ಬೆಂಗಳೂರು: ಪಿಜ್ಜಾ-ಬರ್ಗರ್, ತಂಪು ಮತ್ತು ಬಿಸಿ ಪಾನೀಯಗಳು, ನೂಡಲ್ಸ್, ಪಾಸ್ತಾ, ಐಸ್‌ಕ್ರೀಂನಂತಹ ಜಂಕ್‌ಫುಡ್‌ಗಳೆಂದರೆ ಪೋಷಕರ ಕಣ್ಣು ಕೆಂಪಾಗುತ್ತವೆ. ಆದರೆ, ಅರಮನೆ ಆವರಣದಲ್ಲಿ ತಲೆಯೆತ್ತಿರುವ “ಖಾನಾವಳಿ’ ಮುಂದೆ ಮಕ್ಕಳೊಂದಿಗೆ ಮನೆಮಂದಿಯೆಲ್ಲಾ “ಕ್ಯೂ’ನಲ್ಲಿ ನಿಂತು ಆ ಎಲ್ಲ ಖಾದ್ಯಗಳನ್ನು ಸವಿದರು.
ಕೇವಲ ಸಾಂಪ್ರದಾಯಿಕ ಅಡಿಗೆಗೆ ಸೀಮಿತವಾಗಿದ್ದ ಸಿರಿಧಾನ್ಯಗಳೆಲ್ಲಾ ಅಂತಾರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಫಾಸ್ಟ್‌ಫುಡ್‌ಗಳಾಗಿ ಪರಿವರ್ತನೆಯಾಗಿದ್ದವು. ಇದರಿಂದ ಯುವಸಮುದಾಯ ಅಕ್ಷರಶಃ ಮುಗಿಬಿದ್ದರು. ಹಾಗಾಗಿ, ಬಡವರ ಆಹಾರಕ್ಕೆ ಅಲ್ಲಿ ಎಲ್ಲಿಲ್ಲದ ಬೇಡಿಕೆ ಬಂದಿತು.
ಸಿರಿಧಾನ್ಯಗಳಲ್ಲೇ ತಯಾರಿಸಿದ ಪಿಜ್ಜಾ-ಬರ್ಗರ್, ಮಿಲೆಟ್ ಮಟ್ಕಾ ಜ್ಯೂಸ್, ಸಿರಿಧಾನ್ಯಗಳಲ್ಲಿ ಸಿದ್ಧಗೊಳ್ಳುತ್ತಿದ್ದ ಗರಿಗರಿ ಮಾಸಾಲೆ ಮತ್ತು ಈರುಳ್ಳಿ ದೋಸೆ, ಬಿಸಿ ಹಾಗೂ ತಂಪು ಪಾನೀಯ, ವಿವಿಧ ನಮೂನೆಯ ಪಾಯಸ, ಪಡ್ಡು, ಇಡ್ಲಿಗಾಗಿ ಜನ ಕಾದುಕುಳಿತರು. ತುಸು ತುಟ್ಟಿಯಾದರೂ ಲೆಕ್ಕಿಸಲಿಲ್ಲ. ಆರೋಗ್ಯದ ಬಗ್ಗೆ ಜನರಲ್ಲಿ ಉಂಟಾದ ಜಾಗೃತಿಗೆ ಈ ದೃಶ್ಯ ಕನ್ನಡಿ ಹಿಡಿಯಿತು.
ವಾರಾಂತ್ಯದ ಹಿನ್ನೆಲೆಯಲ್ಲಿ ಐಟಿ-ಬಿಟಿ, ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಮಕ್ಕಳು, ಹಿರಿಯರು, ಕಿರಿಯರೆಲ್ಲರೂ ಇಡೀ ದಿನ ಮೇಳದಲ್ಲಿ ಬೀಡುಬಿಟ್ಟಿದ್ದರಿಂದ ಪಿಕ್ನಿಕ್ ತಾಣವಾಗಿ ಮಾರ್ಪಟ್ಟಿತ್ತು. ಪ್ರತಿಷ್ಠಿತ ಹೋಟೆಲ್‌ಗಳ ಬಾಣಸಿಗರು ಸಿರಿಧಾನ್ಯಗಳಿಂದ ತಯಾರಿಸುವ ಖಾದ್ಯಗಳನ್ನು ಸವಿದು ಸ್ವತಃ ರೈತರೂ ನಿಬ್ಬೆರಗಾದರು.
ಈ ಮಧ್ಯೆ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಲ್ಲೂ ಖರೀದಿ ಭರಾಟೆ ಜೋರಾಗಿತ್ತು. ಕೈ ತೊಳೆಯುವ ಲಿಕ್ವಿಡ್, ಸೋಪು, ಕೂದಲಿಗೆ ಬಳಿಯುವ ಬಣ್ಣವೂ ಸಾವಯವ ಉತ್ಪನ್ನಗಳಾಗಿದ್ದವು. ಇವುಗಳನ್ನು ಜನ ಕುತೂಹಲದಿಂದ ನೋಡಿ, ಮುಗಿಬಿದ್ದು ಖರೀದಿಸುತ್ತಿರುವುದು ಕಂಡುಬಂತು.
ಮೇಳದ ಎರಡನೇ ದಿನ ಸಾವಯವ ಮತ್ತು ಸಿರಿಧಾನ್ಯಗಳ ಮಾರುಕಟ್ಟೆ ವೃದ್ಧಿಗೆ ಸಂಬಂಧಿಸಿದಂತೆ ಐಐಎಂಆರ್ ಮತ್ತು ಟೆಕ್ನಾಲಜಿ ಬ್ಯುಸಿನೆಸ್ ಇನ್‌ಕುಬೇಟರ್‌ಗಳೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಾಯಿತು. ಎರಡು ದಿನಗಳಲ್ಲಿ ಸುಮಾರು 300 ಬಿ2ಬಿ ಮತ್ತು ಬಿ2ಎಫ್ (ಬ್ಯುಸಿನೆಸ್ ಟು ಫಾರ್ಮರ್) ಸಭೆಗಳು ನಡೆದಿವೆ. ಇದೇ ವೇಳೆ ಮೇಳದಲ್ಲಿ ಸಾವಯವ ಕೃಷಿ, ರಫ್ತು, ಬ್ರ್ಯಾಂಡಿಂಗ್, ರಿಟೇಲ್ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಜೈವಿಕ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪುರಸ್ಕೃತರು: ಆಗ್ಯಾನಿಕ್ಸ್ (ಹೈದರಾಬಾದ್), ಮೈ ಗ್ರೀನ್ ಮಾರ್ಟ್ (ಬೆಂಗಳೂರು) ಗಾನಾಯ್ ಮಿಲೆಟ್ಸ್ ಪ್ರೈ.ಲಿ., (ವಿಜಯವಾಡ), ರಿಚ್ ಮಿಲೆಟ್ ಫುಡ್ಸ್ ಪ್ರೈ.ಲಿ., (ಹೈದರಾಬಾದ್), ಬೋಯಿನ್‌ಪಲ್ಲಿಸ್ ಅಗ್ರೋ ಫುಡ್ ಪ್ರಾಡಕ್ಟ್$Õ ಪ್ರೈ.ಲಿ., (ಹೈದರಾಬಾದ್).