ಸಾಗರ: ಕೈವಲ್ಯ ಮಠಾಧೀಶರಾದ ಶಿವಾನಂದ ಸರಸ್ವತಿ ಸ್ವಾಮೀಜಿಯವರು ಸಾಗರದ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಜು. 13 ರಿಂದ ಚಾತುರ್ಮಾಸ ವ್ರತ ಕೈಗೊಳ್ಳಲಿದ್ದಾರೆ ಎಂದು ಸಿರಿವಂತೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಸ್.ಜಿ. ಶ್ಯಾನಭಾಗ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾತುರ್ಮಾಸ ಸಂದರ್ಭದಲ್ಲಿ ಗುರುಪೂಜೆ ಮಾಡುವುದು ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಪುಣ್ಯದ ಕೆಲಸ ಎಂದು ಹೇಳಿದರು.
ಪೂಜ್ಯ ಶ್ರೀಗಳು ಎರಡು ತಿಂಗಳ ಕಾಲ ಸಾಗರದಲ್ಲಿಯೇ ಮೊಕ್ಕಾಂ ಹೂಡುವುದರಿಂದ ಗುರುಸೇವೆ ಮತ್ತು ಗುರುದರ್ಶನ ಮಾಡಲು ಅವಕಾಶ ಇರುತ್ತದೆ. ಚಾರ್ತುಮಾಸ ಅಂಗವಾಗಿ ಜು. ೧೩ರಂದು ಸಂಜೆ ೬ಕ್ಕೆ ಸಭಾ ಕಾರ್ಯಕ್ರಮ ಇರುತ್ತದೆ. ಸಭಾ ಕಾರ್ಯಕ್ರಮಕ್ಕೆ ಶಿವಾನಂದ ಸರಸ್ವತಿ ಸ್ವಾಮಿಗಳು ಚಾಲನೆ ನೀಡಲಿದ್ದು, ಮೈಸೂರಿನ ಉದ್ಯಮಿ ಜಗನ್ನಾಥ್ ಶೆಣೈ ಉಪಸ್ಥಿತರಿರುವರು. ಚಾತುರ್ಮಾಸದ ಅಂಗವಾಗಿ ಜು. 18 ರಿಂದ ಜು. 25 ರವರೆಗೆ ಒಂದು ವಾರಗಳ ಕಾಲ 168 ಘಂಟೆಗಳ ಭಜನಾ ಸಪ್ತಾಹ ಏರ್ಪಡಿಸಲಾಗಿದೆ. ಮುಂಬೈ, ಬೆಂಗಳೂರು, ಮಂಗಳೂರು ಸೇರಿದಂತೆ ಒಟ್ಟು 68 ತಂಡಗಳು ರಾಜ್ಯ ಮತ್ತು ಹೊರರಾಜ್ಯದ ಭಜನಾ ತಂಡಗಳು ಪಾಲ್ಗೊಳ್ಳಲಿದೆ ಎಂದರು.
ಚಾತುರ್ಮಾಸ ಯಶಸ್ಸಿಗಾಗಿ ಸಮಾಜದ ಪ್ರಮುಖರನ್ನು ಒಳಗೊಂಡ 12 ಸಮಿತಿಗಳನ್ನು ರಚಿಸಲಾಗಿದೆ. ಪ್ರತಿದಿನ ರಾತ್ರಿ 9 ರಿಂದ 11 ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೆ. 11 ರಂದು ಗಣೇಶೋತ್ಸವವನ್ನು ವಿಶೇಷವಾಗಿ ಶ್ರೀಗಳ ಸಮ್ಮುಖದಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ. ಸೆ. 17 ಕ್ಕೆ ಶ್ರೀಗಳ ಸಮಾಜ ಬಾಂಧವರ ಮನೆಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ರಾಜಬೀದಿ ಉತ್ಸವ ಏರ್ಪಡಿಸಲಾಗಿದೆ. ಪ್ರತಿದಿನ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಇರುತ್ತದೆ. ಪ್ರತಿದಿನ ಉಪಹಾರ ಮತ್ತು ಊಟದ ವ್ಯವಸ್ಥೆ ಇರುತ್ತದೆ ಎಂದರು.
ಸಮಾಜದ ಉಪಾಧ್ಯಕ್ಷ ಸುನೀಲ್ ಗಾಯ್‌ತೊಂಡೆ ಮಾತನಾಡಿ, ಲೋಕಕಲ್ಯಾಣಾರ್ಥವಾಗಿ ಶ್ರೀಗಳು ಚಾತುರ್ಮಾಸ ವೃತ ಕೈಗೊಳ್ಳಲಿದ್ದಾರೆ. ಗಣೇಶ ಹಬ್ಬದ ಸಂದರ್ಭದಲ್ಲಿ ಇರಿಸಿದ 25 ಕ್ವಿಂಟಾಲ್‌ಗೂ ಅಧಿಕ ಭಾರದ ಗಣೇಶ ಮೂರ್ತಿಯನ್ನು ದೇವಸ್ಥಾನದಿಂದ ಗಣಪತಿ ಕೆರೆಯವರೆಗೆ ಹೊತ್ತುಕೊಂಡು ಹೋಗಿ ವಿಸರ್ಜನೆ ಮಾಡುವ ಕಾರ್ಯಕ್ರಮವಿದೆ. ಆರ್‌ಎಂಸಿ ರಸ್ತೆಯಲ್ಲಿ ಎಸ್‌ಬಿಎಸ್ ಕುಟುಂಬದವರು ಕೈವಲ್ಯಮಠಕ್ಕೆ ನೀಡಿರುವ ತಿರುಮಲ ವೆಂಕಟೇಶ್ವರ ದೇವಸ್ಥಾನವನ್ನು ಸುಮಾರು 3.50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದ್ದು, ಆ. 10 ರಂದು ಶ್ರೀಗಳು ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಸಮಾಜದ ಪ್ರಮುಖರಾದ ಶಿವಾನಂದ ಯು. ಭಂಡಾರ್‌ಕರ್, ಗೋವಿಂದರಾಯ ಪ್ರಭು, ವೀಣಾ ಪ್ರಭು, ದಾಮೋದರ ನಾಯ್ಕ್, ಪ್ರಸಾದ್ ಪೈ ಇನ್ನಿತರರು ಹಾಜರಿದ್ದರು.