Advertisement

ಸಿದ್ದುಗೆ ಗುದ್ದಲು ಜಂಟಿ ಸೆಡ್ಡು

06:00 AM Apr 23, 2018 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಜತೆಗೆ ಬಾದಾಮಿಯಲ್ಲೂ ಸ್ಪರ್ಧೆ ಮಾಡುವುದು ಖಚಿತವಾಗುತ್ತಿದ್ದಂತೆ ಎರಡೂ ಕ್ಷೇತ್ರಗಳಲ್ಲಿ ಅವರನ್ನು ಕಟ್ಟಿಹಾಕುವ ಪ್ರತಿಪಕ್ಷ ಬಿಜೆಪಿ-ಜೆಡಿಎಸ್‌ ತಂತ್ರ ಇನ್ನಷ್ಟು ಚುರುಕು ಪಡೆದುಕೊಂಡಿದೆ.

Advertisement

ಒಂದೆಡೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಿರಿಯ ಮುಖಂಡ ಎಲ್‌. ರೇವಣ ಸಿದ್ದಯ್ಯ ಕಾಂಗ್ರೆಸ್‌ನಿಂದ ಹೊರ ಬಂದು ಸಿದ್ದರಾಮ ಯ್ಯಗೆ ಸೆಡ್ಡು ಹೊಡೆದರೆ, ಇನ್ನೊಂದೆಡೆ ಬಾದಾಮಿಯಲ್ಲಿ ಬಿಜೆಪಿಯಿಂದ ಸಂಸದ ಶ್ರೀರಾಮುಲು ಅಥವಾ ಬಾಗಲಕೋಟೆ ಸಂಸದ ಗದ್ದಿಗೌಡರ್‌ ಕಣಕ್ಕಿಳಿಯುವ ಸಾಧ್ಯತೆಯಿದೆ. 

ಈಗಾಗಲೇ ಅಲ್ಲಿ  ಜೆಡಿಎಸ್‌ ವತಿಯಿಂದ ಹನುಮಂತಪ್ಪ ಮಾವಿನಮರದ ಅವರನ್ನು ಕಣಕ್ಕಿಳಿಸಿದ್ದು, ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಖುದ್ದು ಎಚ್‌.ಡಿ.ಕುಮಾರಸ್ವಾಮಿ ಹಾಜರಿದ್ದದ್ದು ವಿಶೇಷ.

ಹೀಗಾಗಿ, ಎರಡೂ ಕ್ಷೇತ್ರಗಳಲ್ಲಿಯೂ ಸಿದ್ದರಾಮಯ್ಯ ಅವರಿಗೆ ಸವಾಲು ಒಡ್ಡಲು ಪ್ರತಿಪಕ್ಷಗಳು ಸಿದ್ಧತೆ ನಡೆಸಿವೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ನ ಜಿ.ಟಿ.ದೇವೇಗೌಡ ಅವರಿಂದ ಪ್ರಬಲ ಪೈಪೋಟಿ ಎದುರಿಸುತ್ತಿರುವ ಸಿದ್ದರಾಮಯ್ಯ ಬಾದಾಮಿಯಲ್ಲಿಯೂ ಜೆಡಿಎಸ್‌ ಹಾಗೂ ಬಿಜೆಪಿಯ ಅಭ್ಯರ್ಥಿಗಳನ್ನು ಎದುರಿಸಬೇಕಾಗಿದೆ. ಜತೆಗೆ ವರುಣಾದಲ್ಲಿ ತಮ್ಮ ಪುತ್ರನನ್ನೂ ಗೆಲ್ಲಿಸಿಕೊಳ್ಳಬೇಕಿದೆ.

ಜಾತಿವಾರು ಲೆಕ್ಕಾಚಾರ:
ಚಾಮುಂಡೇಶ್ವರಿ ಕ್ಷೇತ್ರದಲ್ಲಿ 70 ಸಾವಿರ ಒಕ್ಕಲಿಗ ಹಾಗೂ 30 ಸಾವಿರ ನಾಯಕ ಸಮುದಾಯದ ಮತಗಳಿವೆ. ಒಕ್ಕಲಿಗ ಸಮುದಾಯದವರೇ ಆದ ಜಿ.ಟಿ.ದೇವೇಗೌಡ ಅಭ್ಯರ್ಥಿಯಾಗಿರುವುದು, ಜತೆಗೆ ಎಚ್‌.ಡಿ.ದೇವೇಗೌಡರ ಕುಟುಂಬ ಆ ಸಮುದಾಯದ ಮೇಲೆ ಪ್ರಭಾವ ಹೊಂದಿದೆ. ನಾಯಕ ಸಮುದಾಯದ ಮೇಲೆ ಶ್ರೀರಾಮುಲು ಹಿಡಿತ ಹೊಂದಿರುವುದೂ ಸಿದ್ದರಾಮಯ್ಯ ಅವರ ಆತಂಕಕ್ಕೆ ಕಾರಣ. ಹೀಗಾಗಿ, ಬಾದಾಮಿಯಲ್ಲಿ ಸ್ಪರ್ಧೆಗೆ ಮುಂದಾಗಿದ್ದಾರೆ.ಮೇಲ್ನೋಟಕ್ಕೆ ಬಾದಾಮಿಯಲ್ಲಿ ಕಷ್ಟ. ಶ್ರೀರಾಮುಲು, ಯಡಿಯೂರಪ್ಪ ಅಥವಾ ಗದ್ದಿಗೌಡರ್‌ ಸ್ಪರ್ಧೆ ಮಾಡಿದರೆ ಪ್ರಬಲ ಪೈಪೋಟಿ ಎದುರಾಗಬಹುದು ಎಂದು ಹೇಳಲಾಗಿದೆ. ಆದರೆ ಈ ಎಲ್ಲಾ ಲೆಕ್ಕಾಚಾರ ಮಾಡಿಯೇ ಸಿದ್ದರಾಮಯ್ಯ ಕಣಕ್ಕಿಳಿಯುತ್ತಿದ್ದಾರೆ ಎಂದು ಹೇಳಲಾಗಿದೆ. 

Advertisement

ಬಾದಾಮಿಯಲ್ಲಿ ಜಾತಿವಾರು ಲೆಕ್ಕಾಚಾರದಲ್ಲಿ 52 ಸಾವಿರ ಕುರುಬರು, 55 ಸಾವಿರ ಲಿಂಗಾಯಿತರಿದ್ದಾರೆ. ಅಲ್ಲಿಯೂ 33 ಸಾವಿರ ನಾಯಕ ಸಮುದಾಯದ ಮತಗಳಿದ್ದು, ಆ ಮತಗಳ ಮೇಲೆ ಸತೀಶ್‌ ಜಾರಕಿಹೊಳಿ ಹಿಡಿತ ಹೊಂದಿದ್ದಾರೆ. 35 ಸಾವಿರ ಎಸ್ಸಿ, 10 ಸಾವಿರ ನೇಕಾರ, 15 ಸಾವಿರ ಮುಸ್ಲಿಂ ಸಮುದಾಯದ ಮತಗಳು ಇವೆ. 55 ಲಿಂಗಾಯತ ಸಮುದಾಯದ ಮತಗಳ ಪೈಕಿ 23 ಸಾವಿರ ಪಂಚಮಸಾಲಿ, 16 ಸಾವಿರ ಗಾಣಿಗ, 4 ಸಾವಿರ ರೆಡ್ಡಿ, 12 ಸಾವಿರ ಬಣಜಿಗ ಲಿಂಗಾಯತರ ಮತಗಳಿವೆ. ಜೆಡಿಎಸ್‌ ಅಭ್ಯರ್ಥಿ ಹನುಮಂತ ಮಾವಿನಮರದ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದವರು.

ಬಿಜೆಪಿ ಸ್ಥಳೀಯ ಆಕಾಂಕ್ಷಿಗಳಿವರು
ಸ್ಥಳೀಯವಾಗಿ ಮಹಂತೇಶ್‌ ಮಾಮದಾಪುರ ಹಾಗೂ ಎಂ.ಕೆ.ಪಟ್ಟಣಶೆಟ್ಟಿ ಬಿಜೆಪಿ ಆಕಾಂಕ್ಷಿಗಳಾಗಿದ್ದಾರೆ. ಇಬ್ಬರೂ ಬಣಜಿಗ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಬಾಗಲಕೋಟೆ ಸಂಸದ ಗದ್ದಿಗೌಡರ್‌ ಗಾಣಿಗ ಲಿಂಗಾಯತ ಸಮುದಾಯಕ್ಕೆ  ಸೇರಿದವರು.  ಹೀಗಾಗಿಯೇ 50 ಸಾವಿರ ಕುರುಬರು, 33 ಸಾವಿರ ನಾಯಕರು, 30 ಸಾವಿರ ಎಸ್‌ಸಿ, 10 ಸಾವಿರ ನೇಕಾರರು, 15 ಸಾವಿರ ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟು ಸಿದ್ದರಾಮಯ್ಯ ಬಾದಾಮಿ ಆಯ್ಕೆ ಮಾಡಿಕೊಂಡಿದ್ದಾರೆ  ಎಂದು ಹೇಳಲಾಗಿದೆ.

ಸತೀಶ್‌ “ಆಪ್ತಮಿತ್ರ’
ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆಲುವಿನ ಗುರಿ ತಲುಪಬೇಕಾದರೆ ಸತೀಶ್‌ ಜಾರಕಿಹೊಳಿ ಬೆಂಬಲ ಬೇಕೇ ಬೇಕು. ಏಕೆಂದರೆ ಕ್ಷೇತ್ರದಲ್ಲಿ 33 ಸಾವಿರ ನಾಯಕ ಮತದಾರರಿದ್ದಾರೆ. ಅವರ ಮೇಲೆ ಸಂಪೂರ್ಣ ಹಿಡಿತ ಇರುವುದು ಸತೀಶ್‌ ಜಾರಕಿಹೊಳಿಗೆ. ಶ್ರೀರಾಮುಲು ಹಾಗೂ ಬಾದಾಮಿಯ ನಾಯಕ ಸಮುದಾಯದವರಿಗೆ ಅಷ್ಟಕ್ಕಷ್ಟೆ. ಸತೀಶ್‌ ಜಾರಕಿಹೊಳಿ ಹಾಗೂ ಸಿದ್ದರಾಮಯ್ಯ ಸಂಬಂಧ ಇತ್ತೀಚೆಗೆ ಹಳಸಿದೆ ಎಂದು ಹೇಳಲಾದರೂ ಸಂಕಷ್ಟದ ಸಮಯದಲ್ಲಿ ಸತೀಶ್‌ ಜಾರಕಿಹೊಳಿ ಸಿದ್ದರಾಮಯ್ಯ ಕೈ ಹಿಡಿಯುವ ನಿರೀಕ್ಷೆಯಿದೆ. ಜಾರಕಿಹೊಳಿ ಬಾದಾಮಿಯಲ್ಲಷ್ಟೇ ಅಲ್ಲದೆ ಚಾಮುಂಡೇಶ್ವರಿಯಲ್ಲೂ ಸಿದ್ದರಾಮಯ್ಯ ಅವರ ನೆರವಿಗೆ ಬರಬೇಕಿದೆ.

ಗೆದ್ದವರು ಬಿಜೆಪಿಯಲ್ಲಿ
2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಚಿಮ್ಮನಕಟ್ಟಿ 57,446 ಮತ ಪಡೆದು ಗೆಲುವು ಸಾಧಿಸಿದ್ದರು. ಬಿಜೆಪಿಯ ಎಂ.ಕೆ.ಪಟ್ಟಣಶೆಟ್ಟಿ 30,310, ಜೆಡಿಎಸ್‌ನ ಮಹಂತೇಶ್‌ ಮಾಮದಾಪುರ 42,333 ಮತ ಪಡೆದಿದ್ದರು. ಇದೀಗ ಇಬ್ಬರೂ ಬಿಜೆಪಿಯಲ್ಲೇ ಇದ್ದಾರೆ.

ಸಿದ್ದರಾಮಯ್ಯಗೆ ತಕ್ಕ ಪಾಠ ಕಲಿಸುವೆ
ತಮ್ಮ ರಾಜಕೀಯ ಲಾಭಕ್ಕಾಗಿ ನನ್ನನ್ನು ಬಳಿಸಿಕೊಂಡು, ಸಾರ್ವಜನಿಕವಾಗಿ ಅವಮಾನ ಮಾಡಿರುವ ಸಿದ್ದರಾಮಯ್ಯಗೆ ತಕ್ಕಪಾಠ ಕಲಿಸುವುದು ಅನಿವಾರ್ಯ. ಹೀಗಾಗಿ, ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ನಿವೃತ್ತ ಪೊಲೀಸ್‌ ಅಧಿಕಾರಿ ಎಲ್‌.ರೇವಣ್ಣ ಸಿದ್ದಯ್ಯ ಹೇಳಿದ್ದಾರೆ. ಅಲ್ಲದೆ, ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡರಿಗೇ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

2004ರಲ್ಲಿ ತಾವು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಸಂದರ್ಭದಲ್ಲಿ ಸಿದ್ದು ಜೆಡಿಎಸ್‌ನಿಂದ ಗೆದ್ದು ಆಯ್ಕೆಯಾದರು. ನಂತರ, ಕಾಂಗ್ರೆಸ್‌ ಸೇರಿದರು. ಆಗ ಚಾಮುಂಡೇಶ್ವರಿ ಹಾಗೂ ವರುಣಾ ಕ್ಷೇತ್ರ ರಚನೆಯಾಗಿ ನಿಮಗೆ ವರುಣಾ ಕ್ಷೇತ್ರವನ್ನು ಬಿಟ್ಟುಕೊಡುತ್ತೇನೆ ಎಂದು ಹೇಳಿದ್ದರು. 2008ರಲ್ಲಿ ವರುಣಾದಲ್ಲಿ ನಿಲ್ಲುವ ಆಸೆ ಹೊತ್ತಾಗ ಅವರೇ ವರುಣಾಕ್ಕೆ ಬಂದು ನಿಂತರು. ಆ ಮೂಲಕ ಸಿದ್ದರಾಮಯ್ಯ ವಚನ ಭ್ರಷ್ಟರಾದರು ಎಂದಿದ್ದಾರೆ. ತಮ್ಮ ವೈಯಕ್ತಿಕ ಲಾಭಕ್ಕಾಗಿ ನನ್ನನ್ನು ಬಳಸಿಕೊಂಡಿದ್ದಾರೆ. ಕೃತಜ್ಞತೆಯ ಭಾವವಿಲ್ಲದೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದರು. ಮೊನ್ನೆ ಸಹ ಮನೆಗೆ ಬಂದು ಸಾಕುಪ್ರಾಣಿಗಳ ಮನವೊಲಿಸುವ ರೀತಿಯಲ್ಲಿ ಮಾತಾಡಿದರು. ಆದರೆ, ನಾಮಪತ್ರ ಸಲ್ಲಿಸುವಾಗ ಸೌಜನ್ಯಕ್ಕೂ ಆಹ್ವಾನಿಸಲಿಲ್ಲ. ನಾನಿದ್ದ ಹೋಟೆಲ್‌ನಲ್ಲಿ ಸಭೆ ನಡೆದರೂ ನನ್ನನ್ನು ಕರೆಯಲಿಲ್ಲ. ಇಂತಹ ಯಾವುದೇ ಸಂಭ್ರಮದಲ್ಲಿ ತಮಗೆ ಜಾಗವಿಲ್ಲ ಎಂದ ಮೇಲೆ ಏಕೆ ಇರಬೇಕೆಂದು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ.

ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ಬಗ್ಗೆ ವರಿಷ್ಠರಿಂದ ಈವರೆಗೂ ನನಗೆ ಯಾವುದೇ ನಿರ್ದೇಶನ ಬಂದಿಲ್ಲ. ಒಂದು ವೇಳೆ ಸಿದ್ದು ವಿರುದ್ಧ ಸ್ಪರ್ಧಿಸುವಂತೆ ಸೂಚಿಸಿದರೆ ಸಿದ್ಧನಾಗಿದ್ದೇನೆ.
– ಬಿ.ಶ್ರೀರಾಮುಲು, ಸಂಸದ, ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ.

ಒಂದೊಮ್ಮೆ ಬಾದಾಮಿಯಲ್ಲಿ ಸ್ಪರ್ಧಿಸಬೇಕು ಎಂದು ಪಕ್ಷದ ವರಿಷ್ಠರು ಹೇಳಿದ್ದೇ ಆದಲ್ಲಿ ಅದಕ್ಕೆ ನಾನೂ ಸಿದ್ದನಿದ್ದೇನೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಅಂತಿಮ ತೀರ್ಮಾನ ಆಗಿಲ್ಲ.
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next