ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ರದ್ದುಮಾಡಿ, ಪ್ರಥಮ ಪಿಯುಸಿ ಹಾಗೂ ಎಸೆಸೆಲ್ಸಿ ಅಂಕದ ಮಾನದಂಡದಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲು ಸರಕಾರ ನಿರ್ಧರಿಸಿದೆ. ಇದರಿಂದ ಎಂಜಿನಿಯರಿಂಗ್, ವೈದ್ಯಕೀಯ, ದಂತವೈದ್ಯಕೀಯ, ಕೃಷಿ ವಿಜ್ಞಾನ, ಪಶುವೈದ್ಯಕೀಯ, ಫಾರ್ಮಸಿ ಕೋರ್ಸ್‌ಗಳ ಪ್ರವೇಶಕ್ಕೆ ದ್ವಿತೀಯ ಪಿಯುಸಿ ಅಂಕ ಪರಿಗಣಿಸುವುದು ಕಷ್ಟವಾಗಲಿದೆ ಎಂಬ ಕಾರಣಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಆಧಾರದಲ್ಲೇ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ನಡೆಸಲು ತೀರ್ಮಾನಿಸಿದೆ.
ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಪರೀಕ್ಷೆಗಳು ಸರಿಯಾಗಿ ನಡೆಸಲು ಸಾಧ್ಯವಾಗದೇ ಇರುವುದರಿಂದ ಸದ್ಯದ ಮಟ್ಟಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿ ಮತ್ತು ಭವಿಷ್ಯವನ್ನು ಗಮನ ದಲ್ಲಿಟ್ಟುಕೊಂಡು ಉತ್ತಮ ನಿರ್ಧಾರ ತೆಗೆದುಕೊಂಡಿದೆ.
ಆದರೆ ಸರಕಾರದ ಈ ನಿರ್ಧಾರದಿಂದ ನೀಟ್, ಜೆಇಇ, ಕ್ಲಾಟ್, ಅಖೀಲ ಭಾರತ ಮಟ್ಟದ ಆರ್ಕಿಟೆಕ್ಚರ್ ಪ್ರವೇಶ ಪರೀಕ್ಷೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ರಾಜ್ಯದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲೂ ಅನನುಕೂಲ ಆಗದಂತೆ ಸರಕಾರ ಎಚ್ಚರ ವಹಿಸಬೇಕು.
ಸಿಇಟಿ ರಾಜ್ಯ ಸರಕಾರದ ಅಧೀನದಲ್ಲಿ ಇರುವ ಪರೀಕ್ಷಾ ಮಂಡಳಿ ನಡೆಸುವುದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಇದರಿಂದ ಅನ್ಯಾಯ ವಾಗುವ ಸಾಧ್ಯತೆ ಇಲ್ಲ. ಆದರೆ, ನೀಟ್, ಜೆಇಇ, ಕ್ಲಾಟ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಯನ್ನು ದೇಶದ ಬೇರೆ ಬೇರೆ ಸಂಸ್ಥೆಗಳು ನಡೆಸುವುದರಿಂದ ದೇಶದ ಎಲ್ಲ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಡೆಸುತ್ತವೆ. ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಎಲ್ಲ ಸಂಸ್ಥೆಗಳು ಕೂಡ ಪ್ರಸಕ್ತ ಸಾಲಿಗೆ ಅನ್ವಯವಾಗುವಂತೆ ದ್ವಿತೀಯ ಪಿಯುಸಿ ಅಂಕವನ್ನು ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸದೇ ಇರುವಂತೆ ಮಾಡುವ ಮಹತ್ತರ ಜವಾಬ್ದಾರಿ ರಾಜ್ಯ ಸರಕಾರದ ಮುಂದಿದೆ. ಹಾಗೆಯೇ ಖಾಸಗಿ ವಿಶ್ವವಿದ್ಯಾನಿಲಯ, ಡೀಮx… ವಿಶ್ವವಿದ್ಯಾನಿಲಯಗಳು ಇದನ್ನು ಅನುಷ್ಠಾನಕ್ಕೆ ತರುವಂತೆ ಮಾಡಬೇಕು. ಇದನ್ನು ಸರಕಾರ, ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಮರ್ಥವಾಗಿ ನಿಭಾಯಿಸ ಬೇಕಿದೆ. ಇದೊಂದು ವಿಶೇಷ ಸಂದರ್ಭವಾದರೂ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಅಥವಾ ಶೈಕ್ಷಣಿಕ ಭವಿಷ್ಯಕ್ಕೆ ಯಾವುದೇ ರೀತಿಯಲ್ಲಿ ಕುಂದಾಗದಂತೆ ಗಮನ ಹರಿಸಲೇ ಬೇಕಾಗುತ್ತದೆ.
ವಿಜ್ಞಾನ ವಿಭಾಗದ ಪದವಿ ಕೋರ್ಸ್‌ಗಳಿಗೆ ಸಿಇಟಿ ಮೂಲಕವೇ ಪ್ರವೇಶ ಪ್ರಕ್ರಿಯೆ ನಡೆಸುವ ಬಗ್ಗೆಯೂ ಸರಕಾರ ಚಿಂತನೆ ನಡೆಸುತ್ತಿರುವುದು ಉತ್ತಮ ನಡೆಯಾಗಿದೆ. ಆದಷ್ಟು ಬೇಗ ಈ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸುವಂತಾಗಬೇಕು. ಈ ವರ್ಷ ದ್ವಿತೀಯ ಪಿಯುಸಿಯ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗುವುದರಿಂದ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಕೋರ್ಸ್‌ಗೆ ಸೇರಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಲಿದೆ. ಹೀಗಾಗಿ ವಿಜ್ಞಾನ ವಿಭಾಗದ ಪ್ರವೇಶ ಸಿಇಟಿ ಮೂಲಕ ಮಾಡುವುದರಿಂದ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಲ್ಲೂ ಮಹತ್ವದ ಹೆಜ್ಜೆಯಾಗಲಿದೆ.