ಕೋಟ: ಸಾಸ್ತಾನ ಟೋಲ್‌ನಲ್ಲಿ ಸ್ಥಳೀಯ ವಾಣಿಜ್ಯ ವಾಹನಗಳಿಗೆ ಶುಲ್ಕ ವಿನಾಯಿತಿ ಮುಂದುವರಿಸುವಂತೆ ಆಗ್ರಹಿಸಿ ಡಿ.31ರಂದು ಪ್ರತಿಭಟನೆಗೆ ಸಿದ್ಧತೆ ನಡೆಸಲಾಗಿದೆ. ಸೋಮವಾರ ಸಾಸ್ತಾನ ಶಿವಕೃಪಾ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಹೆದ್ದಾರಿಯ ಜಾಗೃತಿ ಸಮಿತಿ ನೇತೃತ್ವದಲ್ಲಿ ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ವಾಹನ ಚಾಲಕ-ಮಾಲಕ ಹಾಗೂ ಸಾರ್ವಜನಿಕರ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಶ್ಯಾಮಸುಂದರ ನಾಯರಿ ಮಾತನಾಡಿ, ನಾವು ಸಂಘಟಿತ ಹೋರಾಟ ನಡೆಸದಿದ್ದರೆ
ವಿನಾಯಿತಿ ಕೈ ತಪ್ಪುವ ಸಾಧ್ಯತೆ ನಿಚ್ಚಳವಾಗಿದೆ.
ಡಿ. 30ರಂದು ಸೋಮವಾರ ಜಿಲ್ಲಾಡಳಿತದ ವತಿಯಿಂದ ಟೋಲ್ ಕಂಪೆನಿ, ಪ್ರಾಧಿಕಾರ, ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಸ್ಥಳೀಯ ವಾಣಿಜ್ಯ ವಾಹನಗಳಿಗೆ ಟೋಲ್ ನೀಡಬೇಕೆಂದು ನಿರ್ಧಾರವಾದರೆ ಡಿ. 31ರಂದು ಮಂಗಳವಾರ ಕೋಟ ಜಿ.ಪಂ. ವ್ಯಾಪ್ತಿಯ ಅಂಗಡಿ- ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟಿಸಲಾಗುವುದು.
ವಾಹನಗಳನ್ನು ಟೋಲ್ ಸಮೀಪ ತಂದು ನಿಲ್ಲಿಸುವುದರ ಮೂಲಕ ಬೃಹತ್ ಪ್ರತಿಭಟನೆ ಸಂಘಟಿಸಿ ಸ್ಥಳೀಯರ ಹಕ್ಕನ್ನು ಪುನಃ
ಪಡೆಯುತ್ತೇವೆ ಎಂದರು. ಜಾಗೃತಿ ಸಮಿತಿ ಪ್ರಮುಖರು, ವಾಹನ ಚಾಲಕ ಮಾಲಕರ ಸಂಘದ ಪ್ರಮುಖರು ಹಾಗೂ ಸ್ಥಳೀಯ
ಗಣ್ಯರು ಉಪಸ್ಥಿತರಿದ್ದರು.
ಜಿಲ್ಲಾಡಳಿತದ ನಡೆಗೆ ಅಸಮಾಧಾನ
ಸಭೆಯಲ್ಲಿ ಉಡುಪಿ ಜಿಲ್ಲಾಡಳಿತದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಸಂಸದರು ರವಿವಾರ ಸುಮಾರು ಮೂರು ಗಂಟೆಗಳ ಕಾಲ ಸಾಸ್ತಾನ ಟೋಲ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಯಥಾಸ್ಥಿತಿಗೆ ಮನವಿ ಮಾಡಿದರೂ ಸ್ಪಂದಿಸಲಿಲ್ಲ. ಸ್ಥಳೀಯರು ಹಾಗೂ ಹೋರಾಟಗಾರರನ್ನು ಜಿಲ್ಲಾಡಳಿತ ಕಡೆಗಣಿಸುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತವಾಯಿತು.