Advertisement
ಜಿಲ್ಲೆಯಲ್ಲಿ ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ. ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಹನೂರು. ಈ ಪೈಕಿ ಕೊಳ್ಳೇಗಾಲ ಎಸ್ಸಿ ಮೀಸಲು ಕ್ಷೇತ್ರವಾದರೆ, ಇನ್ನುಳಿದ ಮೂರೂ ಸಾಮಾನ್ಯ ಕ್ಷೇತ್ರಗಳು.ನಾಲ್ಕು ಕ್ಷೇತ್ರಗಳ ಪೈಕಿ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ಪೈಪೋಟಿ ಏರ್ಪಡಲಿದೆ. ಹನೂರು ಕ್ಷೇತ್ರದಲ್ಲಿ ಇವೆರಡು ಪ್ರಮುಖ ಪಕ್ಷಗಳ ಜತೆಗೆ ಜೆಡಿಎಸ್ ಅಸ್ತಿತ್ವದಲ್ಲಿದೆ.
Related Articles
ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್ಪಿಯಿಂದ ಗೆದ್ದು ಈಗ ಬಿಜೆಪಿ ಸೇರಿರುವ ಎನ್. ಮಹೇಶ್ ಅವರಿಗೆ, ಬಿಜೆಪಿ ಟಿಕೆಟ್ ದೊರಕಲಿದೆ ಎಂದೇ ಹೇಳಲಾಗುತ್ತಿದೆ. ಆ ಷರತ್ತಿನ ಮೇಲೆಯೇ ಮಹೇಶ್ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ. ಆದರೂ ಅಲ್ಲಿ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಬಿಜೆಪಿ ಟಿಕೆಟ್ಗೆ ತೀವ್ರ ಪ್ರಯತ್ನ ನಡೆಸಿದ್ದಾರೆ. ಕೊಳ್ಳೇಗಾಲದಲ್ಲಿ ತೀವ್ರ ಆಸಕ್ತಿ ಕೆರಳಿಸಿರುವುದು ಕಾಂಗ್ರೆಸ್ ಅಭ್ಯರ್ಥಿ ಯಾರಾಗಬಹುದೆಂದು! ಮಾಜಿ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಸ್. ಬಾಲರಾಜು ಹಾಗೂ ಎಸ್.ಜಯಣ್ಣ ನಡುವೆ ಟಿಕೆಟ್ಗಾಗಿ ಪೈಪೋಟಿ ಇದೆ.
Advertisement
ಕೊಳ್ಳೇಗಾಲಕ್ಕೆ ಬರುತ್ತಾರಾ ಧ್ರುವನಾರಾಯಣ?!ಜಿಲ್ಲಾ ರಾಜಕೀಯದಲ್ಲಿ ಆಸಕ್ತಿ ಕೆರಳಿಸಿರುವ ಅಂಶವೆಂದರೆ, ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ರಾಜ್ಯ ರಾಜಕಾರಣಕ್ಕೆ ಬರಲಿದ್ದು, ಕೊಳ್ಳೇಗಾಲ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಇಲ್ಲ ಅವರು ನಂಜನಗೂಡಿಗೆ ಹೋಗುತ್ತಾರೆಂದು ಸಹ ಹೇಳಲಾಗುತ್ತಿದೆ. ಒಂದು ವೇಳೆ ಧ್ರುವನಾರಾಯಣ ಅವರು ಕೊಳ್ಳೇಗಾಲಕ್ಕೆ ಬಂದರೆ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಲಿವೆ. -ಕೆ.ಎಸ್. ಬನಶಂಕರ ಆರಾಧ್ಯ