ತಿರುಪತಿ: ತಿರುಪತಿಯ ಎಸ್.ವಿ. ಗೋ ಸಂರಕ್ಷಣಾ ಶಾಲಾದಲ್ಲಿ ದೇಸಿ ಹಸುಗಳ ತಳಿ ಅಭಿವೃದ್ಧಿಗಾಗಿ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲು ತಿರುಪತಿ ತಿರುಮಲ ದೇವಸ್ಥಾನಮ್ಸ್(ಟಿಟಿಡಿ) ನಿರ್ಧರಿಸಿದೆ.
ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ(ಎನ್‌ಡಿಡಿಬಿ) ಮತ್ತು ಟಿಟಿಡಿ ಜಂಟಿಯಾಗಿ ಈ ಕೇಂದ್ರ ಸ್ಥಾಪಿಸಲಿದ್ದು, ಇದಕ್ಕೆ ಅಗತ್ಯವಿರುವ ನಿಧಿಯನ್ನು ರಾಷ್ಟ್ರೀಯ ಗೋಕುಲ್ ಯೋಜನೆಯನ್ವಯ ಒದಗಿಸಲಾಗುತ್ತದೆ ಎಂದು ಟಿಟಿಡಿ ಕಾರ್ಯಕಾರಿ ಅಧಿಕಾರಿ ಎ.ವಿ.ಧರ್ಮ ರೆಡ್ಡಿ ತಿಳಿಸಿದ್ದಾರೆ.
ಎನ್‌ಡಿಡಿಬಿ ಮತ್ತು ಎಸ್.ವಿ.ಪಶುವೈದ್ಯಕೀಯ ಕಾಲೇಜಿನ ಪ್ರೊಫೆಸರ್‌ಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ರೆಡ್ಡಿ ಅವರು, ಮೀನುಗಾರಿಕೆ ಮತ್ತು ಹೈನುಗಾರಿಕೆ ಸಚಿವಾಲಯವು ದೇಶೀಯ ಹಸುಗಳ ಸಂರಕ್ಷಣೆ ಮತ್ತು ಈ ತಳಿಗಳ ಅಭಿವೃದ್ಧಿಗಾಗಿ 5 ವರ್ಷಗಳ ಅವಧಿಗೆ 46 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ.
ಕೃತಕ ಗರ್ಭಧಾರಣೆ, ಭ್ರೂಣ ವರ್ಗಾವಣೆ ತಂತ್ರಜ್ಞಾನ ಮುಂತಾದ ಸುಧಾರಿತ ಸಂತಾನೋತ್ಪತ್ತಿ ವಿಧಾನಗಳು, ಗೋವುಗಳ ವಂಶವಾಹಿ ಸುಧಾರಣೆ ಪ್ರಕ್ರಿಯೆಗೆ ವೇಗ ನೀಡುವತ್ತ ಪ್ರಸ್ತಾವಿತ ಕೇಂದ್ರವು ಗಮನ ಹರಿಸಲಿದೆ ಎಂದೂ ಧರ್ಮ ರೆಡ್ಡಿ ತಿಳಿಸಿದ್ದಾರೆ.
ಟಿಟಿಡಿ ಈಗಾಗಲೇ ದೇಶೀಯ ಹಸುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ವಿವಿಧ ದೇವಸ್ಥಾನಗಳಿಗೆ ಸರಬರಾಜು ಮಾಡಲು 3 ಸಾವಿರ ಲೀಟರ್‌ನಷ್ಟು ಹಸುವಿನ ಹಾಲು, 60-100 ಕೆ.ಜಿ. ತುಪ್ಪ ಉತ್ಪತ್ತಿಗೆ ನಿರ್ಧರಿಸಿದೆ. ಹೀಗಾಗಿ, ಟಿಟಿಡಿಗೂ ಆರ್ಥಿಕ ನೆರವನ್ನು ಒದಗಿಸಲು ಎನ್‌ಡಿಡಿಬಿ ಮುಂದೆ ಬರಬೇಕು ಎಂದು ರೆಡ್ಡಿ ಹೇಳಿದ್ದಾರೆ.