ಮೆಲ್ಬರ್ನ್: “ವಿಕೆಟ್ ಕೀಪಿಂಗ್ ಸ್ಥಾನಕ್ಕೆ ತಾನೇನೂ ಪಟ್ಟು ಹಿಡಿಯಲಿಲ್ಲ, ಇದು ತನಗೆ ಲಭಿಸಿದ ಅವಕಾಶ. ಅಲೆಕ್ಸ್ ಕ್ಯಾರಿ ಆಸ್ಟ್ರೇಲಿಯದ ಮುಂದಿನ ವಿಕೆಟ್ ಕೀಪರ್ ಎಂಬುದು ಎಲ್ಲರಿಗೂ ತಿಳಿದ ಸಂಗತಿ’ ಎಂಬುದಾಗಿ ಆ್ಯಶಸ್ ಸರಣಿಗೆ ಆಯ್ಕೆಯಾದ ಆಸೀಸ್ ಕೀಪರ್ ಮ್ಯಾಥ್ಯೂ ವೇಡ್ ಹೇಳಿದ್ದಾರೆ.
ವಿಶ್ವಕಪ್‌ನಲ್ಲಿ ಮಿಂಚಿದ ಅಲೆಕ್ಸ್ ಕ್ಯಾರಿ ಅವರನ್ನು ಕೈಬಿಟ್ಟು ಪ್ರತಿಷ್ಠಿತ ಆ್ಯಶಸ್ ಸರಣಿಗಾಗಿ ಮ್ಯಾಥ್ಯೂ ವೇಡ್ ಅವರನ್ನು ಆಯ್ಕೆ ಮಾಡಿದ್ದಕ್ಕೆ ಆಸ್ಟ್ರೇಲಿಯದಲ್ಲಿ ತೀವ್ರ ಟೀಕೆ ಎದುರಾಗಿದೆ. ಇದಕ್ಕೆ ವೇಡ್ ಮೌನ ಮುರಿದಿದ್ದಾರೆ.
ಆಸ್ಟ್ರೇಲಿಯದ ನಾಯಕ ಟಿಮ್ ಪೇನ್ ಕೂಡ ವಿಕೆಟ್ ಕೀಪರ್ ಆಗಿದ್ದು, ವೇಡ್ ಹೆಚ್ಚುವರಿ ಕೀಪರ್ ಆಗಿ ಸ್ಥಾನ ಪಡೆದಿದ್ದಾರೆ.
“ಆಸ್ಟ್ರೇಲಿಯ ತಂಡದಲ್ಲಿ ನಾನು ಮೀಸಲು ವಿಕೆಟ್ ಕೀಪರ್ ಆಗಿ ಕಾಣಿಸಿಕೊಂಡದ್ದೇ ಹೆಚ್ಚು. ಪಂದ್ಯದ ಬೆಳಗ್ಗೆ ಟಿಮ್ ಪೇನ್ ಅಲಭ್ಯರಾದರೆ ಆಗ ನಾನು ಗ್ಲೌಸ್ ಧರಿಸುತ್ತಿದ್ದೆ. 20 ಟೆಸ್ಟ್ ಆಡಿದ್ದೇನೆ. ಮರಳಿ ಕರೆ ಪಡೆದುದಕ್ಕೆ ಖುಷಿಯಾಗಿದೆ’ ಎಂದು ವೇಡ್ ಹೇಳಿದರು. 2017ರ ಅಕ್ಟೋಬರ್ ಬಳಿಕ ವೇಡ್ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿಲ್ಲ.