ಹೊಸದಿಲ್ಲಿ: ಕೇಂದ್ರ ಸರಕಾರಿ ನೌಕರರು ತಮ್ಮ ಮೊಬೈಲ್‌ಗಳಲ್ಲಿ ‘ಆರೋಗ್ಯ ಸೇತು’ ಆ್ಯಪ್ ಹಾಕಿಕೊಳ್ಳುವುದು ಕಡ್ಡಾಯ ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯ ಬುಧವಾರ ಆದೇಶ ನೀಡಿದೆ.
ಕೋವಿಡ್ ವೈರಸ್ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಅಧಿಕಾರಿಗಳು ಮತ್ತು ಹೊರಗುತ್ತಿಗೆ ಸಿಬಂದಿ ಸೇರಿದಂತೆ ಎಲ್ಲ ಕೇಂದ್ರ ಸರಕಾದ ನೌಕರರಿಗೆ ಅನ್ವಯವಾಗಲಿದೆ.
ಕಚೇರಿ ಕೆಲಸಗಳು ಆರಂಭವಾಗುವುದಕ್ಕೂ ಮುನ್ನ ಅವರೆಲ್ಲರ ಆರೋಗ್ಯ ಸ್ಥಿತಿಯನ್ನು ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಲಾಗುತ್ತದೆ, ಕೋವಿಡ್ ವೈರಸ್ ತಗುಲಿಲ್ಲ, ಸುರಕ್ಷಿತವಾಗಿದ್ದಾರೆ ಎಂದು ಆ್ಯಪ್ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಕರ್ತವ್ಯಕ್ಕೆ ಹಾಜರಾಗಲು ಅವಕಾಶ ಸಿಗಲಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಆಡಳಿತ ವಿಭಾಗದ ಎಲ್ಲ ಸಿಬಂದಿ, ಸಚಿವಾಲಯ, ಕ್ಯಾಬಿನೆಟ್ ಸಚಿವಾಲಯ ಹಾಗೂ ಪ್ರಧಾನ ಮಂತ್ರಿ ಕಚೇರಿಗೆ ಮಾಹಿತಿಯನ್ನು ಈಗಾಗಲೇ ಕಳಿಸಿಕೊಡಲಾಗಿದೆ.
‘ಆರೋಗ್ಯ ಸೇತು’ ಆ್ಯಪ್ ಬಳಸುವುದರಿಂದ ಕೋವಿಡ್ ವೈರಸ್ ಪೀಡಿತ ವ್ಯಕ್ತಿ ಹತ್ತಿರಕ್ಕೆ ಬಂದರೆ ತಕ್ಷಣ ಎಚ್ಚರಿಕೆಯ ಸಂದೇಶ ನಿಮ್ಮ ಮೊಬೈಲ್‌ಗೆ ಬರುತ್ತದೆ. ಇದರಿಂದ ಸುಲಭವಾಗಿ ಸೋಂಕಿತರನ್ನು ಕಂಡು ಹಿಡಿಯಬಹುದಾಗಿದ್ದು ಅಪಾಯದಿಂದ ಪಾರಾಗಬಹುದಾಗಿದೆ.