ಹೊಸದಿಲ್ಲಿ : ಶಾರದಾ ಚಿಟ್ ಫಂಡ್ ಹಗರಣದಲ್ಲಿ ಕೋಲ್ಕತ ಪೊಲೀಸ್ ಕಮಿಷನರ್ ವಿದ್ಯುನ್ಮಾನ ಸಾಕ್ಷ್ಯಗಳನ್ನು ನಾಶ ಮಾಡಿದ್ದಾರೆ ಎಂದು ಆರೋಪಿಸಿ ಸಿಬಿಐ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಇಂದು ಸೋಮವಾರ ಒಪ್ಪಿಕೊಂಡಿದೆ.
ಅಂತೆಯೇ ನಾಳೆ ಮಂಗಳವಾರ ಸುಪ್ರೀಂ ಕೋರ್ಟ್ ಸಿಬಿಐ ಅರ್ಜಿಯ ತುರ್ತು ವಿಚಾರಣೆಯನ್ನು ಎತ್ತಿಕೊಳ್ಳಲಿದೆ.
ಬಹು ಕೋಟಿಯ ಶಾರದಾ ಚಿಟ್ ಫಂಡ್ ಹಗರಣದ ವಿದ್ಯುನ್ಮಾನ ಸಾಕ್ಷ್ಯಗಳನ್ನು ಕೋಲ್ಕತ ಪೊಲೀಸ್ ಮುಖ್ಯಸ್ಥ ರಾಜೀವ್ ಕುಮಾರ್ ಅವರು ನಾಶ ಮಾಡಿದ್ದಾರೆ ಮಾತ್ರವಲ್ಲ ಕೋರ್ಟ್ ನಿಂದನೆಯನ್ನೂ ಮಾಡಿದ್ದಾರೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವರಿಷ್ಠ ನ್ಯಾಯಮೂರ್ತಿ ರಂಜನ್ ಗೊಗೋಯ್ ಮತ್ತು ಜಸ್ಟಿಸ್ ಸಂಜೀವ್ ಖನ್ನಾ ಅವರನ್ನು ಒಳಗೊಂಡ ಪೀಠದ ಮುಂದೆ ಹೇಳಿದರು.
ಇಂದು ಸೋಮವಾರ ಭೋಜನಾನಂತರದ ಕಲಾಪದಲ್ಲೇ ತನ್ನ ಎರಡು ಅರ್ಜಿಗಳನ್ನು ತುರ್ತು ನೆಲೆಯಲ್ಲಿ ವಿಚಾರಣೆ ಮಾಡಬೇಕು ಎಂಬ ಸಾಲಿಸಿಟರ್ ಜನರಲ್ ಕೋರಿಕೆಯನ್ನು ಪೀಠ ಮಾನ್ಯ ಮಾಡಲಿಲ್ಲ.
Related Articles
ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಲದ ಯಾವುದೇ ಅಧಿಕಾರಿ ಅಥವಾ ಪೊಲೀಸ್ ಅಧಿಕಾರಿ ಯಾವುದೇ ಸಾಕ್ಷ್ಯವನ್ನು ನಾಶ ಮಾಡಲು ಯತ್ನಿಸುತ್ತಿದ್ದಾರೆ ಅಥವಾ ನಾಶ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷ್ಯಗಳಿದ್ದರೆ ಅವನ್ನು ಸಾಲಿಸಿಟರ್ ಜನರಲ್ ಆಗಲೀ ಅಥವಾ ಯಾವುದೇ ರಾಜಕೀಯ ಪಕ್ಷವಾಗಲೀ ನ್ಯಾಯಾಲಯದ ಮುಂದೆ ಮಂಡಿಸಲು ಮುಕ್ತರಿರುತ್ತಾರೆ ಎಂದು ಪೀಠವು ಹೇಳಿತು.
ಈ ಹಗರಣ ಕುರಿತಾದ ಎಲ್ಲ ಸಾಕ್ಷ್ಯಗಳನ್ನು ಅಫಿದಾವಿತ್ ಮೂಲಕ ತನ್ನ ಮುಂದೆ ಮಂಡಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತು.