Advertisement

5ರವರೆಗೆ ಮಾತೃಭಾಷಾ ಶಿಕ್ಷಣ ; ಕೇಂದ್ರದಿಂದ 2020ರ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಟ

02:25 AM Jul 30, 2020 | Hari Prasad |

ಹೊಸದಿಲ್ಲಿ: ನಮ್ಮ ಶಿಕ್ಷಣ ವ್ಯವಸ್ಥೆ ಇನ್ನು 10+2 ಅಲ್ಲ; 5+3+3+4 ಮಾದರಿಯದ್ದು… 5ನೇ ತರಗತಿ ವರೆಗೂ ಮಾತೃಭಾಷೆಯಲ್ಲೇ ಶಿಕ್ಷಣ… ಪದವಿ ಶಿಕ್ಷಣದ ಮಧ್ಯೆಯೇ ಕೋರ್ಸ್‌ ತೊರೆಯುವ ವಿದ್ಯಾರ್ಥಿಗೆ ಆತನ ಕಲಿಕಾ ಮಟ್ಟಕ್ಕೆ ತಕ್ಕಂತೆ ಪ್ರಮಾಣ ಪತ್ರ…

Advertisement

ದೇಶದ ಇಡೀ ಉನ್ನತ ವ್ಯಾಸಂಗ ಸಂಸ್ಥೆಗಳಲ್ಲಿನ್ನು ಬಹು ವಿಷಯ ಬೋಧನಾ ವ್ಯವಸ್ಥೆ… ಶಿಕ್ಷಣದ ಜತೆಗೆ ಮಾತೃಭಾಷಾ ಶಿಕ್ಷಣ, ಜೀವನ ಕಲೆ ಗಳು, ಸಾಂಸ್ಕೃತಿಕ ಕಲೆಗಳ ಕಲಿಕೆಗೆ ಅವಕಾಶ…

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ತರುವ ಉದ್ದೇಶದಿಂದ ರೂಪಿಸಿರುವ 2020ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ ಪ್ರಮುಖ ಅಂಶಗಳಿವು.

ಇಸ್ರೋದ ಮಾಜಿ ಮುಖ್ಯಸ್ಥ ಕಸ್ತೂರಿರಂಗನ್‌ ನೇತೃತ್ವದ ಸಮಿತಿ ನೀಡಿದ್ದ ಶಿಫಾರಸಿನನ್ವಯ ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಾಗುತ್ತಿದ್ದು, ಮಾನವ ಸಂಪದ ಸಚಿವ ರಮೇಶ್‌ ಪೋಖ್ರಿಯಾಲ್‌ ಮತ್ತು ಕೇಂದ್ರ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಬುಧವಾರ ರೂಪ ರೇಖೆ ಪ್ರಕಟಿಸಿದ್ದಾರೆ.

ಪ್ರಾದೇಶಿಕ ಭಾಷಾ ಮಾಧ್ಯಮಕ್ಕೆ ಒತ್ತು
ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರೀ-ನರ್ಸರಿಯಿಂದ 5ರ ವರೆಗೆ ವಿದ್ಯಾರ್ಥಿಗಳು ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲೇ ಕಲಿಯಲು ಅವಕಾಶ ಕಲ್ಪಿಸಿದೆ. ಇದನ್ನು 8ನೇ ತರಗತಿವರೆಗೆ ಮುಂದುವರಿಸಬಹುದು ಇದರ ಅಭಿಪ್ರಾಯ. ದೇಶಾದ್ಯಂತ ತ್ರಿಭಾಷಾ ಸೂತ್ರ ಅಳವಡಿಸಿಕೊಂಡು, ಸಂಸ್ಕೃತವನ್ನು ಒಂದು ಭಾಷೆಯಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ.

Advertisement

ಕನ್ನಡ ಸಹಿತ ದೇಶದಲ್ಲಿರುವ ಶಾಸ್ತ್ರೀಯ ಭಾಷೆ ಸ್ಥಾನಮಾನ ಹೊಂದಿರುವ ಭಾಷೆಗಳನ್ನು ಕೂಡ ಮಕ್ಕಳಿಗೆ ಐಚ್ಛಿಕವಾಗಿ ನೀಡಲಾಗುತ್ತದೆ. ಆದರೆ ಯಾವುದೇ ವಿದ್ಯಾರ್ಥಿ ಮೇಲೆ ಯಾವುದೇ ಭಾಷೆಯನ್ನು ಹೇರಬಾರದು ಎಂದೂ ಸೂಚಿಸಲಾಗಿದೆ.

ಒಂದೇ ಪ್ರವೇಶ ಪರೀಕ್ಷೆ
ಎಲ್ಲ ಉನ್ನತ ಕೋರ್ಸ್‌ಗಳಿಗೆ ದೇಶಾದ್ಯಂತ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ಇರಲಿದೆ. ಆದರೆ ಇದು ವಿದ್ಯಾರ್ಥಿಗಳಿಗೆ ಕಡ್ಡಾಯವಲ್ಲ. ಈ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ) ನಡೆಸುತ್ತದೆ.

5+3+3+4
ಈಗ ಶಿಕ್ಷಣ ವ್ಯವಸ್ಥೆ 10+2 ನಿಯಮದಡಿ ಕಾರ್ಯ ನಿರ್ವ ಹಿಸುತ್ತಿತ್ತು. ಅದನ್ನು ಈಗ 5+3+3+4 ಎಂದು ಬದಲಾಯಿಸಲಾಗಿದೆ. ಈಗ ಮೂರು ವರ್ಷದ ಪ್ರೀ-ಪ್ರೈಮರಿ ಅಥವಾ ಅಂಗನವಾಡಿ ಹಾಗೂ 1ನೇ ಹಾಗೂ 2ನೇ ತರಗತಿಯನ್ನು ‘ಅಡಿಪಾಯದ ಹಂತ’, ಆನಂತರದ 3, 4 ಹಾಗೂ 5ನೇ ತರಗತಿಗಳನ್ನು ‘ಪೂರ್ವಭಾವಿ ಹಂತ’ ಎಂದೂ 6, 7 ಮತ್ತು 8ನೇ ತರಗತಿಗಳನ್ನು ‘ಮಾಧ್ಯಮಿಕ ಹಂತ’ ಎಂದೂ ಕರೆಯಲಾಗುತ್ತದೆ. 9ರಿಂದ 12ನೇ ತರಗತಿ ವರೆಗೆ “ಪ್ರೌಢ ಶಿಕ್ಷಣ ಹಂತ’ ಎಂದು ಕರೆಯಲಾಗುತ್ತದೆ.

ಎಚ್‌ಆರ್‌ಡಿ ಹೆಸರು ಬದಲು
ಕೇಂದ್ರ ಮಾನವ ಸಂಪದ ಅಭಿವೃದ್ಧಿ (ಎಚ್‌ಆರ್‌ಡಿ) ಇಲಾಖೆ ಹೆಸರನ್ನು ಕೇಂದ್ರ ಶಿಕ್ಷಣ ಇಲಾಖೆ ಎಂದು ಬದಲಿಸುವ ಪ್ರಸ್ತಾವನೆಗೆ ಬುಧವಾರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

34 ವರ್ಷಗಳ ಅನಂತರ ಪರಿಷ್ಕರಣೆ
ರಾಷ್ಟ್ರೀಯ ಶಿಕ್ಷಣ ನೀತಿಯ ಬದಲಾವಣೆ ಬಿಜೆಪಿಯ 2014ರ ಚುನಾವಣ ಆಶ್ವಾಸನೆಗಳಲ್ಲೊಂದಾಗಿತ್ತು.
ನಿಜಕ್ಕೂ ರಾಷ್ಟ್ರೀಯ ಶಿಕ್ಷಣ ನೀತಿಯು 1986ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. 1992ರಲ್ಲಿ ಅದನ್ನು ಪರಿಷ್ಕರಿಸಲಾಗಿತ್ತು. ಈಗ 34 ವರ್ಷಗಳ ಅನಂತರ ಅದಕ್ಕೆ ಕಾಯಕಲ್ಪ ಸಿಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next