Advertisement
ರಾಜ್ಯದ ಮೊದಲ ಮಹಿಳಾ ಸ್ಪೀಕರ್ ಹಾಗೂ ಪ್ರಥಮ ವಿಪಕ್ಷ ನಾಯಕಿ ಕೆ.ಎಸ್. ನಾಗರತ್ನಮ್ಮ, ಕೇರಳ ಹಾಗೂ ಹಿಮಾಚಲ ಪ್ರದೇಶ ರಾಜ್ಯಪಾಲ ರಾಗಿದ್ದ ಬಿ. ರಾಚಯ್ಯ, ನೀರ್ ಸಾಬ್ ಎಂದೇ ಜನ ಮಾನಸದಲ್ಲಿ ನೆಲೆಯಾಗಿದ್ದ ಅಬ್ದುಲ್ ನಜೀರ್‌ಸಾಬ್, ರಾಜ್ಯದ ಪ್ರಮುಖ ದಲಿತ ನಾಯಕರಲ್ಲೊಬ್ಬರಾದ ವಿ. ಶ್ರೀನಿವಾಸಪ್ರಸಾದ್, ಕನ್ನಡ ಚಳವಳಿಗಳಿಂದ ಖ್ಯಾತರಾದ ವಾಟಾಳ್ ನಾಗರಾಜ್, ಜಿಲ್ಲೆಯ ಅಭಿವೃದ್ಧಿಯ ಹರಿಕಾರ ಎಚ್.ಎಸ್. ಮಹದೇವಪ್ರಸಾದ್, ಅಭಿವೃದ್ಧಿ ಕೆಲಸಗಳಲ್ಲಿ ರಾಜ್ಯದ ನಂ.1 ಸಂಸದ ಎಂಬ ಖ್ಯಾತಿಗೆ ಪಾತ್ರರಾಗಿದ್ದ, ಪ್ರಸ್ತುತ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಈ ಜಿಲ್ಲೆಯ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಜಿಲ್ಲೆಯ ಚುನಾವಣೆಗಳ ಫಲಿತಾಂಶವನ್ನು ಅವಲೋಕಿಸಿದಾಗ ಇದು ಕಾಂಗ್ರೆಸ್ ಪ್ರಾಬಲ್ಯದ ಜಿಲ್ಲೆ ಎಂಬುದು ಅರಿವಾಗುತ್ತದೆ. ಜಿಲ್ಲೆಯಲ್ಲಿ ಇದುವರೆಗೆ ತಲಾ ಒಂದು ಅವಧಿಗೆ ಬಿಜೆಪಿಯಿಂದ ಇಬ್ಬರು ಶಾಸಕರು ಮಾತ್ರ ಗೆದ್ದಿದ್ದಾರೆ. ಬಿಎಸ್‌ಪಿಯಿಂದ ಗೆದ್ದ ಶಾಸಕ ಎನ್. ಮಹೇಶ್ ಬಿಜೆಪಿ ಸೇರಿದ್ದಾರೆ.
ಜಿಲ್ಲಾ ಕೇಂದ್ರವನ್ನು ಒಳಗೊಂಡಿರುವ ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ, ಕಸಬಾ, ಹರದನಹಳ್ಳಿ, ಚಂದಕ ವಾಡಿ ಹೋಬಳಿ, ಹರವೆ ಹೋಬಳಿಯ ಕೆಲವು ಗ್ರಾಮಗಳು ಒಳಪಡುತ್ತವೆ. ಒಟ್ಟು 15 ಚುನಾವಣೆಗಳನ್ನು ಎದುರಿ ಸಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚು ಅಂದರೆ 8 ಬಾರಿ ಗೆದ್ದಿದ್ದಾರೆ. ಕನ್ನಡ ಚಳವಳಿ ಗಾರ ವಾಟಾಳ್ ನಾಗರಾಜ್ ಮೂರು ಬಾರಿ ಆರಿಸಿ ಬಂದಿದ್ದಾರೆ. 1952ರಿಂದ 2004 ರವರೆಗೂ ಈ ಕ್ಷೇತ್ರದಲ್ಲಿ ವೀರಶೈವ ಅಭ್ಯರ್ಥಿಗಳೇ ಜಯಗಳಿಸಿದ್ದು, 2008ರಿಂದ ಇದುವರೆಗೂ ಹಿಂದುಳಿದ ಉಪ್ಪಾರ ಸಮಾಜದ ಸಿ .ಪುಟ್ಟರಂಗ ಶೆಟ್ಟಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 1952ರ ಮೊದಲ ಚುನಾವಣೆಯಲ್ಲಿ ಕಿಸಾನ್ ಮಜ್ದೂರ್ ಪ್ರಜಾಪಾರ್ಟಿಯ ಯು.ಎಂ. ಮಾದಪ್ಪ ಪಕ್ಷೇತರ ಎಂ.ಸಿ. ಬಸಪ್ಪ ಅವರನ್ನು ಸೋಲಿಸಿ ಆಯ್ಕೆಯಾಗಿದ್ದರು. 1957ರಲ್ಲಿ ದ್ವಿಸದಸ್ಯ ಕ್ಷೇತ್ರವಾದ ಇಲ್ಲಿ, ಕಾಂಗ್ರೆಸ್‌ನಿಂದ ಬಿ. ರಾಚಯ್ಯ, ಪ್ರಜಾ ಸೋಶಲಿಸ್ಟ್ ಪಾರ್ಟಿಯಿಂದ ಯು.ಎಂ. ಮಾದಪ್ಪ ಪುನರಾಯ್ಕೆಯಾದರು. 1962ರಲ್ಲಿ ಸಂತೆಮರಹಳ್ಳಿ ಕ್ಷೇತ್ರ ಮೀಸಲು ಕ್ಷೇತ್ರ ರಚನೆಯಾದ ಕಾರಣ, ಚಾಮರಾಜನಗರ ಕ್ಷೇತ್ರ ಮತ್ತೆ ಏಕಸದಸ್ಯ ಕ್ಷೇತ್ರವಾಯಿತು. 1962ರಲ್ಲಿ ಕಾಂಗ್ರೆಸ್‌ನ ಎಂ.ಸಿ. ಬಸಪ್ಪ, 1967ರಲ್ಲಿ ಪಕ್ಷೇ ತರರಾಗಿ ಎಸ್. ಪುಟ್ಟಸ್ವಾಮಿ, 1972ರಲ್ಲಿ ಕಾಂಗ್ರೆಸ್‌ನಿಂದ ಅದೇ ಎಸ್ ಪುಟ್ಟಸ್ವಾಮಿ, 1978ರಲ್ಲಿ ಜನತಾಪಕ್ಷದಿಂದ ಎಂ.ಸಿ. ಬಸಪ್ಪ, 1983 ಹಾಗೂ 1985ರಲ್ಲಿ ಕಾಂಗ್ರೆಸ್‌ನಿಂದ ಎಸ್ . ಪುಟ್ಟಸ್ವಾಮಿ ಜಯಗಳಿಸಿದರು. 1989 ಹಾಗೂ 1994ರಲ್ಲಿ ಪಕ್ಷೇತರ ವಾಟಾಳ್ ನಾಗರಾಜ್ ಗೆದ್ದು ಬಂದರೆ, 1999ರಲ್ಲಿ ಬಿಜೆಪಿ ಈ ಕ್ಷೇತ್ರದಲ್ಲಿ ಸಿ. ಗುರು ಸ್ವಾಮಿಯವರ ಮೂಲಕ ಖಾತೆ ತೆರೆಯಿತು. 2004ರಲ್ಲಿ ಮತ್ತೆ ವಾಟಾಳ್ ನಾಗರಾಜ್ ವಾಟಾಳ್ ಪಕ್ಷದಿಂದ ಆರಿಸಿ ಬಂದರು. ಇಲ್ಲಿಯವರೆಗೂ ವೀರಶೈವ ಅಭ್ಯರ್ಥಿಗಳೇ ಗೆದ್ದುಬಂದಿದ್ದ ಈ ಕ್ಷೇತ್ರದಲ್ಲಿ 2008ರಲ್ಲಿ ಕಾಂಗ್ರೆಸ್‌ನಿಂದ ಹಿಂದುಳಿದ ಉಪ್ಪಾರ ಸಮಾಜದ ಸಿ. ಪುಟ್ಟರಂಗಶೆಟ್ಟಿ ಬಿಜೆಪಿ ಅಭ್ಯರ್ಥಿ ಎಂ. ಮಹದೇವು ಅವರನ್ನು ಮಣಿಸಿ ಗೆದ್ದುಬಂದರು. ಅನಂತರ 2013 ಹಾಗೂ 2018ರಲ್ಲೂ ಪುನರಾಯ್ಕೆಯಾಗಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
Related Articles
ಕೊಳ್ಳೇಗಾಲ ಕ್ಷೇತ್ರಕ್ಕೆ ಕಸಬಾ ಹೋಬಳಿ, ಚಾ.ನಗರ ತಾಲೂಕಿನ ಸಂತೆಮರಹಳ್ಳಿ ಹೋಬಳಿ ಹಾಗೂ ಯಳಂದೂರು ತಾಲೂಕು ಸೇರಿದೆ. 1952ರ ಮೊದಲ ಚುನಾವಣೆಯಲ್ಲಿ ಕೊಳ್ಳೇಗಾಲ ಮದ್ರಾಸ್ ಪ್ರಾಂತದಲ್ಲಿತ್ತು. ಆಗ ಇದು ಕೊಯಮತ್ತೂರು ಜಿಲ್ಲೆಯ ಪಾಳ್ಯಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿತ್ತು. ಆಗ ವಿರೂಪಾಕ್ಷಪ್ಪ ಶಾಸಕರಾಗಿದ್ದರು. ಭಾಷಾವಾರು ಪ್ರಾಂತ ರಚನೆಯಾದಾಗ ಕೊಳ್ಳೇಗಾಲ ಕ್ಷೇತ್ರ ಮೈಸೂರು ರಾಜ್ಯಕ್ಕೆ ಸೇರಿತು. 1957ರಲ್ಲಿ ದ್ವಿಸದಸ್ಯ ಕ್ಷೇತ್ರವಿದ್ದಾಗ ಕಾಂಗ್ರೆಸ್‌ನ ಟಿ.ಪಿ. ಬೋರಯ್ಯ ಮತ್ತು ಕೆಂಪಮ್ಮ ಆಯ್ಕೆಯಾದರು. 1962, 1967ರಲ್ಲಿ ಬಿ. ಬಸವಯ್ಯ (ಕಾಂಗ್ರೆಸ್), 1972, 1978ರಲ್ಲಿ ಕಾಂಗ್ರೆಸ್‌ನ ಸಿದ್ದಮಾದಯ್ಯ, 1983 ಹಾಗೂ 1985ರಲ್ಲಿ ಜನತಾಪಕ್ಷದಿಂದ ಬಿ. ಬಸವಯ್ಯ, 1989ರಲ್ಲಿ ಕಾಂಗ್ರೆಸ್‌ನಿಂದ ಸಿದ್ದಮಾದಯ್ಯ, 1994ರಲ್ಲಿ ಜನತಾದಳದಿಂದ ಎಸ್. ಜಯಣ್ಣ, 1999ರಲ್ಲಿ ಕಾಂಗ್ರೆಸ್‌ನಿಂದ ಜಿ.ಎನ್. ನಂಜುಂಡಸ್ವಾಮಿ, 2004ರಲ್ಲಿ ಪಕ್ಷೇತರರಾಗಿ ಎಸ್. ಬಾಲರಾಜ್, 2008ರಲ್ಲಿ ಆರ್. ಧ್ರುವನಾರಾಯಣ, 2009ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಜಿ.ಎನ್. ನಂಜುಂಡಸ್ವಾಮಿ, 2013ರಲ್ಲಿ ಕಾಂಗ್ರೆಸ್‌ನಿಂದ ಎಸ್. ಜಯಣ್ಣ, 2018ರಲ್ಲಿ ಬಿಎಸ್‌ಪಿಯಿಂದ ಎನ್. ಮಹೇಶ್ ಆಯ್ಕೆಯಾಗಿದ್ದಾರೆ. ಬಿಎಸ್‌ಪಿಯಿಂದ ಉಚ್ಛಾಟಿತರಾದ ಎನ್. ಮಹೇಶ್ ಪ್ರಸ್ತುತ ಬಿಜೆಪಿ ಶಾಸಕರಾಗಿದ್ದಾರೆ.
Advertisement
ಹನೂರುರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹ ದೇಶ್ವರ ಬೆಟ್ಟವನ್ನು ಒಳಗೊಂಡಿರುವ ಹನೂರು ಕ್ಷೇತ್ರ ಹೆಚ್ಚು ಅರಣ್ಯ ಪ್ರದೇಶವನ್ನೇ ಹೊಂದಿದೆ. ಇದು ಕಾಡುಗಳ್ಳ ವೀರಪ್ಪನ್‌ನ ಕಾರ್ಯ ಕ್ಷೇತ್ರವೂ ಆಗಿತ್ತು. ಈ ಮೊದಲು ಕೊಳ್ಳೇಗಾಲ ತಾಲೂಕಿಗೆ ಒಳ ಪಟ್ಟಿದ್ದ ಈ ಕ್ಷೇತ್ರ ಈಗ ಪ್ರತ್ಯೇಕ ತಾಲೂಕಾಗಿದೆ. ಈ ಕ್ಷೇತ್ರ ಜಿ. ರಾಜೂಗೌಡ ಹಾಗೂ ಎಚ್. ನಾಗಪ್ಪ ಕುಟುಂಬಗಳ ನಡುವಿನ ಹೋರಾಟದ ಕಣ ಎಂದೇ ಹೆಸರಾಗಿದೆ. 1952ರಲ್ಲಿ ಮದ್ರಾಸ್ ಪ್ರಾಂತದಲ್ಲಿದ್ದ ಪಾಳ್ಯಂ ಕ್ಷೇತ್ರ ಬಳಿಕ 1957 ಹಾಗೂ 1962ರ ಚುನಾವಣೆಯಲ್ಲೂ ಪಾಳ್ಯಂ ಆಗೇ ಉಳಿದಿತ್ತು. ಆಗ ಪಕ್ಷೇತರರಾಗಿ ಜಿ. ವೆಂಕಟೇಗೌಡ (ಜಿ. ರಾಜೂಗೌಡರ ಅಣ್ಣ) ಗೆದ್ದಿದ್ದರು. 1962ರ ಚುನಾವಣೆಯಲ್ಲಿ ಪಕ್ಷೇತರ ವೆಂಕಟೇಗೌಡರು, ಕಾಂಗ್ರೆಸ್‌ನ ಎಚ್. ನಾಗಪ್ಪ ಅವರನ್ನು ಸೋಲಿಸಿ ಪುನರಾಯ್ಕೆಯಾ ದರು. 1967ರಲ್ಲಿ ಹನೂರು ಕ್ಷೇತ್ರ ಎಂದು ಬದಲಾಯಿತು. ಆಗ ಎಚ್. ನಾಗಪ್ಪ ಕಾಂಗ್ರೆಸ್‌ನಿಂದ ಗೆದ್ದರು. 1972ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್. ರಾಜೇಗೌಡ, ಸಂಸ್ಥಾ ಕಾಂಗ್ರೆಸ್‌ನ ಎಚ್. ನಾಗಪ್ಪನವರನ್ನು ಸೋಲಿಸಿ ಗೆದ್ದರು. 1978ರಲ್ಲಿ ಜಿ. ವೆಂಕ ಟೇಗೌಡರ ಸೋದರ ಜಿ. ರಾಜೂಗೌಡ ಕಾಂಗ್ರೆಸ್ ಐ ಅಭ್ಯ ರ್ಥಿಯಾಗಿ ಜನತಾ ಪಕ್ಷದ ಎಚ್. ನಾಗಪ್ಪ ಅವರ ವಿರುದ್ಧ ಗೆದ್ದರು. 1983ರಲ್ಲಿ ಕಾಂಗ್ರೆಸ್‌ನಿಂದ ಕೆ.ಪಿ. ಶಾಂತಮೂರ್ತಿ, 1985 ಹಾಗೂ 1989ರಲ್ಲಿ ಪಕ್ಷೇತರರಾಗಿ ಜಿ. ರಾಜೂಗೌಡ, 1994ರಲ್ಲಿ ಎಚ್. ನಾಗಪ್ಪ, 1999ರಲ್ಲಿ ಕಾಂಗ್ರೆಸ್‌ನಿಂದ ಜಿ. ರಾಜೂಗೌಡ, 2004ರಲ್ಲಿ ಜೆಡಿಎಸ್‌ನಿಂದ ಪರಿಮಳಾ ನಾಗಪ್ಪ, 2008, 2013, 2018ರಲ್ಲಿ ಕಾಂಗ್ರೆಸ್‌ನಿಂದ ಆರ್. ನರೇಂದ್ರ (ಜಿ. ರಾಜೂಗೌಡರ ಪುತ್ರ) ಗೆದ್ದು ಹ್ಯಾಟ್ರಿಕ್ ಸಾಧಿಸಿದರು. ಪ್ರಸ್ತುತ ಅವರೇ ಶಾಸಕರಾಗಿದ್ದಾರೆ. ಗುಂಡ್ಲುಪೇಟೆ
ಈ ಕ್ಷೇತ್ರಕ್ಕೆ ಗುಂಡ್ಲು ಪೇಟೆ ತಾಲೂಕಿನ ಎಲ್ಲ ಪ್ರದೇಶಗಳು ಹಾಗೂ ಚಾಮರಾಜನಗರ ತಾಲೂಕಿನ ಹರವೆ ಹೋಬಳಿಯ ಕೆಲವು ಗ್ರಾಮಗಳು ಒಳಪಡುತ್ತವೆ. ಕ್ಷೇತ್ರದಲ್ಲಿ 1952ರಿಂದ 2018ರ ಚುನಾವಣೆಯುವರೆಗೂ ವೀರಶೈವ ಅಭ್ಯರ್ಥಿಗಳೇ ಆರಿಸಿಬಂದಿದ್ದಾರೆ. 15 ಚುನಾವಣೆಗಳನ್ನು ಎದುರಿಸಿರುವ ಈ ಕ್ಷೇತ್ರದಿಂದ ಇದುವರೆಗೆ ಆಯ್ಕೆಯಾಗಿರುವವರು ಆರೇ ಮಂದಿ ಶಾಸಕರು. ಇದು ರಾಜ್ಯದ ಮೊದಲ ಮಹಿಳಾ ಸ್ಪೀಕರ್ ಕೆ.ಎಸ್. ನಾಗರತ್ನಮ್ಮ ಹಾಗೂ ಸಚಿವ ಎಚ್. ಎಸ್. ಮಹದೇವಪ್ರಸಾದ್ ಅವರ ಪ್ರಾಬಲ್ಯದ ಕ್ಷೇತ್ರ. ಮಹಿಳೆಯರು ರಾಜಕಾರಣದಲ್ಲಿ ನೆಲೆಯೂರಲು ಇಂದಿಗೂ ಕಷ್ಟವಾಗಿರುವ ಸನ್ನಿವೇಶದಲ್ಲಿ, ಈ ಕ್ಷೇತ್ರವನ್ನು ನಾಗರತ್ನಮ್ಮ 7 ಬಾರಿ ಶಾಸಕಿಯಾಗಿ ಪ್ರತಿನಿಧಿಸಿದ್ದಾರೆ. ಅಮ್ಮನವರ ಬಳಿಕ ಎಚ್.ಎಸ್.ಮಹದೇವಪ್ರಸಾದ್ 5 ಬಾರಿ ಆರಿಸಿಬಂದಿದ್ದಾರೆ. 1952ರಲ್ಲಿ ದ್ವಿಸದಸ್ಯ ಕ್ಷೇತ್ರವಾಗಿ ದ್ದಾಗ ಎಚ್.ಕೆ. ಶಿವರುದ್ರಪ್ಪ, ಸಿದ್ದಯ್ಯ (ಕುನ್ನಯ್ಯ) ಪಕ್ಷೇತರರಾಗಿ ಗೆದ್ದುಬಂದಿದ್ದರು. ಬಳಿಕ 1957, 1962, 1967, 1972, 1983, 1985, 1989ರಲ್ಲಿ ಕೆ.ಎಸ್. ನಾಗರತ್ನಮ್ಮ ಆರಿಸಿಬಂದಿದ್ದರು. ಮೊದಲ ಎರಡು ಚುನಾವಣೆಯಲ್ಲಿ ಪಕ್ಷೇತರ ರಾಗಿ, ಇನ್ನುಳಿದ ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಅಮ್ಮ (ಅವರನ್ನು ಅಮ್ಮ ಎಂದೇ ಜನರು ಕರೆಯುತ್ತಿದ್ದರು) ಶಾಸಕಿಯಾಗಿದ್ದರು. 1978ರಲ್ಲಿ ಎಚ್.ಕೆ. ಶಿವರುದ್ರಪ್ಪ ಅವರು ಗೆದ್ದಿದ್ದರು. 7ನೇ ಬಾರಿ ಶಾಸಕಿಯಾಗಿದ್ದಾಗ ಅವರಿಗೆ ಮೊದಲ ಸಚಿವ ಸ್ಥಾನ ದೊರಕಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವೆಯಾಗಿದ್ದಾಗ ಅನಾರೋಗ್ಯದಿಂದ ನಿಧನಹೊಂದಿದರು. ಬಳಿಕ 1994ರಿಂದ 2013 ರವರೆಗೆ ಐದು ಬಾರಿ ಎಚ್.ಎಸ್. ಮಹದೇವಪ್ರಸಾದ್ ಶಾಸಕರಾಗಿದ್ದರು. ಜನತಾದಳ, ಸಂಯುಕ್ತ ಜನತಾದಳ, ಜೆಡಿಎಸ್, ಕಾಂಗ್ರೆಸ್‌ನಿಂದ ಅವರು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು. ಸಿದ್ದರಾಮಯ್ಯ ಸಂಪುಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್.ಎಸ್.ಎಂ. 2017ರಲ್ಲಿ ನಿಧನರಾದ ಬಳಿಕ ಅವರ ಪತ್ನಿ ಗೀತಾ ಮಹದೇವಪ್ರಸಾದ್ ಉಪಚುನಾವಣೆಯಲ್ಲಿ ಜಯಗಳಿಸಿದರು. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆಯಿತು. ಸಿ.ಎಸ್. ನಿರಂಜನಕುಮಾರ್ ಅವರು ಗೆದ್ದು ಬಂದು ಪ್ರಸ್ತುತ ಶಾಸಕರಾಗಿದ್ದಾರೆ. -ಕೆ.ಎಸ್. ಬನಶಂಕರ ಆರಾಧ್ಯ