Advertisement

ಕೋವಿಡ್‌ ನಿರ್ವಹಣೆಗೆ ಕೇಂದ್ರ ಅಧಿಕಾರಿಗಳ ಮೆಚ್ಚುಗೆ ; ಚಿಕಿತ್ಸೆಗೆ ಆದ್ಯತೆ ನೀಡಲು ಸೂಚನೆ

02:57 AM Jul 08, 2020 | Hari Prasad |

ಬೆಂಗಳೂರು: ಕೋವಿಡ್ 19 ಸೋಂಕಿನ ನಿರ್ವಹಣೆಗೆ ರಾಜ್ಯ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿರುವ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳ ತಂಡವು ಕೋವಿಡ್‌ ಸಾವು ತಡೆಗಟ್ಟುವ ಜತೆಗೆ ಸೋಂಕು ಪೀಡಿತರಿಗೆ ಸೂಕ್ತ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡುವಂತೆ ಸಲಹೆಯಿತ್ತಿದೆ.

Advertisement

ರಾಜ್ಯಕ್ಕೆ ಎರಡು ದಿನಗಳ ಭೇಟಿ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಆರತಿ ಅಹುಜಾ ಮತ್ತು ತುರ್ತು ವೈದ್ಯಕೀಯ ಸ್ಪಂದನ ಕೇಂದ್ರದ ನಿರ್ದೇಶಕ ಡಾ| ರವೀಂದ್ರನ್‌ ಅವರು ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮಂಗಳವಾರ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿದರು.

ಕೋವಿಡ್‌ ನಿಯಂತ್ರಣಕ್ಕಾಗಿ ಸಂಪರ್ಕಿತರ ಪತ್ತೆ, ಸಹ ಕಾಯಿಲೆಗಳಿರುವ ವ್ಯಕ್ತಿಗಳನ್ನು ಗುರುತಿಸಿ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ತಂಡ ಪ್ರಶಂಸೆ ವ್ಯಕ್ತಪಡಿಸಿದೆ.

ಕೋವಿಡ್‌ ಪರೀಕ್ಷಾ ಪ್ರಯೋಗಾಲಯಗಳು ಪೂರ್ಣ ಸಾಮರ್ಥ್ಯದಷ್ಟು ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಸಮುದಾಯಕ್ಕೆ ಹರಡಿಲ್ಲ: ಶ್ರೀರಾಮುಲು
ಕೋವಿಡ್‌ ಸೋಂಕು ಈವರೆಗೆ ಸಮುದಾಯಕ್ಕೆ ಹರಡಿಲ್ಲ. ನಾವು ಇನ್ನೂ ಒಂದು ಮತ್ತು ಎರಡನೇ ಹಂತದಲ್ಲಿದ್ದೇವೆ. ಮೂರನೇ ಹಂತಕ್ಕೆ ಹೋಗಿಲ್ಲ. ಈ ವಿಚಾರವನ್ನು ಕೇಂದ್ರ ಅಧಿಕಾರಿಗಳ ತಂಡದ ಗಮನಕ್ಕೆ ತರಲಾಗಿದ್ದು, ಸೋಂಕು ಸಮುದಾಯಕ್ಕೆ ಹರಡಂತೆ ಕ್ರಮ ಕೈಗೊಳ್ಳಬೇಕು ಎಂದು ತಂಡ ಸೂಚಿಸಿದೆ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದರು.

Advertisement

ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳ ಜತೆ ನಡೆಸಿದ ಸಭೆ ಬಳಿಕ ಪ್ರತಿಕ್ರಿಯಿಸಿದ ಅವರು, ಸಭೆಯಲ್ಲಿ ಸಾಕಷ್ಟು ವಿಚಾರ ಚರ್ಚೆಯಾಗಿದೆ. ಕಂಟೈನ್‌ಮೆಂಟ್‌ ವಲಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

ಕೋವಿಡ್‌ ಪರೀಕ್ಷೆ ಪ್ರಮಾಣ ಹೆಚ್ಚಿಸಬೇಕು. ಕಂಟೈನ್‌ಮೆಂಟ್‌ ವಲಯ ಹಾಗೂ ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಭೇಟಿ ನೀಡಿ ತಂಡ ಪರಿಶೀಲನೆ ನಡೆಸಿ ಬಳಿಕ ಸಿಎಂ ಜತೆಗೆ ಮತ್ತೂಮ್ಮೆ ಸಭೆ ನಡೆಸಲಿದೆ ಎಂದರು.

ಕೇಂದ್ರ ತಂಡದಿಂದ ಮೂರು ಸಲಹೆಗಳು
– ಕಂಟೈನ್‌ಮೆಂಟ್‌ ವಲಯದಲ್ಲಿ ಹೆಚ್ಚಿನ ಪರೀಕ್ಷೆ ನಡೆಸಬೇಕು.

– 50 ವರ್ಷ ಮೇಲ್ಪಟ್ಟ ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರ ಪ್ರಕರಣಗಳಲ್ಲಿ ಜೀವ ಉಳಿಸಲು ಗಮನಹರಿಸಬೇಕು.

– ಸೋಂಕು ಪೀಡಿತರ ಸಂಖ್ಯೆ ಹೆಚ್ಚಾದರೆ ಆತಂಕಪಡಬೇಕಿಲ್ಲ. ಆದರೆ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕು. ಸಾವಿನ ಪ್ರಮಾಣ ಕಡಿಮೆಯಾದಷ್ಟು ನಾವು ಸೋಂಕಿನ ಮೇಲೆ ನಿಯಂತ್ರಣ ಸಾಧಿಸಿದಂತೆ.

ಪರೀಕ್ಷೆ ಹೆಚ್ಚಿಸಲು ಸಲಹೆ
ರಾಜ್ಯದ ಕೋವಿಡ್‌ ಪ್ರಯೋಗಾಲಯಗಳು ಪೂರ್ಣ ಪ್ರಮಾಣದಲ್ಲಿ ಪರೀಕ್ಷೆ ನಡೆಸುತ್ತಿಲ್ಲ, ಪೂರ್ಣ ಸಾಮರ್ಥ್ಯದ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ರಾಜ್ಯ ಸರಕಾರಕ್ಕೆ ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next