ರಲ್ಲಿ  ಸ್ಲೋವಾಕಿಯಾ ಹಾಗೂ 2016ರಲ್ಲಿ ಸೆರ್ಬಿಯದಲ್ಲಿ ನಡೆದ ಅಂತಾರಾಷ್ಟ್ರೀಯ ಅಸಮರ್ಥರ ಚೆಸ್‌ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಕಂಚಿನ ಪದಕ  ಪಡೆದಿದ್ದರು.
 
ಆಲ್‌ ಇಂಡಿಯಾ ಚೆಸ್‌ ಫ‌ಡೆರೇಶನ್‌ ಆಫ್ ಇಂಡಿಯಾ, ದೈಹಿಕ ನ್ಯೂನ್ಯತೆಯುಳ್ಳ ಚೆಸ್‌ ಆಟಗಾರರ ಸಂಘಟನೆ, ಕೇಂದ್ರದ ಕ್ರೀಡಾ ಪ್ರಾಧಿ ಕಾರ ಹಾಗೂ ಮಿಯಾಮದ ನಂದಿ ಕನ್ನಡ ಕೂಟ ಅವರು ಈ ಬಾರಿ ನೆರವು ನೀಡಿದ್ದರು ಎಂದು ತಂದೆ ಜಗದೀಶ್‌ ರಾವ್‌ ತಿಳಿಸಿದರು. 

ತಂದೆ ಜಗದೀಶ್‌ ಹೊನ್ನಾವರದ ಸಿಂಡಿಕೇಟ್‌ ಬ್ಯಾಂಕ್‌ ಉದ್ಯೋಗಿ, ತಾಯಿ ವಿನುತಾ ಕಾಲೇಜು ಉಪನ್ಯಾಸಕಿ. ಸಮರ್ಥ್ ಹೊನ್ನಾವರದ ಎಸ್‌ಡಿಎಂ ಪ. ಪೂ. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಲಿಯುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next