Advertisement

ಸೆಂಟರ್‌ ಲೈನ್‌ ಮಹಾತ್ಮೆ ನಿಮಗೂ ಗೊತ್ತಿರಲಿ ರೇಖಾ ರಹಸ್ಯ !

02:08 PM Dec 04, 2017 | |

ನಾವು ಮನೆಯನ್ನು ಎಷ್ಟೇ ಗಟ್ಟಿಮುಟ್ಟಾಗಿ ಕಟ್ಟಿದರೂ ಅದರ ಭಾರ ಕಡೆಗೆ ಹೋಗುವುದು ಭೂಮಿಯ ಮೇಲೆಯೇ! ಹಾಗಾಗಿ ನಾವು ಪಾಯದ ಕೆಳಗಿನ ಮಣ್ಣಿಗೆ ಮನೆಯ ಭಾರ ಹೆಚ್ಚಾ ಕಡಿಮೆ ಆಗದಂತೆ ಒಂದೇ ರೀತಿಯಲ್ಲಿ ಪ್ರಸರಿಸಲು ಮಾರ್ಗದರ್ಶಿಯಾಗುವ ರೇಖೆಯನ್ನು ಪದೇಪದೇ ನೋಡುತ್ತ ಚೆಕ್‌ ಮಾಡುತ್ತ ಇರಬೇಕಾಗುತ್ತದೆ.

Advertisement

ಮನೆ ಕಟ್ಟುವಾಗ ಬರುವ ಅನೇಕ ಗುಣಮಟ್ಟದ ಸಂಗತಿಗಳ ಬಗ್ಗೆ ಮಾತ್ರ ಯೋಚಿಸುತ್ತೇವೆ. ಮುಖ್ಯವಾಗಿ ಇಡೀ ಮನೆ  ಈ “ಸೆಂಟರ್‌ ಲೈನ್‌’ ಎನ್ನುವ ಮಧ್ಯಂತರ ರೇಖೆಯ ಮೇಲೆ ನಿರ್ಧಾರವಾಗಿರುತ್ತದೆ. ಮನೆಯ ಕೆಳಮಟ್ಟದ ಪಾಯದಿಂದ, ಸೂರಿನ ಮೇಲೆ ಕಟ್ಟುವ ಪ್ಯಾರಾಪೆಟ್‌ವರೆಗೂ ಈ ರೇಖೆ ನಿರ್ಣಾಯಕವಾಗಿರುತ್ತದೆ. ಮನೆಯ ಮಾರ್ಕಿಂಗ್‌ ಶುರುವಾಗುವುದೇ ಈ ಸೆಂಟರ್‌ ಲೈನ್‌ ಗುರುತು ಹಾಕುವ ಮೂಲಕ. ನಂತರ ಇದರ ಆಧಾರದ ಮೇಲೆಯೇ ಪಾಯವನ್ನೂ ಅಗೆಯಲಾಗುವುದು. ಪಾಯ ಸರಿಯಾಗಿ ಅಗೆದಿದೆಯೋ ಇಲ್ಲವೋ ಎಂಬುದನ್ನು ನಾವು ಈ ಗೆರೆ ನೋಡಿ ಹೇಳಿಬಿಡಬಹುದು. ಆದುದರಿಂದ ಈ ರೇಖೆಯನ್ನು ಪಾಯದ ಪಕ್ಕದಲ್ಲಿ ಸಿಮೆಂಟಿನಲ್ಲಿ ಗುರುತುಹಾಕುವ ಪರಿಪಾಠವಿದೆ.

 ನೀವು ಕಲ್ಲಿನ ಇಲ್ಲವೇ ಇಟ್ಟಿಗೆ ಪಾಯ ಹಾಕುವಂತಿದ್ದರೆ, ಪ್ರತಿ ವರಸೆಯೂ ಕೆಳಮಟ್ಟದಲ್ಲಿ ಹಾಕಿದ  ವರಸೆಯ ಮೇಲೆ ಸರಿಯಾಗಿ ಕೂರಲು, ಸೆಂಟರ್‌ ಲೈನ್‌ ಮೂಲಕವೇ ಅಳತೆಯನ್ನು ನೋಡಲಾಗುತ್ತದೆ. ಇದೇ ರೀತಿ ನೋಡುತ್ತಿದ್ದರೆ, ನಮ್ಮ ಮನೆ ನಾವು ಹಾಕಿದ ವಿನ್ಯಾಸಕ್ಕೆ ಬದ್ಧವಾಗಿ ಮೇಲೇಳಲು ಸಾಧ್ಯ. ಕೆಲವೊಮ್ಮೆ ಕೆಲವೇ ಇಂಚಿನಷ್ಟು ಬದಲಾದರೂ, ಮುಂದೆ ಗೋಡೆ ಕಟ್ಟಲು ತೊಂದರೆ ಆಗುವುದರ ಜೊತೆಗೆ ಇಡಿ ಕಟ್ಟಡ ದುರ್ಬಲವಾಗುವ ಸಾಧ್ಯತೆಯೂ ಇರುತ್ತದೆ. ನಾವು ಮನೆಯನ್ನು ಎಷ್ಟೇ ಗಟ್ಟಿಮುಟ್ಟಾಗಿ ಕಟ್ಟಿದರೂ ಅದರ ಭಾರ ಕಡೆಗೆ ಹೋಗುವುದು ಭೂಮಿಯ ಮೇಲೆಯೇ! ಹಾಗಾಗಿ ನಾವು ಪಾಯದ ಕೆಳಗಿನ ಮಣ್ಣಿಗೆ ಮನೆಯ ಭಾರ ಹೆಚ್ಚಾ ಕಡಿಮೆ ಆಗದಂತೆ ಒಂದೇ ರೀತಿಯಲ್ಲಿ ಪ್ರಸರಿಸಲು ಮಾರ್ಗದರ್ಶಿಯಾಗುವ ರೇಖೆಯನ್ನು ಪದೇಪದೇ ನೋಡುತ್ತ ಚೆಕ್‌ ಮಾಡುತ್ತ ಇರಬೇಕಾಗುತ್ತದೆ.

 ಸೌಂದರ್ಯ ಅಡಿಗಿರುವುದು ರೇಖೆಗಳಲ್ಲಿ!
 ಮನೆ ಎಂದರೆ ಒಂದು ಡಬ್ಬದಂತೆ, ತೀರ ಸರಳವಾಗಿರಬೇಕು ಎಂದೇನೂ ಅಲ್ಲ.  ಮನೆಗೆ ಏನೇನು ಬೇಕೋ ಅದೆಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿಕೊಂಡರೆ, ಮನೆಗೆ ತಂತಾನೆ ಒಂದು ಸೊಬಗು ಸ್ವಾಭಾಕವಾಗೇ ಬರುತ್ತದೆ. ಮನೆಗೆ ಮೆರಗು ನೀಡುವ ಬಣ್ಣಕ್ಕೂ ಅದು ಯಾವ ಚೌಕಟ್ಟಿನೊಳಗೆ ಎಷ್ಟು ಇದೆ ಎಂಬುದನ್ನು ಆಧರಿಸಿ ಅದರ ಪರಿಣಾಮ ನಮ್ಮ ಮೇಲೆ ಬೀಳುತ್ತದೆ. ಕಡೆಗೆ ಇಲ್ಲಿಯೂ ರೇಖೆಗಳ ಪಾತ್ರ ಮುಖ್ಯವಾಗುತ್ತದೆ. ಹಾಗೆಯೇ ಕಿಟಕಿ ಬಾಗಿಲಿನ ಮೇಲೆ ಹಾಕುವ ಸಜ್ಜ, ಪೋರ್ಟಿಕೊ, ಬಾಲ್ಕನಿ, ಪ್ಯಾರಾಪೆಟ್‌ ಇತ್ಯಾದಿಯಲ್ಲೂ ರೇಖೆಗಳು ಪ್ರಮುಖವಾಗಿ ಕಾಣುತ್ತವೆ.

ಎರಡು ಮೂಲೆಗಳು ಕೂಡಿದರೆ ಬರುವ ರೇಖೆ ಒಂದು ಮೇಲ್‌ಮೈಮೇಲೆ “ಗಾಡಿ’ ಗ್ರೂವ್‌ ನಂತೆ ಹಾಕಿರುವ ರೇಖೆಗಳಿಗಿಂತ ಹೆಚ್ಚಿನ ಕಾರ್ಯ ನಿರ್ವಸುತ್ತದೆ. ಇದು ಒಂದು ಗಡಿಯನ್ನು ರೂಪಿಸುತಲಿದ್ದು, ಪ್ರಪೋಷನ್‌ಗಳು ಸರಿಯಾಗಿರಲು ಹೆಚ್ಚು ಸಹಾಯಕಾರಿ. ಕೆಲವೊಮ್ಮೆ ಒಂದು ಕಡೆ ಹೆಚ್ಚು ವಿನ್ಯಾಸ ಬಂದು ಇನ್ನೊಂದು ಕಡೆ ಜಾಳುಜಾಳಾಗಿದ್ದರೆ ಆಗ ಅನಿವಾರ್ಯವಾಗಿ ಒಂದಷ್ಟು ರೇಖೆಗಳನ್ನು ಹಾಗೆಯೇ ಅವುಗಳಿಂದ ಕೂಡಿದ ವಿವಿಧ ಆಕಾರದ ವಿಸ್ತಾರವಾದ ಸ್ಥಳಗಳನ್ನು ತೂಗಿಸಲು ಮಾಡುವುದುಂಟು. 

Advertisement

ರೇಲಿಂಗ್‌ ರೇಖೆಗಳು
ಮೊದಲ ಮಹಡಿ ಕಟ್ಟಿದರೆ, ಕೆಲವೊಮ್ಮೆ ನೆಲಮಹಡಿ ಜೊತೆ ಅಥವಾ ಪ್ರತ್ಯೇಕವಾಗಿ ಕಟ್ಟುವಾಗ ಒಂದಕ್ಕೊಂದು ತಾಳೆ ಆಗುವಂತೆ ನೋಡಿಕೊಳ್ಳುವುದು ಮುಖ್ಯ. ಇಲ್ಲದಿದ್ದರೆ ಒಂದಕ್ಕೊಂದು ಬೆರೆಯದೆ ಪ್ರತ್ಯೇಕವಾಗಿ ಕಾಣುತ್ತವೆ. ಹೀಗೆ ಮೇಲೆ ಹಾಗೂ ಕೆಳಗೆ ಕಟ್ಟುವುದನ್ನು ಬೆಸೆಯುವಲ್ಲಿಯೂ ರೇಖೆಗಳು ಮುಖ್ಯ ಪಾತ್ರವನ್ನು ವಹಿಸುತ್ತವೆ. ಕೆಲವೊಮ್ಮೆ ಕೆಳಗೆ ಬಳಸಿದ್ದ ವಸ್ತುಗಳನ್ನು ಮೇಲೆಯೂ ಬಳಸಿದರೆ, ಅವುಗಳ ಪುನರಾವೃತ್ತಿಯೇ ಒಂದು ಮಟ್ಟಕ್ಕೆ ಬೆಸೆಯುವ ಕಾರ್ಯ ನಿರ್ವಸುತ್ತದೆ. ಕೆಳಗಿನ ಮನೆಗೆ ಕ್ಲಾಡಿಂಗ್‌ ಮಾಡಿದ್ದರೆ, ಅದೇ ರೇಖೆಗಳನ್ನು ಮೇಲೆಯೂ ಮುಂದುವರಿಸಿ ಬೆಸೆಯಬಹುದು.

ತೂಕು ನೋಡಿ
ಕೆಲವೊಮ್ಮೆ ಮನೆಯ ಮೂಲೆಗಳು ಇಲ್ಲ ಕೆಲವೊಂದು ಭಾಗಗಳು ಬಾಗಿದಂತೆಯೂ, ಏನೋ ಸರಿ ಇಲ್ಲದಂತೆಯೂ ಇರುವಂತೆ ತೋರುತ್ತವೆ. ಹೀಗೆ ಆಗಲು ಮುಖ್ಯಕಾರಣ ಮೂಲೆ ತಿರುಗಿಸುವಾಗ ಕ್ವಾಲಿಟಿಕಡೆ ಗಮನಿಸದೆ ಇರುವುದೇ ಆಗಿರುತ್ತದೆ. ಎಲ್ಲ ಗೋಡೆ, ಕಾಲಂ, ಇತ್ಯಾದಿಯನ್ನು ನೋಡುವಾಗ ತೂಕು ಗುಂಡು ಉಪಯೋಗಿಸಿ ನೇರವಾಗಿ ಲಂಬಕ್ಕೆ ಇರುವಂತೆ ಮಾಡಬೇಕು. ಹಾಗೆಯೇ ಅಡ್ಡಕ್ಕೆ ಇರುವವು, ರಸಮಟ್ಟಕ್ಕೆ ಇರುವಂತೆ ನೋಡಿಕೊಂಡರೆ, ಆಗ ರೇಖೆಗಳು ನಿಖರವಾಗಿ ನಮ್ಮ ಕಣ್ಣಿಗೆ ಕಂಡು ಸಹಜವಾಗೇ ಸುಂದರವಾಗಿರುವುದರ ಜೊತೆಗೆ ಗಟ್ಟಿಮುಟ್ಟಾಗಿಯೂ ಕಾಣುತ್ತದೆ.

ಹೆಚ್ಚಿನ ಮಾಹಿತಿಗೆ ಫೋನ್‌ 98441 32826
 
ಆರ್ಕಿಟೆಕ್ಟ್ ಕೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next