Advertisement

Delhi CM ಕೇಜ್ರಿವಾಲ್ ರನ್ನು ಬಂಧಿಸಿದರೆ ಜನರು ಬೀದಿಗಿಳಿಯುತ್ತಾರೆ: ಆಪ್ ಆಕ್ರೋಶ

07:36 PM Feb 23, 2024 | Team Udayavani |

ನವದೆಹಲಿ: ಮುಂದಿನ ಕೆಲವು ದಿನಗಳಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲು ಸಿಬಿಐ ಯೋಜಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಶುಕ್ರವಾರ ಹೇಳಿದೆ.

Advertisement

ಮುಂಬರುವ ಲೋಕಸಭೆ ಚುನಾವಣೆಗೆ ಎಎಪಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವುದನ್ನು ತಡೆಯಲು,ಭಯದಿಂದ ಬಿಜೆಪಿ ಹೀಗೆ ಮಾಡುತ್ತಿದೆ ಎಂದಿದ್ದು, ಯಾವ ಪ್ರಕರಣದಲ್ಲಿ ಬಂಧಿಸುವ ಸಾಧ್ಯತೆ ಇದೆ ಎಂದು ಆಮ್ ಆದ್ಮಿ ಪಕ್ಷ ಹೇಳಿಲ್ಲ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದೆಹಲಿ ಕ್ಯಾಬಿನೆಟ್ ಸಚಿವ ಮತ್ತು ಹಿರಿಯ ಎಎಪಿ ನಾಯಕ ಸೌರಭ್ ಭಾರದ್ವಾಜ್, ಕಾಂಗ್ರೆಸ್ ಮತ್ತು ಎಎಪಿ ನಡುವಿನ ಸೀಟು ಹಂಚಿಕೆ ಮಾತುಕತೆಯ ಅಂತಿಮ ವರದಿಗಳು ಬರಲಾರಂಭಿಸಿದ ಕೂಡಲೇ , ಅಬಕಾರಿ ನೀತಿ ಪ್ರಕರಣದಲ್ಲಿ ಇಡಿ ಕೇಜ್ರಿವಾಲ್‌ಗೆ ಏಳನೇ ಸಮನ್ಸ್ ಕಳುಹಿಸಿದೆ. ಸಿಬಿಐ ಕೇಜ್ರಿವಾಲ್ ಅವರನ್ನು ಬಂಧಿಸಲು ಯೋಜಿಸುತ್ತಿದೆ ಎಂದು ನಮಗೆ ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ. ಸಿಬಿಐ ಇಂದು ಮಧ್ಯಾಹ್ನ ಅಥವಾ ಸಂಜೆಯೊಳಗೆ ಕೇಜ್ರಿವಾಲ್ ಅವರಿಗೆ ನೋಟಿಸ್ ನೀಡಲಿದೆ. ಇನ್ನೆರಡು ಮೂರು ದಿನಗಳಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸಲಿದ್ದಾರೆ ಎಂದು ಹೇಳಿದ್ದಾರೆ.

ಮೈತ್ರಿ ಮಾಡಿಕೊಂಡರೆ ಕೇಜ್ರಿವಾಲ್ ಅವರನ್ನು ಬಂಧಿಸಲಾಗುವುದು ಎಂಬ ಸಂದೇಶಗಳು ನಮಗೆ ಬರುತ್ತಿವೆ. ನೀವು ಬೇಕಾದರೆ ಕೇಜ್ರಿವಾಲ್ ಅವರನ್ನು ಬಂಧಿಸಬಹುದು, ಆದರೆ ಮೈತ್ರಿ ಮಾಡಿಕೊಳ್ಳುವುದು ಖಚಿತ ಎಂದರು.

ಇನ್ನೊಂದೆಡೆ ಕೇಜ್ರಿವಾಲ್ ಅವರನ್ನು ಬಂಧಿಸಿದರೆ ಜನರು ಬೀದಿಗಿಳಿಯುತ್ತಾರೆ ಎಂದು ಆಪ್ ರಾಜ್ಯಸಭಾ ಸಂಸದ ಸಂದೀಪ್ ಪಾಠಕ್ ಹೇಳಿದ್ದಾರೆ.ಸುನಾಮಿ ಬರಲಿದೆ. ಬಿಜೆಪಿ ರಾಜಕೀಯ ಲೆಕ್ಕಾಚಾರಗಳು ತಪ್ಪುತ್ತವೆ. ಬಂಧನಕ್ಕೆ ನಾವು ಹೆದರುವುದಿಲ್ಲ. ನಾವು ದೇಶಕ್ಕಾಗಿ ಈ ಮೈತ್ರಿಯನ್ನು ರೂಪಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

Advertisement

ದೆಹಲಿ ಅಬಕಾರಿ ನೀತಿ ಸಂಬಂಧಿತ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಫೆಬ್ರವರಿ 26 ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ಕೇಜ್ರಿವಾಲ್‌ಗೆ ಹೊಸ ಸಮನ್ಸ್ ಜಾರಿ ಮಾಡಿದೆ.

ಎಎಪಿಯ ಹೇಳಿಕೆಗಳಿಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ತತ್ ಕ್ಷಣ ಪ್ರತಿಕ್ರಿಯೆ ನೀಡಿಲ್ಲ. ಎಎಪಿ ನಾಯಕರು ಗೊಂದಲ ಸೃಷ್ಟಿಸಲು ಮತ್ತು ಕೇಜ್ರಿವಾಲ್ ಬಗ್ಗೆ ಸಹಾನುಭೂತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.

ಲೋಕಸಭೆ ಚುನಾವಣೆಗೆ ದೆಹಲಿ, ಗುಜರಾತ್ ಮತ್ತು ಹರಿಯಾಣದಲ್ಲಿ ಕಾಂಗ್ರೆಸ್ ಮತ್ತು ಎಎಪಿ ಸೀಟು ಹಂಚಿಕೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಯಿದ್ದು ಉಭಯ ಪಕ್ಷಗಳ ನಡುವಿನ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ತಿರುಗೇಟು

ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್ ಅವರು, ಕಾಂಗ್ರೆಸ್‌ನೊಂದಿಗೆ ಎಎಪಿ ಮೈತ್ರಿ ಕುರಿತು ಮಾತುಕತೆ ವಿಫಲವಾಗುತ್ತಿರುವುದು ಕೇಜ್ರಿವಾಲ್‌ಗೆ ತಿಳಿದಿದೆ ಆದರೆ ಎಎಪಿ ನಾಯಕರು ಗುರುವಾರದಿಂದ ವದಂತಿಗಳನ್ನು ಹರಡುತ್ತಿದ್ದಾರೆ ಮತ್ತು ಮುಖ್ಯಮಂತ್ರಿಯ ಬಗ್ಗೆ ಸಹಾನುಭೂತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.ಕೇಜ್ರಿವಾಲ್ ಅವರು ವಕೀಲರ ಸಹಾಯದಿಂದ ಶಿಕ್ಷೆಯನ್ನು ವಿಳಂಬಗೊಳಿಸಬಹುದು ಆದರೆ ಅಂತಿಮವಾಗಿ, ಮುಂಬರುವ ಚುನಾವಣೆಯಲ್ಲಿ ದೆಹಲಿಯ ಜನರು ಅವರನ್ನು ಕಠಿಣವಾಗಿ ಶಿಕ್ಷಿಸುತ್ತಾರೆ” ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಅವರು ಮದ್ಯದ ಹಗರಣಕ್ಕೆ ಸಂಬಂಧಿಸಿದಂತೆ ಲೆಫ್ಟಿನೆಂಟ್ ಗವರ್ನರ್‌ಗೆ ಮೊದಲ ಲಿಖಿತ ದೂರನ್ನು ಸಲ್ಲಿಸಿದ್ದಾರೆ ಎಂಬುದನ್ನು ಎಎಪಿ ಮತ್ತು ಕೇಜ್ರಿವಾಲ್ ನೆನಪಿಸಿಕೊಳ್ಳಬೇಕು ಎಂದು ಸಚ್‌ದೇವ್ ಹೇಳಿದರು.

2014ರ ಲೋಕಸಭೆ ಚುನಾವಣೆಯಲ್ಲಿ ಶೇ.51 ಮತ್ತು 2019ರಲ್ಲಿ ಶೇ.59 ಮತಗಳೊಂದಿಗೆ ದೆಹಲಿಯ ಎಲ್ಲ ಏಳು ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. 2024ರ ಲೋಕಸಭೆ ಚುನಾವಣೆಯಲ್ಲಿ ದೆಹಲಿಯ ಜನರು ಬಿಜೆಪಿಗೆ ಶೇ.70ರಷ್ಟು ಮತಗಳನ್ನು ನೀಡಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next