ಬೆಂಗಳೂರು: ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ನೌಕರರ ಮನಃಸ್ಥಿತಿ ಬದಲಾಗಬೇಕಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ನಗರದ ಕಂದಾಯ ಭವನದಲ್ಲಿ ರಾಜ್ಯ ಸರ್ಕಾರಿ ಕಂದಾಯ ಇಲಾಖಾ ನೌಕರರ ಸಂಘ ಮತ್ತು ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಶುಕ್ರವಾರ ಹಮ್ಮಿಕೊಂಡಿದ್ದ ಕಂದಾಯ ಇಲಾಖಾ ನೌಕರರ ಕಾರ್ಯಾಗಾರ ಮತ್ತು ದಿನಚರಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಯೋಜನೆ ರೂಪಿಸಿ, ಅನುದಾನ ನೀಡಬಹುದು. ಆದರೆ, ಅದನ್ನು ಅನುಷ್ಠಾನಗೊಳಿಸುವವರು ನೌಕರರು. ತ್ವರಿತಗತಿಯಲ್ಲಿ ಜನರಿಗೆ ಸರ್ಕಾರಿ ಸೇವೆಗಳು ದೊರೆತು, ಅಲೆದಾಟ ತಪ್ಪಬೇಕು. ಈ ದೃಷ್ಟಿಯಿಂದ ಇಂದಿನ ಅಗತ್ಯಕ್ಕೆ ತಕ್ಕಂತೆ ನೌಕರರ ಮನಃಸ್ಥಿತಿಗಳು ಬದಲಾಗಬೇಕು. ಹೊಸ ಯುಗಕ್ಕೆ ಬೇಕಾದ ಆಡಳಿತ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
“ನಾವೂ ಯಡವಟ್ಟಾಗ್ಬೇಕಾಗುತ್ತೆ’: “ನಿಮ್ಮ ಆಲೋಚನೆ ಮತ್ತು ಕೆಲಸ ಪ್ರಾಮಾಣಿಕಧಿವಾಗಿದ್ದರೆ, ನೀವು ಯಾರಿಗೂ ಹೆದರಬೇಕಿಲ್ಲ. ಆದರೆ, ನೀವು ಒಂದು ವೇಳೆ ಯಡವಟ್ಟಾದರೆ, ನಾವೂ ಯಡವಟ್ಟಾಗಬೇಕಾಗುತ್ತೆ’ ಎಂದು ಎಚ್ಚರಿಸಿದ ಕಂದಾಯ ಸಚಿವ, ಇಲಾಖೆಯಲ್ಲಿ ಪ್ರಾಮಾಣಿಕತೆ ಕೊರತೆ ಎದ್ದುಕಾಣುತ್ತಿದೆ. ಸರ್ಕಾರಿ ನೌಕರರ ಮೇಲೆ ಜನ ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಅದು ಹುಸಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ತಮ್ಮ ಮೇಲಿದೆ ಎಂದು ಹೇಳಿದರು.
ಕಂದಾಯ ಇಲಾಖೆಯಲ್ಲಿ ಖಾಲಿ ಹುದ್ದೆಗಳ ನೇಮಕ, ಬಡ್ತಿ, ವರ್ಗಾವಣೆ ಸೇರಿದಂತೆ ಎಲ್ಲದಕ್ಕೂ ಒಂದು ನಿಯಮದ ಅಗತ್ಯತೆ ಇದೆ. ಆದರೆ, ಈ ಬಗ್ಗೆ ತಜ್ಞರೊಂದಿಗೆ ಸಮಗ್ರವಾಗಿ ಚರ್ಚಿಸಿ, ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತ್ಯೇಕ ನಿರ್ದೇಶನಾಲಯಕ್ಕೆ ಮನವಿ: ನೌಕರರ ಸಂಘದ ವಸತಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಕೆ.ಜೆ.ಜಾರ್ಜ್, ಜನಪರವಾಗಿ ಕೆಲಸ ಮಾಡಲು ಕಂದಾಯ ಇಲಾಖೆ ನೌಕರರಿಗೆ ಸಾಕಷ್ಟು ಅವಕಾಶಗಳಿವೆ. ಇಲಾಖೆಯಲ್ಲಿ ಪ್ರಾಮಾಣಿಕರಿದ್ದಾರೆ. ಆದರೆ, ಕೆಲ ಅಪ್ರಾಮಾಣಿಕರಿಂದ ಇಡೀ ಇಲಾಖೆಗೆ ಕೆಟ್ಟುಹೆಸರು ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಎಂ.ವಿಜಯಕುಮಾರ್ ಮಾತನಾಡಿ, ಆಡಳಿತಾತ್ಮಕ ದೃಷ್ಟಿಯಿಂದ ಇಲಾಖೆಗಾಗಿಯೇ ಪ್ರತ್ಯೇಕ ನಿರ್ದೇಶನಾಲಯ ಮಾಡಬೇಕು. ಜೇಷ್ಠತಾ ನಿಯಮ ತಿದ್ದುಪಡಿ ಮಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ.ಮಂಜೇಗೌಡ, ಉಪಾಧ್ಯಕ್ಷ ಎಸ್. ಕೃಷ್ಣಮೂರ್ತಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ರಮಣರೆಡ್ಡಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ. ಶಂಕರ್ ಮತ್ತಿತರರು ಉಪಸ್ಥಿತರಿದ್ದರು.