ಚಳ್ಳಕೆರೆ: ನಗರದ ಅಜ್ಜಯ್ಯನಗುಡಿ ರಸ್ತೆಯ ಶಾದಿಮಹಲ್ ವ್ಯಾಪ್ತಿಯ ಎರಡು ಮನೆಗಳಲ್ಲಿ ಕಾನೂನುಬಾಹಿರವಾಗಿ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಬೆಂಗಳೂರು ಮೂಲದ ಗೌ ಗ್ಯಾನ್ ಸರ್ಕಾರೇತರ ಸಂಸ್ಥೆಯ ಪ್ರತಿನಿಧಿ ಕೆ.ಆರ್. ಮಂಜುನಾಥ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಕಾನೂನು ಬಾಹಿರವಾಗಿ ಜಾನುವಾರುಗಳ ವಧೆ ಮಾಡಿ ಮಾಂಸ, ಕೊಂಬು, ಚರ್ಮ ಇತರೆ ವಸ್ತುಗಳನ್ನು ಎಲ್ಲೆಂದರಲ್ಲೇ ಬಿಸಾಡಿದ್ದು ಕಂಡು ಬಂತು. ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ದೂರುದಾರ ಕೆ.ಆರ್. ಮಂಜುನಾಥ, ನಾನು ಹಾಗೂ ಎನ್‌ಜಿಒದ ಇಬ್ಬರು ಭಾನುವಾರ ಬೆಳಗ್ಗೆ ಶಾದಿಮಹಲ್ ಪಕ್ಕ ಮತ್ತು ಎದುರಿಗೆ ಇರುವ ಎರಡು ಪ್ರತ್ಯೇಕ ಶೆಡ್‌ಗಳಿಗೆ ಭೇಟಿ ನೀಡಿದ್ದೆವು. ಈ ಸಂದರ್ಭದಲ್ಲಿ ಜಾನುವಾರುಗಳನ್ನು ವಧೆ ಮಾಡಿ ಅದರ ಮಾಂಸ ಮಾರಾಟ ಮಾಡುತ್ತಿರುವುದು ಕಂಡು ಬಂತು. ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳಿಂದ ಯಾವುದೇ ಪರವಾನಗಿ ಪಡೆಯದೇ ಇರುವುದು ಕಂಡು ಬಂತು. ಕೂಡಲೇ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಲಾಯಿತು ಎಂದರು.
ಡಿವೈಎಸ್ಪಿ ಕೆ.ವಿ. ಶ್ರೀಧರ್, ಪಿಎಸ್‌ಐ ಕೆ. ಸತೀಶ್ ನಾಯ್ಕ ಹಾಗೂ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ನೋಡಿದಾಗ ಅಜ್ಜಯ್ಯನಗುಡಿ ರಸ್ತೆಯ ಅನ್ವರ್ ಭಾಷ ಎಂಬುವವರ ಮನೆಯ ಒಳಭಾಗದಲ್ಲಿ ವಧೆ ಮಾಡಿದ ಗೋಮಾಂಸವನ್ನು ನೇತು ಹಾಕಲಾಗಿತ್ತು. ಈ ಮನೆಯ ಹಿಂಭಾಗದಲ್ಲಿ ಸುಮಾರು 35 ಸಾವಿರ ರೂ. ಬೆಲೆ ಬಾಳುವ ಹೋರಿಯನ್ನು ಕಟ್ಟಿ ಹಾಕಲಾಗಿತ್ತು. ಇದರ ಸಮೀಪದಲ್ಲೇ ವಧೆ ಮಾಡಿದ ದನಗಳ ಕೋಡು ಹಾಗೂ ಹಲ್ಲಿನ ತುಣುಕುಗಳನ್ನು ಬಿಸಾಡಲಾಗಿತ್ತು. ನಂತರ ಶಾದಿಮಹಲ್ ಪಕ್ಕದ ಶೆಡ್‌ಗೆ ಭೇಟಿ ನೀಡಿದಾಗ ಆಗ ತಾನೇ ಒಂದು ದನದ ಕುತ್ತಿಗೆಯನ್ನು ಕತ್ತರಿಸಿ ಇಟ್ಟಿದ್ದು ಕಂಡು ಬಂತು. ಪೊಲೀಸರು ಅನ್ವರ್ ಭಾಷ ಮತ್ತು ಅಬ್ದುಲ್ ಮನನ್ ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.