ಮುಂಬೈ: ಸಹ ನೃತ್ಯಗಾತಿಗೆ ಲೈಂಗಿಕ ಕಿರುಕುಳದ ಆರೋಪ ಪ್ರಕರಣದಲ್ಲಿ ಮುಂಬೈ ಪೊಲೀಸರು ಬಾಲಿವುಡ್ ನ ಖ್ಯಾತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಮುಂಬೈನ ಓಶಿವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಇತ್ತೀಚೆಗೆ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ವರದಿಯಾಗಿದೆ.
ವರದಿಯ ಪ್ರಕಾರ, ಗಣೇಶ್ ಆಚಾರ್ಯ ಮತ್ತು ಅವರ ಸಹಾಯಕರ ವಿರುದ್ಧ ಸೆಕ್ಷನ್ 354-ಎ (ಲೈಂಗಿಕ ಕಿರುಕುಳ), 354-ಸಿ, 354-ಡಿ (ಹಿಂಬಾಲಿಸುವಿಕೆ), 509 (ಮಹಿಳೆಗೆ ಅವಮಾನ), 323 (ನೋವು), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಅವಮಾನ), 506 (ಅಪರಾಧ ಬೆದರಿಕೆ)ದ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಇದನ್ನೂ ಓದಿ:ರಿಯಾಲಿಟಿ ಶೋನಿಂದ ಮಕ್ಕಳಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಸ್ವಪ್ರಜ್ಞೆಯ ಅಪಾಯ: ಪಲ್ಲವಿ
ಈ ಬಗ್ಗೆ ಪ್ರತಿಕ್ರಿಯಿಸಲು ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಅವರ ವಕೀಲ ರವಿ ಸೂರ್ಯವಂಶಿ ಮಾತನಾಡಿ, “ನನ್ನ ಬಳಿ ಚಾರ್ಜ್ ಶೀಟ್ ಇಲ್ಲ. ಆದ್ದರಿಂದ ನಾನು ಏನನ್ನೂ ಹೇಳಲಾರೆ, ಆದರೆ ಎಫ್‌ಐಆರ್‌ನಲ್ಲಿನ ಎಲ್ಲಾ ಸೆಕ್ಷನ್‌ಗಳು ಜಾಮೀನು ನೀಡಬಲ್ಲವು” ಎಂದು ಹೇಳಿದರು.
ಗಣೇಶ್ ಆಚಾರ್ಯ ವಿರುದ್ಧ ಸಹ ಡ್ಯಾನ್ಸರ್ ಒಬ್ಬರು ಲೈಂಗಿಕ ಕಿರಕುಳ ಆರೋಪ ಮಾಡಿದ್ದರು. ‘ಲೈಂಗಿಕವಾಗಿ ಸಹಕರಿಸುವಂತೆ ಗಣೇಶ್ ಕೋರಿದ್ದರು. ಆದರೆ, ಇದನ್ನು ನಿರಾಕರಿಸಿದೆ. ಚಿತ್ರರಂಗದಲ್ಲಿ ಯಶಸ್ಸು ಸಿಗಬೇಕಾದರೆ ದೈಹಿಕವಾಗಿ ಸಹಕರಿಸುವಂತೆ ಹೇಳಿದ್ದರು. ಆದರೆ ನಾನು ವಿರೋಧಿಸಿದ್ದೆ. ಹೀಗಾಗಿ ಭಾರತೀಯ ಸಿನಿಮಾ ಮತ್ತು ದೂರದರ್ಶನ ನೃತ್ಯ ನಿರ್ದೇಶಕರ ಸಂಘದಿಂದ ನಾನು ಸದಸ್ಯತ್ವ ಕಳೆದುಕೊಂಡೆ” ಎಂದು ಆರೋಪಿಸಿದ್ದರು.