ಧಾರವಾಡ: ಕುಂದಗೋಳ ತಾಲೂಕಿನ ಬರದ್ವಾಡ ಹಾಗೂ ಕೊಡ್ಲಿವಾಡ ಗ್ರಾಮಗಳನ್ನು ಸೇರಿಸಿ ಬರದ್ವಾಡ ಗ್ರಾಮ ಪಂಚಾಯತಿ ಮಾಡುವಂತೆ ಒತ್ತಾಯಿಸಿ ಚಾಕಲಬ್ಬಿ ಗ್ರಾಮ ಪಂಚಾಯತಿಯ ಬರದ್ವಾಡ-1 ಸಾಮಾನ್ಯ ಮಹಿಳಾ ಕ್ಷೇತ್ರದ ಚನ್ನವ್ವ ಚಂದ್ರಪ್ಪ ಸಂಶಿ ತಮ್ಮ ಗ್ರಾಪಂ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ನಗರದ ಡಿಸಿ ಕಚೇರಿಗೆ ಗ್ರಾಮಸ್ಥರೊಂದಿಗೆ ಆಗಮಿಸಿ ಜಿಲ್ಲಾಧಿಕಾರಿಗೆ ರಾಜೀನಾಮೆ ಸಲ್ಲಿಸಿದ ಅವರು, ಅಂಗೀಕರಿಸುವಂತೆ ಮನವಿ ಮಾಡಿದ್ದಾರೆ. ಬುಧವಾರ ನಡೆದ ಚಾಕಲಬ್ಬಿ ಗ್ರಾಪಂನ ಬರದ್ವಾಡ-1 ಉಪ ಚುನಾವಣೆಯಲ್ಲಿ ಸಾಮಾನ್ಯ ಮಹಿಳೆ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಚುನಾಯಿತರಾಗಿ ಆಯ್ಕೆಗೊಂಡಿದ್ದ ಚನ್ನವ್ವ, ಮರುದಿನವೇ ಅಂದರೆ ಇಂದು ಗುರುವಾರ ಗ್ರಾಮಸ್ಥರೊಂದಿಗೆ ಆಗಮಿಸಿ ಜಿಲ್ಲಾಧಿಕಾರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಬರದ್ವಾಡ ಮತ್ತು ಕೊಡ್ಲಿವಾಡ ಗ್ರಾಮಗಳನ್ನು ಸೇರಿಸಿ ಒಂದು ಮಾಡಿ ಬರದ್ವಾಡ ಗ್ರಾಮ ಪಂಚಾಯತಿಯನ್ನಾಗಿ ಮಾಡಬೇಕೆಂದು ಎರಡು ಗ್ರಾಮಗಳ ಗ್ರಾಮಸ್ಥರು ಅನೇಕ ಬಾರಿ ವಿನಂತಿಸಿದ್ದರೂ, ಸರಕಾರ ಈ ಕುರಿತಂತೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ.
ಈ ಬಗ್ಗೆ ಉಚ್ಚ ನ್ಯಾಯಾಲಯ ಸೂಕ್ತವಾಗಿ ಪರಿಶೀಲಿಸಿ ಬರದ್ವಾಡ ಗ್ರಾಮಕ್ಕೆ ಗ್ರಾಪಂ ಮಂಜೂರು ಮಾಡುವಂತೆ ಆದೇಶಿಸಿದ್ದರೂ ಪಂಚಾಯತ್ ರಾಜ್ ಸಚಿವರು ಹಾಗೂ ಇಲಾಖೆಯಿಂದ ಬರದ್ವಾಡ ಗ್ರಾಮವನ್ನು ನೂತನ ಗ್ರಾಪಂ ಎಂದು ಅನುಮೋದನೆ ನೀಡಿದೆ. ಆದರೆ ಆರ್ಥಿಕ ಇಲಾಖೆ ಮಾತ್ರ ತಿರಸ್ಕರಿಸಿದೆ. ಚಾಕಲಬ್ಬಿ ಗ್ರಾಮ ಪಂಚಾಯತಿಗೆ ಹೋಗಲು 30ಕಿ.ಮೀ. ದೂರ ಕ್ರಮಿಸಿ ಸುತ್ತುವರಿದು ತಲುಪಬೇಕು.
ಈ ಕಾರಣದಿಂದ ಮನನೊಂದಿರುವ ಗ್ರಾಮದ ಜನರ ಭಾವನೆಗಳಿಗೆ ವ್ಯತಿರಿಕ್ತವಾಗಿ ನಾನು ನನ್ನ ಸ್ಥಾನದಲ್ಲಿದ್ದು, ಸೇವೆ ಸಲ್ಲಿಸಲು ಹಾಗೂ ಕಾರ್ಯ ನಡೆಸಲು ಆತ್ಮಸಾಕ್ಷಿ ಒಪ್ಪುತ್ತಿಲ್ಲ. ಹೀಗಾಗಿ ಗ್ರಾಪಂ ಸದಸ್ಯತ್ವ ಸ್ಥಾನಕ್ಕೆ ಯಾರ ಒತ್ತಡವೂ ಇಲ್ಲದೇ ರಾಜೀನಾಮೆ ಸಲ್ಲಿಸಿರುವುದಾಗಿ ಚನ್ನವ್ವ ಸಂಶಿ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.