ಮೈಸೂರು: ಮುಡಾ ಹಗರಣ ಸಂಬಂಧ ರಿಯಲ್ ಎಸ್ಟೇಟ್ ಉದ್ಯಮಿ ಜಯರಾಮು ಅವರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳ ತಂಡ ನೂರಾರು ಪುಟಗಳ ದಾಖಲೆ ವಶಕ್ಕೆ ಪಡೆದು ಪರಿಶೀಲನೆ ಪೂರ್ಣಗೊಳಿಸಿದ್ದಾರೆ.
ಮೈಸೂರಿನ ಕುವೆಂಪು ನಗರದಲ್ಲಿರುವ ಎಂಎಂಜಿ ಕನ್ಸ್‌ಸ್ಟ್ರಕ್ಷನ್ ಕಚೇರಿ ಹಾಗೂ ಶ್ರೀರಾಂಪುರದಲ್ಲಿರುವ ಜಯರಾಮು ಅವರ ನಿವಾಸಕ್ಕೆ ಸೋಮವಾರ ಬೆಳಗ್ಗೆಯಿಂದ ಇ.ಡಿ. ಅಧಿಕಾರಿಗಳ ತಂಡ ದಾಳಿ ಮಾಡಿ ಬುಧವಾರ ಬೆಳಗ್ಗೆವರೆಗೆ ಕಾರ್ಯಾಚರಣೆ ನಡೆಸಿ ಪರಿಶಿಲನೆ ಕಾರ್ಯ ಪೂರ್ಣಗೊಳಿಸಿದ್ದಾರೆ. ಈ ವೇಳೆ ಜಯ ರಾಮುಗೆ ಮುಡಾ ಅಧಿಕಾರಿಗಳೊಂದಿಗೆ ಇರುವ ನಂಟಿನ ಬಗ್ಗೆ ಪ್ರಶ್ನಿಸಲಾಗಿದೆ ಎಂದು ತಿಳಿದು ಬಂದಿದೆ.
ಪರಿ ಶೀ ಲನೆ ವೇಳೆ ಕಂಪೆನಿಯ ಎಲ್ಲ ವ್ಯವಹಾರಗಳ ದಾಖಲೆಯ ನಕಲು ಪ್ರತಿಗಳು, ಎಂಎಂಜಿ ಕನ್ಸ್‌ಸ್ಟ್ರಕ್ಷನ್ ಹಾಗೂ ವಕ್ರತುಂಡ ಸೊಸೈಟಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳ ವಿವರಗಳನ್ನು ಸಂಗ್ರಹಿಸಲಾಗಿದೆ. ಎಚ್.ಡಿ. ಕೋಟೆ ತಾಲೂಕಿನ ಜಯರಾಮು ಉದ್ಯಮಿಯಾಗಿದ್ದು, ಅಲ್ಪ ಅವಧಿಯಲ್ಲಿ ದೊಡ್ಡ ಪ್ರಮಾಣದ ವ್ಯವಹಾರ ನಡೆಸುತ್ತಿರುವ ಹಾಗೂ ಆಸ್ತಿ ಹೊಂದಿರುವ ಕುರಿತೂ ಇ.ಡಿ. ಪ್ರಶ್ನಿಸಿದೆ ಎಂದು ತಿಳಿದು ಬಂದಿದೆ.
ಮಾಹಿತಿ ಕೊಟ್ಟಿದ್ದೇವೆ: ಜಯರಾಮು
ಇ.ಡಿ. ದಾಳಿ ಸಂಬಂಧ ಮಾತನಾಡಿರುವ ಬಿಲ್ಡರ್ ಜಯರಾಮ್, ಮುಡಾ ಆಯುಕ್ತ ದಿನೇಶ್ ಅವರನ್ನು ಬಡಾವಣೆಗಳ ಕೆಲಸಕ್ಕೆ ಸಂಬಂಧಿಸಿ ಕಚೇರಿಯಲ್ಲಿ ಭೇಟಿ ಮಾಡಿದ್ದೆ . ಅವರು ಹಾಗೂ ಅವರ ಭಾಮೈದ ತೇಜಸ್‌ಗೌಡ ಜತೆಗೆ ವ್ಯಾವಹಾರಿಕ ಸಂಬಂಧವಿಲ್ಲ. ಯಾರ ಹೆಸರಿನಲ್ಲೂ ಬೇನಾಮಿ ಆಸ್ತಿ ಹೊಂದಿಲ್ಲ. ಕಳೆದ 10 ವರ್ಷದಿಂದ ರಿಯಲ್ ಎಸ್ಟೇಟ್ ಉದ್ಯಮದಲ್ಲಿದ್ದು, ಸಾವಿರಾರು ಮನೆ ಹಾಗೂ ನಿವೇಶನ ನಿರ್ಮಿಸಿ ಮಾರಾಟ ಮಾಡಿದ್ದೇನೆ.
ಕ್ಯಾಥೋಲಿಕ್ ಸೊಸೈಟಿಗೆ ಮುಡಾದಿಂದ 50:50 ಅನುಪಾತದ ಅಡಿ ನೀಡಲಾಗಿದ್ದ ನಿವೇಶನಗಳ ಪೈಕಿ 5 ನಿವೇಶನ ಖರೀದಿಸಿದ್ದು, ಅದರ ಮಾಹಿತಿ ನೀಡಿದ್ದೇನೆ ಎಂದು ಹೇಳಿ ದ್ದಾರೆ. ವಕ್ರತುಂಡ ಸಹಕಾರ ಸಂಘ ಸಾರ್ವಜನಿಕರ ಸೊಸೈಟಿ ನಮಗೆ ಸೇರಿದ್ದಲ್ಲ. ಮುಂದಿನ ದಿನಗಳಲ್ಲಿ ವಿಚಾರಣೆಗೆ ಇ.ಡಿ. ಮತ್ತೆ ಕರೆದರೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.