ನವದೆಹಲಿ: ಸೋನಿಯಾ ಗಾಂಧಿ ಅಳಿಯ, ಪ್ರಿಯಾಂಕಾ ಪತಿ ರಾಬರ್ಟ್ ವಾದ್ರಾ ಶಾಮೀಲಾಗಿರುವ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ್ರಾ ನಿಕಟವರ್ತಿ, ದುಬೈ ಮೂಲದ ಉದ್ಯಮಿ ಸಿಸಿ ಥಾಂಪಿಯನ್ನು ಕೋರ್ಟ್ ನಾಲ್ಕು ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೊಪ್ಪಿಸಿರುವುದಾಗಿ ವರದಿ ತಿಳಿಸಿದೆ.
ಅಕ್ರಮ ಹಣಕಾಸು ಪ್ರಕರಣದಲ್ಲಿ ತನಿಖೆ ನಡೆಸುವುದು ಇನ್ನೂ ಬಾಕಿ ಇದೆ. ಅಲ್ಲದೇ ಹೆಚ್ಚಿನ ಸಾಕ್ಷಿಗಳನ್ನು ತನಿಖೆಗೆ ಒಳಪಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಥಾಂಪಿಯನ್ನು ಕಸ್ಟಡಿಗೆ ಒಪ್ಪಿಸಬೇಕೆಂದು ಇ.ಡಿ ಅಧಿಕಾರಿಗಳ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು.
ನನ್ನ ಕಕ್ಷಿದಾರ (ಥಾಂಪಿ) ಕಳೆದ ಒಂದು ವಾರದಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಶದಲ್ಲಿದ್ದರು. ಹೀಗಾಗಿ ಇನ್ನಷ್ಟು ದಿನ ಕಸ್ಟಡಿಗೆ ನೀಡುವ ಅಗತ್ಯವಿಲ್ಲ. ಈಗಾಗಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದೇವೆ ಎಂದು ಥಾಂಪಿ ಪರ ಹಿರಿಯ ವಕೀಲ ರಾಜು ರಾಮಚಂದ್ರನ್ ಪ್ರತಿವಾದ ಮಂಡಿಸಿದ್ದರು.
ಥಾಂಪಿ ಜಾಮೀನು ಅರ್ಜಿ ಇಂದು ಸಿಬಿಐ ವಿಶೇಷ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದ್ದು, ಜಾರಿ ನಿರ್ದೇಶನಾಲಯ ಆಕ್ಷೇಪಣೆ ಸಲ್ಲಿಸುವುದಾಗಿ ತಿಳಿಸಿತ್ತು.
ರಾಬರ್ಟ್ ವಾದ್ರಾ ನಿಕಟವರ್ತಿಯಾಗಿದ್ದ ಥಾಂಪಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜನವರಿ 20ರಂದು ಬಂಧಿಸಿದ್ದರು. ಥಾಂಪಿ ಹಾಗೂ ಆತನ ಹಾಲಿಡೇ ಸಿಟಿ ಸೆಂಟರ್, ಹಾಲಿಡೇ ಪ್ರಾಪರ್ಟೀಸ್ ಮತ್ತು ಹಾಲಿಡೇ ಬೇಕಲ್ ರೆಸಾರ್ಟ್ಸ್ ಕುರಿತು ಇ.ಡಿ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.