ಕೇರಳ, ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮೈಸೂರು ಜಿಲ್ಲೆ ಹಾಗೂ ಚಾಮರಾಜನಗರದ ಹಲವು ಗ್ರಾಮಗಳು ತತ್ತರಿಸಿ ಹೋಗಿವೆ. ಕೆಆರ್‌ಎಸ್‌ನಿಂದ 1.27 ಲಕ್ಷ ಕ್ಯೂಸೆಕ್, ಕಬಿನಿಯಿಂದ 76,250 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ನದಿ ಪಾತ್ರದ ಗ್ರಾಮಗಳು ಜಲಾವೃತಗೊಂಡಿದ್ದು, ಸಹಸ್ರಾರು ಎಕರೆ ಗದ್ದೆಗಳು ಮುಳುಗಿ ಹೋಗಿವೆ. ನೂರಾರು ಮನೆಗಳು ಕುಸಿದಿವೆ. ಪ್ರವಾಹದಿಂದ ಜನರು ಬೀದಿಪಾಲಾಗಿದ್ದು, ಕೆಲವಡೆ ಗಂಜಿ ಕೇಂದ್ರ ತೆರೆಯಲಾಗಿದೆ. ನೆರೆ ಪ್ರದೇಶಕ್ಕೆ ಸಚಿವರಾದ ದೇಶಪಾಂಡೆ, ಜಿ.ಟಿ. ದೇವೇಗೌಡ, ಪುಟ್ಟರಂಗಶೆಟ್ಟಿ, ಎನ್.ಮಹೇಶ್ ಭೇಟಿ ನೀಡಿ ಪರಿಶೀಲಿಸಿದರು. ನೆರೆ ಸಂತ್ರಸ್ತರಿಗೆ ನೆರವು ನೀಡಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ಮಳೆಗೆ ನಲುಗಿತು ಮೈಸೂರು ಜಿಲ್ಲೆ
ಮೈಸೂರು: ಕೇರಳ ಹಾಗೂ ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮೈಸೂರು ಜಿಲ್ಲೆಯೂ ನಲುಗಿ ಹೋಗಿದ್ದು, ನೂರಾರು ಎಕರೆ ಜಮೀನು ಜಲಾವೃತವಾಗಿ, ಜನಜೀವನ ಅಸ್ತವ್ಯಸ್ತವಾಗಿ ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕೇರಳದ ವೈನಾಡು ಪ್ರದೇಶ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ 81,091 ಕ್ಯೂಸೆಕ್ ಒಳ ಹರಿವು ಬರುತ್ತಿದ್ದು, 2284 ಅಡಿ ಗರಿಷ್ಠ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಶಯ ಈಗಾಗಲೇ ಭರ್ತಿಯಾಗಿದ್ದು, ಹೆಚ್ಚಿನ ಒಳ ಹರಿವು ಬರುತ್ತಿರುವುದರಿಂದ ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಶನಿವಾರ ಮುಂಜಾನೆ 4ಗಂಟೆ ವೇಳೆಗೆ ಜಲಾಶಯದಿಂದ ನದಿಗೆ 75 ಸಾವಿರ ಕ್ಯೂಸೆಕ್ ಹಾಗೂ ನಾಲೆಗಳಿಗೆ 1250 ಕ್ಯೂಸೆಕ್ ಸೇರಿದಂತೆ ಒಟ್ಟಾರೆ 76,250 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದ್ದು, ಇದರ ಪರಿಣಾಮ ಕಪಿಲಾ ನದಿ ಉಕ್ಕಿ ಹರಿಯುತ್ತಿದೆ.
ಇದರಿಂದಾಗಿ ಕಪಿಲಾ ನದಿ ಪಾತ್ರದಲ್ಲಿ ಬರುವ ನಂಜನಗೂಡು, ತಿ.ನರಸೀಪುರ ತಾಲೂಕುಗಳಲ್ಲಿ ನೂರಾರು ಎಕರೆ ಜಮೀನು ಜಲಾವೃತವಾಗಿದ್ದು, ತಿ.ನರಸೀಪುರದಿಂದ ಇತಿಹಾಸ ಪ್ರಸಿದ್ಧ ತಲಕಾಡು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಹೆಮ್ಮಿಗೆ ಸೇತುವೆ ಮುಳುಗಡೆಯಾಗಿರುವುದರಿಂದ ಸೇತುವೆ ಮೇಲೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ರೈತರು ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ. ಜೊತೆಗೆ ಹತ್ತಾರು ಮನೆಗಳಿಗೆ ನೀರು ನುಗ್ಗಿದ್ದರಿಂದ ನಂಜನಗೂಡು ಪಟ್ಟಣದ ಶ್ರೀಕಂಠೇಶ್ವರ ದೇವಸ್ಥಾನದ ಗಿರಿಜಾ ಕಲ್ಯಾಣ-ದಾಸೋಹ ಭವನದಲ್ಲಿ ತೆರೆಯಲಾಗಿರುವ ಗಂಜಿ ಕೇಂದ್ರದಲ್ಲಿ ಇವರಿಗೆ ಪುನರ್‌ವಸತಿ ಕಲ್ಪಿಸಲಾಗಿದೆ.
ಸಚಿವದ್ವಯರ ಭೇಟಿ: ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಶನಿವಾರ, ಕಪಿಲಾ ನದಿ ಪ್ರವಾಹದಿಂದ ಹಾನಿಗೊಳಗಾದ ನಂಜನಗೂಡು ತಾಲೂಕು ವ್ಯಾಪ್ತಿಯ ಮೈಸೂರು-ಊಟಿ ಹೆದ್ದಾರಿಯಲ್ಲಿ ಬರುವ ಮಲ್ಲನಮೂಲೆ ಮಠ, ನಂಜನಗೂಡು ಪಟ್ಟಣದ ಶ್ರೀಕಂಠೇಶ್ವರ ದೇವಸ್ಥಾನದ ಮುಡಿಕಟ್ಟೆ, ತೋಪಿನ ಬೀದಿ, ತೇರಿನ ಬೀದಿ, ಹಳ್ಳದಕೇರಿ, ಒಕ್ಕಲಗೇರಿ, ಸರಸ್ವತಿ ಕಾಲೋನಿ, ಹೆಜ್ಜಿಗೆ ಸೇತುವೆ, ಚಿಕ್ಕಯನ್ನ ಛತ್ರ ಹೋಬಳಿಯ ಬೊಕ್ಕಹಳ್ಳಿ, ಕುಳ್ಳಂಕನ ಹುಂಡಿ, ಬಿಳಿಗೆರೆ ಹೋಬಳಿಯ ಸುತ್ತೂರು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಕೆಆರ್‌ಎಸ್ ಜಲಾಶಯಕ್ಕೆ 1.14 ಲಕ್ಷ ಕ್ಯೂಸೆಕ್‌ಗಿಂತ ಹೆಚ್ಚಿನ ಒಳ ಹರಿವು ಬರುತ್ತಿದೆ. 124.80 ಅಡಿ ಗರಿಷ್ಠ ನೀರು ಸಂಗ್ರಹಣಾ ಸಾಮರ್ಥ್ಯದ ಕೆಆರ್‌ಎಸ್ ಜಲಾಶಯ ಈಗಾಗಲೇ ಭರ್ತಿಯಾಗಿರುವುದರಿಂದ ಜಲಾಶಯದ ಸುರಕ್ಷತೆ ದೃಷ್ಟಿಯಿಂದ 1.27 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ನದಿ ಪಾತ್ರದ ತಿ.ನರಸೀಪುರ ತಾಲೂಕಿನಲ್ಲಿ ನೂರಾರು ಎಕರೆ ಗದ್ದೆ ಜಲಾವೃತವಾಗಿದೆ.
ಕೆ.ಆರ್.ನಗರದಲ್ಲೂ ಪ್ರವಾಹ: ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಕೆ.ಆರ್.ನಗರ ತಾಲೂಕಿನಲ್ಲೂ ಪ್ರವಾಹ ಭೀತಿ ಎದುರಾಗಿದ್ದು, ತಾಲೂಕಿನ ಹನಗೋಡು ಗ್ರಾಮದಲ್ಲಿರುವ ಈಶ್ವರ ದೇವಸ್ಥಾನ ಮುಳುಗಡೆಯಾಗಿದೆ. ಕೆ.ಆರ್.ನಗರ ಪಟ್ಟಣದ ಸುತ್ತಮುತ್ತಲಿನ ಹಳೆ ಎಡತೊರೆ, ಸನ್ಯಾಸಿಪುರ, ಹಂಪಾಪುರ, ಕಪ್ಪಡಿ, ಹಳೇ ಕಪ್ಪಡಿ ಗ್ರಾಮಗಳಲ್ಲಿ ನೆರೆ ಬಂದಿದ್ದು, ನೂರಾರು ಎಕರೆ ಗದ್ದೆ ಜಲಾವೃತವಾಗಿದೆ. ಕಪ್ಪಡಿಯ ರಾಚಪ್ಪಾಜಿ ದೇವಸ್ಥಾನದ ಸನ್ನಿಧಿವರೆಗೂ ನೀರು ನುಗ್ಗಿದೆ.