Advertisement

Mangaluru: ನೈಜೀರಿಯಾ ಪ್ರಜೆ ಸೆರೆ; 11 ಲ.ರೂ. ಸೊತ್ತು ವಶ

02:51 AM Dec 18, 2024 | Team Udayavani |

ಮಂಗಳೂರು: ಗೋವಾ ರಾಜ್ಯದಿಂದ ಮಂಗಳೂರು ನಗರಕ್ಕೆ ನಿಷೇಧಿತ ಮಾದಕ ವಸ್ತುವಾದ ಕೊಕೇನ್‌ ಅನ್ನು ಪೂರೈಕೆ ಮಾಡುತ್ತಿದ್ದ ಪ್ರಸ್ತುತ ಗೋವಾದಲ್ಲಿ ವಾಸ್ತವ್ಯವಿದ್ದ ನೈಜೀರಿಯಾ ದೇಶದ ಪ್ರಜೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮೈಕೆಲ್‌ ಒಕಫರ್‌ಒಡಿಕೊ (44) ಬಂಧಿತ. ಈತನ ವಶದಲ್ಲಿದ್ದ 30 ಗ್ರಾಂ ಕೋಕೆನ್‌ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement

ಪ್ರಕರಣದ ವಿವರ
2024ರ ಮಾರ್ಚ್‌ ತಿಂಗಳಿನಲ್ಲಿ ಗೋವಾ ರಾಜ್ಯದಿಂದ ನಿಷೇಧಿತ ಮಾದಕ ವಸ್ತುವಾದ ಕೊಕೇನ್‌ ಅನ್ನು ಮಂಗಳೂರು ನಗರಕ್ಕೆ ಮೈಕೆಲ್‌ ಪೂರೈಸಿದ್ದ. ಅದನ್ನು ಉಳ್ಳಾಲ ತಾಲೂಕು ಆಂಬ್ಲಿಮೊಗರು ಗ್ರಾಮದ ಎಲಿಯಾರ್‌ಪದವು ಮೈದಾನದ ಬಳಿಯಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಅಂಬ್ಲಿಮೊಗರು ನಿವಾಸಿಗಳಾದ ಸದಕತ್‌ ಯು. ಅಲಿಯಾಸ್‌ ಶಾನ್‌ ನವಾಜ್‌, ಮಹಮ್ಮದ್‌ ಅಶ್ಫಕ್‌ ಆಲಿಯಾಸ್‌ ಅಶ್ಫಾ ಅವರನ್ನು ವಶಕ್ಕೆ ಪಡೆದು ಅವರಿಂದ ಮಂಗಳೂರು ಸಿಸಿಬಿ ಪೊಲೀಸರು 34 ಗ್ರಾಂ ಕೊಕೇನ್‌ ಹಾಗೂ ಇತರ ಒಟ್ಟು 2,72,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದರು.

ಈ ಬಗ್ಗೆ ಸೆನ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಆರೋಪಿಗಳಿಗೆ ಕೊಕೇನ್‌ ನೀಡಿದ ಗೋವಾದ ಡ್ರಗ್‌ ಪೆಡ್ಲರ್‌ಬಗ್ಗೆ ಮಾಹಿತಿ ಸಂಗ್ರಹಿಸಿದ ಮಂಗಳೂರು ಸಿಸಿಬಿ ಪೊಲೀಸರು ಉತ್ತರ ಗೋವಾದ ಕಾಲನ್‌ ಗೂಟ್‌ ಎಂಬಲ್ಲಿದ್ದ ನೈಜೇರಿಯಾ ದೇಶದ ಪ್ರಜೆಯನ್ನು ಬಂ ಧಿಸಿದ್ದಾರೆ. ಆತನ ವಶದಿಂದ ಕೊಕೇನ್‌, ಕಾರು, ಎರಡು ಮೊಬೈಲ್‌, 4,500 ರೂ. ನಗದು ಸಹಿತ 11.25 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್‌ ಕುಮಾರ್‌ ನಾಯ್ಕ, ಪೊಲೀಸ್‌ ನಿರೀಕ್ಷಕ ಶ್ಯಾಮ್‌ ಸುಂದರ್‌ಎಚ್‌.ಎಂ., ಪಿಎಸ್‌ಐ ಶರಣಪ್ಪ ಭಂಡಾರಿ ಮತ್ತು ಸಿಸಿಬಿ ಸಿಬಂದಿ ಪಾಲ್ಗೊಂಡಿದ್ದರು.

ವ್ಯಾಪಾರದ ವೀಸಾದಲ್ಲಿ ಬಂದಿದ್ದ
ಆರೋಪಿಯು ನೈಜೇರಿಯಾ ದೇಶದಿಂದ 2012ರಲ್ಲಿ ಭಾರತಕ್ಕೆ ವ್ಯಾಪಾರದ ವೀಸಾದಲ್ಲಿ ಬಂದು ಮುಂಬಯಿಯಲ್ಲಿ ಸುಮಾರು ಒಂದೂವರೆ ವರ್ಷದಿಂದ ವಾಸ್ತವ್ಯವಿದ್ದ. ಅನಂತರ ಗೋವಾಕ್ಕೆ ಬಂದು ವಾಸ್ತವ್ಯವಿದ್ದ. ಈತನ ವಿರುದ್ಧ ಈಗಾಗಲೇ ಗೋವಾದಲ್ಲಿ ಒಟ್ಟು 3 ಮಾದಕ ವಸ್ತು ಮಾರಾಟ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next