ಬೆಂಗಳೂರು: ಎಟಿಎಂ ಸೆಂಟರ್‌ಗಳ ಸಿಡಿಎಂ ಮೆಷಿನ್‌ನಲ್ಲಿ ಹಣ ಠೇವಣಿಯಿಡುವ ಅಮಾಯಕರನ್ನೇ ಟಾರ್ಗೆಟ್ ಮಾಡಿ, “ತುರ್ತು ಹಣ ಬೇಕಾಗಿದ್ದು ನಿಮಗೆ ಆನ್‌ಲೈನ್ ಮೂಲಕ ಕಳಿಸುವುದಾಗಿ’ ದುಡ್ಡು ತೆಗೆದುಕೊಂಡು ಪರಾರಿಯಾಗುತ್ತಿದ್ದ ಖತರ್ನಾಕ್ ವಂಚಕನೊಬ್ಬ ಮಾಗಡಿ ರಸ್ತೆ ಪೊಲೀಸರ ಅತಿಥಿಯಾಗಿದ್ದಾನೆ.
ಆರ್.ಟಿ.ನಗರದ ನಿವಾಸಿ ಸಾಯಿಲ್ (24) ಬಂಧಿತ. ಸಾಯಿಲ್ ಅವಿವಾಹಿತನಾಗಿದ್ದು, ಕಡಿಮೆ ಸಮಯದಲ್ಲಿ ಹೆಚ್ಚು ದುಡ್ಡು ಸಂಪಾದಿಸುವ ದುರಾಸೆಗೆ ಬಿದ್ದು, ಬೆಂಗಳೂರಿನ ಕೆಲವು ಎಟಿಎಂ ಕೇಂದ್ರಗಳ ಮುಂದೆ ನಿಂತು ಹಣ ಡೆಪಾಸಿಟ್ ಮಾಡಲು ಬರುವ ಅಮಾಯಕರನ್ನು ಟಾರ್ಗೆಟ್ ಮಾಡುತ್ತಿದ್ದ.
ತುರ್ತು ಹಣ ಬೇಕಾಗಿದ್ದು ಆನ್‌ಲೈನ್ ಮೂಲಕ ನಿಮಗೆ ಹಣ ಕಳಿಸುವುದಾಗಿ ಸಾರ್ವಜನಿಕರ ಬಳಿ ಮನವಿ ಮಾಡುತ್ತಿದ್ದ. ಆತನ ಮನವಿಗೆ ಕನಿಕರದಲ್ಲಿ ಕೆಲವು ಜನ ಡೆಪಾಸಿಟ್ ಮಾಡುವ ದುಡ್ಡನ್ನು ಆತನ ಕೈಗೆ ಕೊಡುತ್ತಿದ್ದರು. ವಂಚಿಸಲೆಂದೇ ಸೃಷ್ಟಿಸಿದ್ದ ನಕಲಿ ಅಪ್ಲಿಕೇಷನ್ ಮೂಲಕ ಹಣ ಕಳುಹಿಸಿರುವ ರೀತಿ ಸಂದೇಶ ಕಳುಹಿಸಿಸುತ್ತಿದ್ದ. ತಮ್ಮ ಮೊಬೈಲ್ ಗೆ ಸಂದೇಶ ಬಂದಿರುವುದನ್ನು ನೋಡಿ ತಮ್ಮ ಖಾತೆಗೆ ಹಣ ಬಂದಿದೆ ಎಂದು ಜನ ನಂಬುತ್ತಿದ್ದರು. ಆದರೆ, ನೈಜವಾಗಿ ಅವರ ಖಾತೆಗೆ ದುಡ್ಡು ಜಮೆಯಾಗಿರುವುದಿಲ್ಲ. ಸಾಯಿಲ್ ಕೈಗೆ ದುಡ್ಡು ಬರುತ್ತಿದ್ದಂತೆ ಕೈಗೆ ಸಿಗದೇ ಪರಾರಿಯಾಗುತ್ತಿದ್ದ.
ಆರೋಪಿ ಸಿಕ್ಕಿ ಬಿದ್ದಿದ್ದು ಹೇಗೆ ?: ಬಸವೇಶ್ವರನಗರ ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂನ ಸಿಡಿಎಂ ಮೆಷಿನ್ ಗಳಿಗೆ ಹಣವನ್ನು ಡೆಪಾಸಿಟ್ ಮಾಡಲು ಬಂದ ವ್ಯಕ್ತಿಯೊಬ್ಬರ ಬಳಿ ಆರೋಪಿ ಸಾಯಿಲ್, “ನನಗೆ ಕ್ಯಾಷ್ ಬೇಕಾಗಿದೆ. ನಿಮಗೆ ಹಣವನ್ನು ನೆಫ್ಟ್ ಮೂಲಕ ವರ್ಗಾವಣೆ ಮಾಡುತ್ತೇನೆ’ ಎಂದು ನಂಬಿಸಿದ್ದ. ನಕಲಿ ಆಪ್ ಮೂಲಕ ಹಣವು ವರ್ಗಾವಣೆಯಾದ ರೀತಿ ಮೆಸೇಜ್ ಸೃಷ್ಟಿಸಿ 15 ಸಾವಿರ ರೂ. ಪಡೆದು ಪರಾರಿಯಾಗಿದ್ದ. ವಂಚನೆಗೊಳಗಾದ ವ್ಯಕ್ತಿ ಮಾಗಡಿ ರಸ್ತೆ ಠಾಣೆಗೆ ದೂರು ಕೊಟ್ಟಿದ್ದರು. ಪೊಲೀಸರು ಎಟಿಎಂನ ಸಿಸಿಕ್ಯಾಮರಾ ಆಧಾರದ ಮೇರೆಗೆ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿ ವಿಚಾರಣೆ ನಡೆಸಿದಾಗ ಮಲ್ಲೇಶ್ವರ, ಸುಬ್ರಮಣ್ಯನಗರ, ರಾಜಾಜಿನಗರ ಠಾಣಾ ವ್ಯಾಪ್ತಿಗಳಲ್ಲಿ ಇದೇ ಮಾದರಿಯಲ್ಲಿ ಆರೋಪಿಯು ವಂಚಿಸಿರುವುದು ಬೆಳಕಿಗೆ ಬಂದಿದೆ.
ಸಾಯಿಲ್‌ನನ್ನು ವಿಚಾರಣೆ ಗೊಳ ಪಡಿಸಿದಾಗ ಹಲವು ಬಾರಿ ವಂಚಿಸಿರುವುದು ಬೆಳಕಿಗೆ ಬಂದಿದೆ. ವಂಚನೆಗೊಳಗಾದ ಕೆಲವರು ದೂರು ನೀಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.