Advertisement

Priyank Kharge ರಾಜೀನಾಮೆ ಕೇಳುವುದಕ್ಕೆ ಸಿಎಂಗೆ ಧೈರ್ಯವಿಲ್ಲ: ಛಲವಾದಿ ವ್ಯಂಗ್ಯ

11:53 PM Jan 01, 2025 | Team Udayavani |

ಬೆಂಗಳೂರು: ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ಸಂಪುಟದಿಂದ ಕೈ ಬಿಡುವ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಧೈರ್ಯವೇ ಇಲ್ಲ. ಹೀಗಾಗಿ ದಾಖಲೆ ಇಲ್ಲ ಎಂಬ ಕಾರಣ ನೀಡುತ್ತಿದ್ದಾರೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸಚಿನ್‌ ಬರೆದಿಟ್ಟ 7 ಪುಟಗಳ ಡೆತ್‌ ನೋಟಿನಲ್ಲಿ 2-3 ಬಾರಿ ಪ್ರಿಯಾಂಕ್‌ ಖರ್ಗೆ ಹೆಸರು ಪ್ರಸ್ತಾವವಾಗಿದೆ. ಎಫ್ಎಸ್‌ಎಲ್‌ ವರದಿಯಲ್ಲಿ ಡೆತ್‌ನೋಟ್‌ ಅಸಲಿ ಎಂದು ದೃಢಪಟ್ಟಿದೆ. ದಾಖಲೆ ಕೊಡಿ ಎಂದರೆ ಇನ್ನೇನು ದಾಖಲೆ ಬೇಕು ನಿಮಗೆ? ಎಂದು ಪ್ರಶ್ನಿಸಿದರು.

ದಾಖಲೆ ಇಲ್ಲದ ಕಾರಣ ಸಚಿವ ಸ್ಥಾನದಿಂದ ಕೈಬಿಡುವ ವಿಚಾರ ಉದ್ಭವಿಸುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

ಮುಖ್ಯಮಂತ್ರಿಗಳೇ ಇದು ನಮಗೆ ಮೊದಲೇ ಗೊತ್ತಿದೆ. ನಿಮಗೆ ಅವರ ರಾಜೀನಾಮೆ ಕೇಳುವ ಧೈರ್ಯ ಇಲ್ಲ. ಆ ಪ್ರಯತ್ನಕ್ಕೆ ನೀವು ಕೈ ಹಾಕಿದರೆ ಅವರು ನಿಮ್ಮ ಬುಡಕ್ಕೆ ಕೈ ಹಾಕುತ್ತಾರೆಂಬ ಭಯ ನಿಮ್ಮನ್ನು ಕಾಡುತ್ತಿದೆ ಎಂದರು.

ತಾಕತ್ತಿಲ್ಲವೆಂದು ಒಪ್ಪಿಕೊಳ್ಳಿ
ಸಿದ್ದರಾಮಯ್ಯನವರೇ ಅಡ್ಡಗೋಡೆಯ ಮೇಲೆ ದೀಪ ಇಡುವ ಕೆಲಸ ಮಾಡಬೇಡಿ. ಅದರ ಬದಲು ನನಗೆ ತಾಕತ್ತಿಲ್ಲವೆಂದು ನೇರವಾಗಿ ಒಪ್ಪಿಕೊಳ್ಳಿ. ನಾವು ಯಾವುದೇ ಕಾರಣಕ್ಕೆ ಈ ಹೋರಾಟವನ್ನು ಕೈಬಿಡುವುದಿಲ್ಲ. ಬೀದರ್‌ ಕಲಬುರಗಿ ಮಾತ್ರವಲ್ಲ ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಈ ಹೋರಾಟ ವ್ಯಾಪಿಸುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement

ಪ್ರಿಯಾಂಕ್‌ ಖರ್ಗೆಯವರೇ, ಯಾವುದೇ ಕಾರಣಕ್ಕೂ ನಾವು ನಮ್ಮ ಬಟ್ಟೆ ಹರಿದುಕೊಳ್ಳುವುದಿಲ್ಲ. ನೀವೂ ಹರಿದು ಕೊಳ್ಳಬೇಡಿ. ಅವರವರ ಬಟ್ಟೆ ಹರಿದುಕೊಳ್ಳುವವರನ್ನು ಹುಚ್ಚರು ಎನ್ನುತ್ತಾರೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next