Advertisement

ಗೇರು ಬೆಳೆಗೆ ಬೇಡಿಕೆ ಇದ್ದರೂ ರೈತರಿಗೆ ಸಸಿ ಲಭ್ಯವಿಲ್ಲ

06:45 AM Aug 31, 2017 | |

ಬ್ರಹ್ಮಾವರ: ಗೇರು ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಅನಾದಿ ಕಾಲದಿಂದಲೂ ಸಾಂಪ್ರದಾಯಿಕ ಬೆಳೆಯಾಗಿ ಸಾಗಿ ಬಂದಿದೆ. ಆದರೆ ಇಂದು  ಕರ್ನಾಟಕದ ಅರೆ ಮಲೆನಾಡು ಹಾಗೂ ಮೈದಾನ ಪ್ರದೇಶಕ್ಕೂ ವಿಸ್ತರಿಸಿದೆ. ಇತ್ತೀಚಿನ ವರೆಗೂ ಈ ಬೆಳೆಯು ನಿರ್ಲಕ್ಷಿತವಾಗಿದ್ದು, ಅವೈಜ್ಞಾನಿಕವಾಗಿ ಗುಡ್ಡ, ಬಂಜರು ಭೂಮಿ ಪ್ರದೇಶಗಳಲ್ಲಿ ಯಾವುದೇ ವ್ಯವಸ್ಥಿತ ಬೇಸಾಯ ಅಳವಡಿಸದೆ ಬೆಳೆಯುವ ಬೆಳೆಯಾಗಿತ್ತು. ಇದರಿಂದಾಗಿ ಈ ಬೆಳೆಯಿಂದ ಬರುವ ಆದಾಯವೂ ಸಾಮಾನ್ಯ ಮಟ್ಟದಲ್ಲಿತ್ತು. ಮೇಲಾಗಿ ಹೆಚ್ಚಿನ ಗೇರು ತೋಟಗಳು ಬೀಜದಿಂದ ಅಭಿವೃದ್ಧಿ ಹೊಂದಿದ ಗಿಡಗಳಾಗಿದ್ದರಿಂದ ಇಳುವರಿಯೂ ಕಡಿಮೆ ಇರುತ್ತದೆ.

Advertisement

ಬದಲಾಗಿದೆ ಪರಿಸ್ಥಿತಿ
ಕಳೆದ 3-4 ವರುಷಗಳಿಂದ ಗೇರು ಕೃಷಿಗೆ ಬೆಳೆಗಾರರಲ್ಲಿ ಆಸಕ್ತಿ ಹೆಚ್ಚುತ್ತಿದ್ದು, ಇದಕ್ಕೆ ಮುಖ್ಯ ಕಾರಣವೆಂದರೆ ಗೇರು ಬೀಜಕ್ಕೆ ದೊರಕುತ್ತಿರುವ ಉತ್ತಮ ಮಾರುಕಟ್ಟೆ ಧಾರಣೆ.  ಕಳೆದ ಸಾಲಿನಲ್ಲಿ ಕೆ.ಜಿ. ಒಂದಕ್ಕೆ ರೂ. 120ರಂತೆ ಖರೀದಿ ಆದ ಬೆಳೆ, ಈ ವರ್ಷ ರೂ. 130-150 ರಂತೆ ಖರೀದಿಯಾಗಿದೆ. ಬಂಗಾರದ ಬೆಳೆಗೆ ಬಂಗಾರದ ಬಲೆ ಎಂದರೂ ತಪ್ಪಾಗದು. ಪ್ರಸ್ತುತ ವರ್ಷದಲ್ಲಿ ಗೇರು ಗಿಡಗಳ  ವಿತರಣೆ ಭರದಿಂದ ಸಾಗಿದ್ದು ಅನೇಕ ಕೇಂದ್ರಗಳಲ್ಲಿ ಉತ್ಪಾದಿಸಿದ ಕಸಿ ಗಿಡಗಳಿಗಿಂತ  ಅ ಧಿಕ ಬೇಡಿಕೆ ಕಂಡು ಬಂದಿದ್ದು, ನಾಟಿಗೆ ಗೇರು ಗಿಡಗಳ ಅಭಾವ/ಕೊರತೆಯಿಂದ ರೈತರು ಪರದಾಡುವಂತಾಯಿತು.

ಗಮನಿಸಬೇಕಾದ ಅಂಶಗಳು:
ಗೇರು ಬೆಳೆಯಲ್ಲಿ ಬಹು ಮುಖ್ಯ ಬೇಸಾಯ ಕ್ರಮಗಳಾದ ಸುಧಾರಿತ ತಳಿ ನಾಟಿ ಮಾಡುವುದು, ಆಕಾರ ಕೊಡುವಿಕೆ, ಪೋಷಕಾಂಶಗಳ ಸಮಗ್ರ ನಿರ್ವಹಣೆ, ಮಣ್ಣು ಮತ್ತು ನೀರು ಸಂರಕ್ಷಣೆ, ಕೀಟ ಹಾಗೂ ರೋಗಗಳ ಸಮರ್ಪಕ ನಿರ್ವಹಣೆ ಮುಂತಾದವುಗಳನ್ನು ಅಳವಡಿಸಬೇಕು. ಆಯಾಯ ಪ್ರದೇಶಕ್ಕೆ ಸೂಕ್ತವಾಗುವಂತೆ ಹಾಗೂ ಹೆಚ್ಚು ಇಳುವರಿ ನೀಡುವಂತಹ  ಸುಧಾರಿತ ತಳಿಗಳನ್ನು  ಅಭಿವೃದ್ಧಿ ಪಡಿಸಲಾಗಿದೆ.

ತಳಿಗಳಾವುವು..?
ಕರಾವಳಿ ಪ್ರದೇಶಗಳಿಗೆ ಉಳ್ಳಾಲ-1, 3, 4, ಯು.ಎನ್‌.-50, ವೆಂಗುರ್ಲಾ 4 ಮತ್ತು 7 ಸೂಕ್ತವಾದ ತಳಿಗಳಾಗಿವೆ. ಭಾಸ್ಕರ ತಳಿಯು ಕೂಡಾ ಕರಾವಳಿ ಪ್ರದೇಶಕ್ಕೆ ಸೂಕ್ತವಾಗಿದ್ದು ಇದು ಟೀ ಸೊಳ್ಳೆಗಳ  ಬಾಧೆಯನ್ನು ತಪ್ಪಿಸಿಕೊಳ್ಳುವಂತಹ ಗುಣ ಹೊಂದಿದೆ.  ಗುಡ್ಡಗಾಡು ಪ್ರದೇಶಗಳಿಗೆ  ಉಳ್ಳಾಲ 1, ವೆಂಗುರ್ಲಾ 4 ಮತ್ತು 7 ಸೂಕ್ತವಾದ ತಳಿ.  ಪ್ರಾರಂಭಿಕ ಹಂತದಲ್ಲಿ ಗಿಡಗಳನ್ನು 7-7 ಮೀ. ಅಥವಾ 8-8 ಮೀ.  ಅಂತರದಲ್ಲಿ ನಾಟಿ ಮಾಡಬೇಕು. (ಹೆಚ್ಚು ಸಾಂದ್ರತೆ ಪದ್ಧತಿಯಲ್ಲಿ 4-4 ಮೀ. ಕೂಡಾ ನಾಟಿ ಮಾಡಬಹುದು).

ನಾಟಿ ವಿಧಾನ:
ಅಂತರದಲ್ಲಿ 2 ಘನ ಗುಂಡಿಗಳನ್ನು ಮಾಡಿ ಚೆನ್ನಾಗಿ ಮೇಲ್ಮಣ್ಣು ಮತ್ತು ಕಳಿತ ಕೊಟ್ಟಿಗೆ ಗೊಬ್ಬರವನ್ನು ಹಾಕಿ ನಾಟಿ ಮಾಡಿ ಆಧಾರಕ್ಕೆ ಕಡ್ಡಿಗಳನ್ನು ಕೊಟ್ಟು ಕಟ್ಟಬೇಕು.  ಕಸಿ ಕಟ್ಟಿದ ಕೆಳಭಾಗದಲ್ಲಿ ಬರುವ ಚಿಗುರುಗಳನ್ನು ಆಗಿಂದಾಗ್ಗೆ ತೆಗೆಯುತ್ತಿರಬೇಕು.  ಭೂಮಿ ಮಟ್ಟದಿಂದ ಮೇಲೆ 1 ಮೀ. ಎತ್ತರದವರೆಗೆ ಬರುವ ಅಡ್ಡ ಕವಲುಗಳನ್ನು ತೆಗೆದು ಆಕಾರ ಕೊಡಬೇಕು.

Advertisement

ಪೋಷಕಾಂಶಗಳು:
ಫಲ ಕೊಡುವ  4 ವರ್ಷದ ಮತ್ತು ನಂತರದ ಪ್ರತಿ ಗಿಡಕ್ಕೆ, ವರ್ಷಕ್ಕೆ 10 ಕಿ.ಗ್ರಾಂ. ಕೊಟ್ಟಿಗೆ ಗೊಬ್ಬರ, 500 ಗ್ರಾಂ ಸಾರಜನಕ (1,100 ಗ್ರಾಂ ಯೂರಿಯಾ), 125 ಗ್ರಾಂ ರಂಜಕ (650 ಗ್ರಾಂ ಶಿಲಾ ರಂಜಕ) ಮತ್ತು 125 ಗ್ರಾಂ ಪೊಟ್ಯಾಷ್‌ (200 ಗ್ರಾಂ ಮ್ಯೂರೇಟ್‌ ಆಫ್‌ ಪೊಟ್ಯಾಷ್‌), ಗೊಬ್ಬರವನ್ನು ಕೊಡಬೇಕು.

ಫಸಲು:
ಗೇರು ನೆಟ್ಟ 3ನೇ ವರ್ಷದಿಂದ  ಇಳುವರಿ ಪ್ರಾರಂಭವಾಗುತ್ತದೆ.  ಪೂರ್ತಿ ಹಣ್ಣಾದ ಗೇರು ಹಣ್ಣುಗಳು ಮರದಿಂದ ಉದುರಿ ಕೆಳಗೆ ಬೀಳುತ್ತವೆ.  ಇಂತಹ ಬಿದ್ದ ಹಣ್ಣಿನಿಂದ ಸಂಗ್ರಹಿಸಿದ ಬೀಜದ ತಿರುಳು ಗುಣಮಟ್ಟದಲ್ಲಿ ಉತ್ತಮವಾಗಿರುತ್ತದೆ.  ಸಂಗ್ರಹಿಸಿದ ಬೀಜಗಳನ್ನು 2-3 ದಿನ ಚೆನ್ನಾಗಿ ಒಣಗಿಸಿ ನಂತರ ದಾಸ್ತಾನು ಮಾಡಬೇಕು. ಗೇರು ಬೀಜದ ಇಳುವರಿಯು ನಿರ್ವಹಣೆಗೆ ಅನುಗುಣವಾಗಿ ಮೂರನೇ ಮತ್ತು ನಾಲ್ಕನೇ ವರ್ಷದಲ್ಲಿ ಮರವೊಂದಕ್ಕೆ 1 ಕಿ. ಗ್ರಾಂ. ನಿಂದ ಆರಂಭಗೊಂಡು 8-10 ವರ್ಷದ ಮರಗಳಿಂದ 10 ಕಿ. ಗ್ರಾಂ. ಇಳುವರಿ ಪಡೆಯಬಹುದು.

ಆಶಾದಾಯಕ ಬೆಳೆ
ವಿಜ್ಞಾನಿಗಳ ವಿಶ್ಲೇಷಣೆ ಪ್ರಕಾರ ಗೇರು  ಬೇಸಾಯಕ್ಕೆ ಹೆಚ್ಚು ಖರ್ಜು ಇಲ್ಲದೆಯೇ ಅತ್ಯಂತ ಕಡಿಮೆ ಕೂಲಿ ಕಾರ್ಮಿಕರ ಬಳಕೆ ಮತ್ತು ಕಡಿಮೆ ಬಂಡವಾಳ ಹೂಡಿಕೆಯಿಂದ ಹೆಚ್ಚು ಲಾಭ ಗಳಿಸುವ ಆಶಾದಾಯಕ ಬೆಳೆ. ಸುಧಾರಿತ ಬೇಸಾಯ ಕ್ರಮಗಳನ್ನು ಅಳವಡಿಸಿದಲ್ಲಿ ರೈತರು ಈ ಬೆಳೆಯಿಂದ ಹೆಚ್ಚಿನ ಲಾಭ ಗಳಿಸಲು ಖಂಡಿತ ಸಾಧ್ಯ.

ತಾಂತ್ರಿಕ ಮಾಹಿತಿ
ಡಾ. ಕೆ. ಎಸ್‌. ಕಾಮತ್‌, ಡಾ. ಎಸ್‌.ಯು. ಪಾಟೀಲ್‌, ಡಾ.ಬಿ. ಧನಂಜಯ ಮತ್ತು ಡಾ. ಎಚ್‌.ಸಿ. ವಿಕ್ರಮ್‌, ವಿಜ್ಞಾನಿಗಳು, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಬ್ರಹ್ಮಾವರ

– ಪ್ರವೀಣ್‌ ಮುದ್ದೂರು

Advertisement

Udayavani is now on Telegram. Click here to join our channel and stay updated with the latest news.

Next