Advertisement

ಕ್ಯಾಚ್‌ ದಿ ರೈನ್‌ ಕಾರ್ಯಕ್ರಮ ರಾಜ್ಯದಲ್ಲೂ ಸಾಕಾರವಾಗಲಿ

02:56 AM Mar 02, 2021 | Team Udayavani |

ಪ್ರಧಾನಿ ನರೇಂದ್ರ ಮೋದಿ ಅವರು ಜಲಸಂರಕ್ಷಣೆ ಕುರಿತು ಮಹತ್ವದ ಕರೆ ನೀಡಿದ್ದು ಈ ಮುಂಗಾರು ಹಂಗಾಮಿನಲ್ಲಿ ಮಳೆ ನೀರು ಹಿಡಿದಿಟ್ಟು ಕೊಳ್ಳಿ ಎಂದು ಹೇಳಿ 100 ದಿನಗಳ ಕಾಲ “ಕ್ಯಾಚ್‌ ದಿ ರೈನ್‌’ ಅಭಿಯಾನ ನಡೆಸುವ ಘೋಷಣೆಯನ್ನು ಮಾಡಿದ್ದಾರೆ.

Advertisement

ಕೇಂದ್ರ ಜಲಶಕ್ತಿ ಸಚಿವಾಲಯ ಈ ಬಗ್ಗೆ ಅಭಿಯಾನ ಶುರು ಮಾಡಲಿದೆ. ಎಲ್ಲಿ, ಯಾವಾಗ ಮಳೆ ಬೀಳುತ್ತದೆಯೋ ಅಲ್ಲಿ ಅದನ್ನು ಹಿಡಿದಿಡಿ ಎಂಬ ಮೂಲ ಮಂತ್ರದೊಂದಿಗೆ ಈ ಅಭಿಯಾನ ನಡೆಯಲಿದೆ. ರವಿವಾರವಷ್ಟೇ ಮನ್‌ ಕಿ ಬಾತ್‌ನಲ್ಲಿ ಈ ಬಗ್ಗೆ ಪ್ರಸ್ತಾವಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಮೇ-ಜೂನ್‌ನಲ್ಲಿ ದೇಶದಲ್ಲಿ ಮುಂಗಾರು ಹಂಗಾಮ ಆರಂಭವಾಗಲಿದೆ. ಹೀಗಾಗಿ ಈಗಿನಿಂದಲೇ ಮಳೆ ನೀರು ಹಿಡಿದಿಡುವ ಕೆಲಸಕ್ಕೆ ಕೈ ಹಾಕಿದ್ದೇವೆ. ಸಚಿವಾಲಯ 100 ದಿನಗಳ ಕಾರ್ಯಕ್ರಮ ರೂಪಿಸಿದೆ ಎಂದು ಹೇಳಿದ್ದರು.

ಪ್ರಸ್ತುತ ಸಂದರ್ಭದಲ್ಲಿ ಪ್ರಧಾನಿಯವರ ಈ ಕರೆ ಮಹತ್ವ ಪಡೆದುಕೊಂಡಿದೆ. ಜತೆಗೆ ಇಡೀ ರಾಷ್ಟ್ರ ಅದರಲ್ಲೂ ಕರ್ನಾಟಕ ಮಟ್ಟಿಗೆ ಇದರ ಅಗತ್ಯತೆ ಅನಿವಾರ್ಯತೆಯೂ ಇದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹಲವು ವರ್ಷಗಳಿಂದ ಬರಪೀಡಿತ ವಾಗಿವೆ. ಮುಂಗಾರಿನಲ್ಲಿ ಮಳೆ ನೀರು ಹಿಡಿದಿಟ್ಟುಕೊಂಡರೆ ಮುಂದಿನ ದಿನಗಳಲ್ಲಿ ಅದು ಉಪಯೋಗಕ್ಕೆ ಬರಲಿದೆ. ಕೃಷಿ ಹಾಗೂ ಕುಡಿಯುವ ನೀರು ಪೂರೈಕೆ ದೃಷ್ಟಿಯಿಂದ ಇದು ಆಗಲೇಬೇಕಾದ ಕಾರ್ಯ. ಇದಕ್ಕೆ ದೇಶದ ಪ್ರತಿಯೊಬ್ಬ ಪ್ರಜೆಯೂ ಕೈ ಜೋಡಿಸಬೇಕು.

ಮಳೆ ನೀರು ಹಿಡಿದಿಟ್ಟುಕೊಳ್ಳುವ ಮಾರ್ಗಗಳು ಎಂದರೆ ಕೆರೆಗಳು, ಕುಂಟೆಗಳು, ಕೃಷಿ ಹೊಂಡಗಳು ಮೂಲ ಆಧಾರ. ಉಳಿದಂತೆ ಮಳೆ ಯಿಂದ ಅಂತರ್ಜಲ ವೃದ್ಧಿಯಾದರೆ ಕೊಳವೆ ಬಾವಿಗಳಲ್ಲೂ ನೀರು ಸಂಗ್ರಹವಾಗಲಿದೆ. ರಾಜ್ಯದಲ್ಲಿ ಕೆರೆ ಪುನಶ್ಚೇತನಕ್ಕಾಗಿ ಹಲವು ಯೋಜನೆ ರೂಪಿಸಲಾಗಿದೆ. ಮಳೆ ನೀರು ಕೊಯ್ಲು ವ್ಯವಸ್ಥೆ ಜಾರಿಯಲ್ಲಿದೆ. 2,400 ಚದರಡಿಗಿಂತ ಹೆಚ್ಚಿನ ವಿಸ್ತೀರ್ಣದ ಮನೆ ಹಾಗೂ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಕಡ್ಡಾಯ ಸಹ ಮಾಡಲಾಗಿದೆ. ಸರಕಾರಿ ಕಚೇರಿಗಳ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ.

Advertisement

ರಾಜಧಾನಿ ಬೆಂಗಳೂರಿನಲ್ಲಿ ಕೆರೆಗಳ ಅಭಿವೃದ್ಧಿ ಹಾಗೂ ಮಳೆ ನೀರು ಸಂಗ್ರಹಣೆಗೆ ವಿಶೇಷ ಯೋಜನೆ ಸಹ ರೂಪಿಸಲಾಗಿದೆ. ರಾಜ್ಯದ ವಿವಿಧೆಡೆ ಆಯಾ ನಗರ ಸ್ಥಳೀಯ ಸಂಸ್ಥೆಗಳು ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ರೂಪಿಸಿವೆ.

ಪ್ರಧಾನಿಯವರ ಮಳೆ ನೀರು ಹಿಡಿದಿಟ್ಟುಕೊಳ್ಳುವ ಕರೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರವೂ 100 ದಿನಗಳ ಅಭಿಯಾನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸುವುದು ಸೂಕ್ತ.

ರಾಜ್ಯದ ರೈತರು, ಸಾರ್ವಜನಿಕರು ಸೇರಿ ಎಲ್ಲ ವರ್ಗದ ಜನರನ್ನೂ ಸೇರಿಸಿಕೊಂಡು ಮಳೆ ನೀರು ಸಂರಕ್ಷಣೆ ಹಾಗೂ ಮಳೆ ನೀರು ಕೊಯ್ಲು ವ್ಯವಸ್ಥೆಗೆ ಒತ್ತು ನೀಡಿ ಒಂದಷ್ಟು ಪ್ರೋತ್ಸಾಹಧಾಯಕ ಘೋಷಿಸಿದರೆ ಪ್ರಧಾನಿಯವರ ಕರೆ ರಾಜ್ಯದಲ್ಲೂ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಬಹುದು.

ಹನಿ ಹನಿಗೂಡಿದರೆ ಹಳ್ಳ ಎಂಬ ಗಾದೆ ಮಾತಿನಂತೆ ನೀರು ಸಕಲ ಜೀವರಾಶಿಗೆ ಅಮೃತ ಸಮಾನ. ಇಂತಹ ನೀರಿನ ಸಂರಕ್ಷಣೆ ನಾಡಿನ ಪ್ರತೀ ನಾಗರಿಕನ ಕರ್ತವ್ಯ. ಮುಂಗಾರು ಜೂನ್‌ ಮಾಸದಲ್ಲಿ ಆರಂಭ ವಾಗಲಿದ್ದು 100 ದಿನ ಮಳೆ ನೀರು ಹಿಡಿದಿಟ್ಟುಕೊಳ್ಳುವ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next