ಉಡುಪಿ/ ಬ್ರಹ್ಮಾವರ: ಕರಾವಳಿಯ ಕಲಾವಿದನ ಕೈಚಳಕಕ್ಕೆ ಕೇಂದ್ರ ಸಚಿವೆಯೂ ಮನಸೋತಿದ್ದಾರೆ. ಉಪ್ಪೂರು ಕೊಳಲಗಿರಿಯ ಗಣೇಶ್ ಪೂಜಾರಿ ಹಾವಂಜೆ ರೂಪಿಸಿದ ಹಣೆ ಮೇಲೆ ಕ್ಯೂ ಆರ್ ಕೋಡ್ ಸಹಿತ ವಾಲಗದ ನಾದಕ್ಕೆ ಕುಣಿಯುವ ಬಸವನ ಕಲಾಕೃತಿ ಹಳ್ಳಿಗಳಲ್ಲಿಯೂ ಡಿಜಿಟಲ್ ವ್ಯವಹಾರವನ್ನು ಪ್ರತಿಬಿಂಬಿಸುತ್ತಿದೆ. ಕರಾವಳಿ ಯಕ್ಷಗಾನ ಕಲೆಯ ಒಲವುಳ್ಳ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಯಕ್ಷ ಮುಖವಾಡದಿಂದ ಪ್ರಭಾವಿತರಾಗಿ 100 ಮುಖವಾಡ ಕಳಿಸಲು ಸೂಚಿಸಿದ್ದರು.
ವಾಲಗ ನಾದಕ್ಕೆ ಕುಣಿವ ಡಿಜಿಟಲ್ ಕೋಲೆ ಬಸವನ ಸುಂದರ ಕಲಾಕೃತಿಯನ್ನು ಬೆಂಗಳೂರಿನಲ್ಲಿ ನಡೆದ ಜಿ20 ರಾಷ್ಟ್ರಗಳ ವಿತ್ತ ಸಚಿವರ ಶೃಂಗದಲ್ಲಿ ಪ್ರದರ್ಶನಕ್ಕಿಡಲಾಯಿತು. ಈ ಕಲಾ ಕೌಶಲಕ್ಕೆ ಮೆಚ್ಚುಗೆ ಜತೆಗೆ ವಿವಿಧೆಡೆಗಳಿಂದ ಅಪಾರ ಬೇಡಿಕೆಯೂ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಗಣೇಶ್ ಪೂಜಾರಿ ಹಾವಂಜೆ. ಇವರಿಗೆ ಬಾಲ್ಯದಲ್ಲಿ ಕಲಾಸಕ್ತಿಯಿದ್ದರೂ ಕಲಾ ಶಾಲೆಗೆ ತೆರಳುವ ಅನುಕೂಲ ಇರಲಿಲ್ಲ.
ಬಡತನದ ಹಿನ್ನೆಲೆಯಲ್ಲಿ 10ನೇ ತರಗತಿ ಬಳಿಕ ಮುಂಬಯಿ ಸೇರಿ ಕ್ಯಾಂಟೀನ್‌ನಲ್ಲಿ ಕೆಲಸ, ರಾತ್ರಿ ಶಾಲೆಗೆ ತೆರಳಿ ಪಿಯುಸಿ ಓದಿದರು. ಕಲಾವಿದನಾಗಿ ಸಾಧನೆ ಮಾಡುವ ತುಡಿತಕ್ಕೆ ಮುಂಬಯಿ ಮಾಯಾ ಜಗತ್ತು ಪ್ರೇರಣೆ ನೀಡಿತು. ಮಣಿಪಾಲದಲ್ಲಿ ಕಲ್ಚರ್ ಫ್ಯೂಚರ್ ಕ್ರಾಫ್ಟ್ ಸಂಸ್ಥೆ ಆರಂಭಿಸಿ ಕಲ್ಲು, ಗೆರಟೆ, ಬಟ್ಟೆ ಸಹಿತ ಪ್ರಾಕೃತಿಕ ವಸ್ತು ಕೈಗೆ ಸಿಕ್ಕಿದರೆ ಅದಕ್ಕೆ ಸುಂದರ ಕಲಾರೂಪ ನೀಡುವ ಕೌಶಲ ಇವರದ್ದು.
ಮಣಿಪಾಲದ ಮಾಹೆ ವಿವಿ, ಕೆಎಂಸಿ ಸಹಿತ ದೇಶ-ವಿದೇಶದ ವಿದ್ಯಾರ್ಥಿಗಳಿಗೆ ಮಿನಿಯೇಚರ್ ಆರ್ಟ್, ಸ್ಮರಣಿಕೆ ರೂಪಿಸಿ 9 ವರ್ಷಗಳ ಕಾಲ ನೀಡಿದ್ದರು. ಬಳಿಕ ಸಂಸ್ಥೆಯನ್ನು ಹಾವಂಜೆಯ ಮನೆಯ ಬಳಿಗೆಸ್ಥಳಾಂತರಿಸಿದ್ದರು. ಇವರು ರೂಪಿಸಿದ ಕಲಾಕೃತಿಗಳು ವಿವಿಧ ರಾಷ್ಟ್ರ ಗಳಲ್ಲಿ ಭಾರತೀಯ ಕಲಾ ಶ್ರೀಮಂತಿಕೆಯ ಸೊಬಗು ಬಿಂಬಿಸುತ್ತಿವೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಡಿಜಿಟಲ್ ಇಂಡಿಯಾ ಪ್ರಗತಿಯ ಕಿಮ್ಮತ್ತು, ಹಳ್ಳಿಗಳಲ್ಲಿಯೂ ನಡೆಯುವ ವ್ಯವಹಾರದ ಬಗ್ಗ ಪ್ರಸ್ತಾವಿಸಿದ್ದರು. ಕರ್ನಾಟಕ, ತಮಿಳುನಾಡುವಿನಲ್ಲಿ ಸಂಕ್ರಾಂತಿ ಹಬ್ಬದ ವೇಳೆ ಬರುವ ಕೋಲೆ ಬಸವನಿಗೆ ಕೊಡುವ ಬಟ್ಟೆ, ಧಾನ್ಯ ಜೋಳಿಗೆಗೆ ಹಾಕಿದರೂ ನಗದು ಕೊಡಲಾಗದವರು ಬಸವನ ಹಣೆ ಮೇಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ದುಡ್ಡು ನೀಡುವಷ್ಟು ಡಿಜಿಟಲ್ ಇಂಡಿಯಾ ಯೋಜನೆ ಪ್ರಗತಿ ಸಾಧಿಸಿದ್ದನ್ನು ಶ್ಲಾಘಿಸಿದ್ದರು.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಜಿ20 ರಾಷ್ಟ್ರಗಳ ವಿತ್ತ ಸಚಿವರ, ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥರ ಸಭೆ ಹಿನ್ನೆಲೆಯಲ್ಲಿ ಈ ಹಿಂದೆ ಹೊಸದಿಲ್ಲಿ ಕರ್ನಾಟಕ ಭವನದ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ಉಡುಪಿ ಜಿ.ಪಂ.ಸಿಇಒ ಪ್ರಸನ್ನ ಎಚ್. ಮುತುವರ್ಜಿಯಿಂದ ಗಣೇಶ್ ಹಾವಂಜೆ ಅವರು ಡಿಜಿಟಲ್ ಕೋಲೆ ಬಸವನ ಕಲಾಕೃತಿ ಹಾಗೂ ಗೋಡೆಯಲ್ಲಿ ತೂಗು ಹಾಕಬಹುದಾದ ಯಕ್ಷ ಮುಖವಾಡ, ಯಕ್ಷ ವೇಷದ ಎರಡು ಅಡಿಯ ಮೂರ್ತಿ ತಯಾರಿಸಿ ವಿಮಾನದಲ್ಲಿ ಹೊಸದಿಲ್ಲಿಗೆ ಕಳುಹಿಸಿದ್ದರು.