Advertisement

ಕೌಶಲ್ಯ ತರಬೇತಿಯಿಂದ ಬದಲಾವಣೆ ಸಾಧ್ಯ

01:03 AM Sep 26, 2019 | Lakshmi GovindaRaju |

ಬೆಂಗಳೂರು: ದೇಶದ ಮಾನವ ಸಂಪನ್ಮೂಲಕ್ಕೆ ಸೂಕ್ತ ಕೌಶಲ್ಯ ತರಬೇತಿ ನೀಡಿದರೆ ಬಹುದೊಡ್ಡ ಮಟ್ಟದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.

Advertisement

ರಾಷ್ಟ್ರೀಯ ಸಿಬ್ಬಂದಿ ನಿರ್ವಹಣಾ ಸಂಸ್ಥೆ (ಎನ್‌ಐಪಿಎಂ) ಹೆಬ್ಟಾಳದ ಜಿಕೆವಿಕೆ ಕ್ಯಾಂಪಸ್‌ನಲ್ಲಿ ಹಮ್ಮಿಕೊಂಡಿದ್ದ ನ್ಯಾಟ್ಕಾನ್‌-2019 38ನೇ ರಾಷ್ಟ್ರೀಯ ಸಮ್ಮೇಳನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ದೇಶಗಳಲ್ಲಿ ಭಾರತವೂ ಒಂದಾಗಿದೆ. ನಮ್ಮ ದೇಶದ ಜನರಿಗೆ ಸರಿಯಾದ ಕೌಶಲ್ಯ ನೀಡಿದರೆ, ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದರು.

ಪ್ರತಿ ಸಂಸ್ಥೆ ಹಾಗೂ ಉದ್ಯಮವು ತಮ್ಮ ಹೊಣೆಗಾರಿಕೆಯನ್ನು ಅರ್ಥಮಾಡಿಕೊಂಡು ಸೇವೆ ಸಲ್ಲಿಸಬೇಕು. ಕೌಶಲ್ಯ ಅಭಿವೃದ್ಧಿಪಡಿಸುವಲ್ಲಿ ಉದ್ಯಮಗಳ ಬದ್ಧತೆ ದೊಡ್ಡದಿದೆ. ಉದ್ಯಮ ಕ್ಷೇತ್ರಗಳಲ್ಲಿ ನಿತ್ಯ ವಿಭಿನ್ನ ಸವಾಲುಗಳು ಎದುರಾಗುತ್ತಿರುತ್ತದೆ. ಈ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಯುವ ಜನಾಂಗವನ್ನು ತಯಾರು ಮಾಡಬೇಕಿದೆ ಎಂದರು.

ದೇಶದ ನಾಯಕತ್ವ ಸರಿಯಾದ ದಾರಿಯಲ್ಲಿ ಸಾಗುತ್ತಿದೆ. ಪ್ರಧಾನಿ ಮೋದಿಯವರು ದೇಶವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದ್ದಾರೆ. ದೇಶದ ಕೌಶಲ್ಯವಂತರು ಮತ್ತು ಪ್ರತಿಭಾವಂತರಿಗೂ ಇದೇ ಸರಿಯಾದ ಮಾರ್ಗ ಎಂದು ಹೇಳಿದರು.

ದೇಶದ ಅಭಿವೃದ್ಧಿಗೆ ಉದ್ಯಮಗಳು ಸಾಥ್‌ ನೀಡಬೇಕು. ಪ್ರತಿ ಪ್ರತಿಭೆಯೂ ಗೌರವಿಸಲ್ಪಡುವ ವೇದಿಕೆ ಸದ್ಯದ ಭಾರತದಲ್ಲಿ ಸೃಷ್ಟಿಯಾಗುತ್ತಿದೆ. ಜನರ ಮನೋಭಾವ ಬದಲಾಗುತ್ತಿದೆ. ವಾಹನಕ್ಕೆ ಚಾಲಕ ಹೇಗೆ ಮುಖ್ಯವೋ ದೇಶದ ನಾಯಕತ್ವವೂ ಅಷ್ಟೇ ಮುಖ್ಯ. ಎಲ್ಲರನ್ನೂ ನಾಯಕನಾದವನೇ ಮುಂದಕ್ಕೂ ಕರೆದೊಯ್ಯಬೇಕು ಎಂದರು.

Advertisement

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ಯುವ ಸಮೂಹದಲ್ಲಿ ಕೌಶಲ್ಯ ಮತ್ತು ಉದ್ಯಮಶೀಲತೆ ವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆ ಜಾರಿಗೆ ತಂದಿವೆ. ಕೌಶಲ್ಯ ಮತ್ತು ಜ್ಞಾನ ದೇಶದ ಆರ್ಥಿಕತೆ ಹಾಗೂ ಸಾಮಾಜಿಕ ಅಭಿವೃದ್ಧಿ ಗೆ ಸಹಕಾರಿ ಎಂದು ಹೇಳಿದರು. ಪದವೀಧರರಿಗೆ ಉದ್ಯಮಶೀಲತೆ ಕೌಶಲ್ಯ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ.

ಕೌಶಲ್ಯಾಭಿವೃದ್ಧಿ ನೀತಿ ಜಾರಿಗೆ ತಂದಿರುವ ರಾಜ್ಯಗಳಲ್ಲಿ ಕರ್ನಾಟಕ ಮೊದಲನೆಯಾದಾಗಿದೆ. ಕೇಂದ್ರದ ಸ್ಕಿಲ್‌ ಇಂಡಿಯಾ ಕಾರ್ಯಕ್ರಮಗಳು ಪ್ರತಿಭೆ ಮತ್ತು ಕೌಶಲ್ಯಾಭಿವೃದ್ಧಿಗೆ ಪೂರಕವಾಗಲಿದೆ ಎಂದರು. ರಾಜ್ಯಪಾಲ ವಿ.ಆರ್‌.ವಾಲಾ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ನ್ಯಾಟ್ಕಾನ್‌ ಸಂಯೋಜಕ ಪಿ.ಆರ್‌.ಬಸವರಾಜು, ಎನ್‌ಐಪಿಎಂ ಗೌರವ ಕಾರ್ಯದರ್ಶಿ ಎ.ಯು.ದಿನೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next