Advertisement

ನೀರಿನ ಸಮಸ್ಯೆ ಆಗದಂತೆ ಎಚ್ಚ ರವಹಿಸಿ

10:17 AM Jun 26, 2018 | Team Udayavani |

ಹರಪನಹಳ್ಳಿ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿರುವ ಹಿನ್ನೆಲೆ ಅಧಿಕಾರಿಗಳು ಖುದ್ದಾಗಿ ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಶಾಸಕ ಜಿ. ಕರುಣಾಕರ ರೆಡ್ಡಿ ತಾಕೀತು ಮಾಡಿದರು.

Advertisement

ಪಟ್ಟಣದ ತಾಲೂಕು ಪಂಚಾಯತ್‌ ರಾಜೀವ್‌ ಗಾಂಧಿ  ಸಭಾಂಗಣದಲ್ಲಿ ಸೋಮವಾರ ನಡೆದ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ. ಈ ಬಗ್ಗೆ ಸಮಗ್ರ ವರದಿಯನ್ನು ನೀಡಿ. ಪ್ಲೋರೈಡ್‌ಯುಕ್ತ ಅಂಶ ನಿರ್ಮೂಲನೆ ಮಾಡುವ ಬಗ್ಗೆ ಗಮನ ಹರಿಸಿ ಎಂದು ಕುಡಿಯುವ ನೀರು ನೈರ್ಮಲ್ಯ ಇಲಾಖೆ ಸೆಕ್ಸನ್‌ ಅಧಿಕಾರಿಗಳಿಗೆ ಸೂಚಿಸಿದರು.

ನೀರಿನ ಸಮಸ್ಯೆ ಇರುವ ಏಳು ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಎಇಇ ಜಯಣ್ಣ ಅವರು ಸಭೆಗೆ ಮಾಹಿತಿ ನೀಡಿದರು.

ಕೃಷಿ ಇಲಾಖೆಯ ನಾರನಗೌಡ ಅವರು ಜೂನ್‌ ವರೆಗೆ 252 ಮಿ.ಮೀ. ಮಳೆ ಬಂದಿದೆ. ಶೇ. 29ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜೂನ್‌ ತಿಂಗಳಲ್ಲಿ ಮಾತ್ರ ಸ್ವಲ್ಪ ಮಳೆಯ ಕೊರತೆ ಕಂಡು ಬಂದಿದೆ ಎಂದುತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಆರ್‌. ತಿಪ್ಪೇಸ್ವಾಮಿ ಮಾತನಾಡಿ, ಕಳೆದ ಸಾಲಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಮಾತ್ರ ವಿಮಾ ಪರಿಹಾರ ಬಂದಿದೆ. ಮುಂಗಾರಿನ ವಿಮೆ ಬಂದಿಲ್ಲ ಎಂದು ತಿಳಿಸಿದರು. ಸಂಧ್ಯಾ ಸುರಕ್ಷಾ,ವಿಧವಾ ಸೇರಿದಂತೆ ವಿವಿಧ ವೇತನಗಳು ಸರಿಯಾಗಿ ಬರುತ್ತಿಲ್ಲ ಎಂಬ ಬಗ್ಗೆ ದೂರುಗಳಿವೆ. ಸಮಸ್ಯೆ ಇದ್ದರೆ ಸರಿಪಡಿಸಿ ವೇತನಗಳನ್ನು ಫಲಾನುಭವಿಗಳಿಗೆ ಮುಟ್ಟಿಸಿ ಎಂದು ಸೂಚಿಸಿದ ಶಾಸಕರು, ಶೀಘ್ರ ಕಂದಾಯ ಇಲಾಖೆ ಸಿಬ್ಬಂದಿ ಸಭೆ ಕರೆದು ಈ ಕುರಿತು ಚರ್ಚೆ ನೆಡಸಲಾಗುವುದು ಎಂದರು.

Advertisement

ಹರಪನಹಳ್ಳಿ ತಾಲೂಕಿನಲ್ಲಿ 120 ಜನ ಶಿಕ್ಷಕರ ಕೊರತೆ ಇದ್ದು, 263 ಶಾಲಾ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿವೆ. ಹಲುವಾಗಲು ಜೂನಿಯರ್‌ ಕಾಲೇಜನ್ನು ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಎಂದು ಮಂಜೂರಾತಿ ನೀಡಿ ಅಭಿವೃದ್ಧಿಗೊಳಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌. ರವಿ ಮಾಹಿತಿ ನೀಡಿದರು.

ಎಸ್‌ಡಿಎಂಸಿ ಅವರಿಗೆ ನೀಡಿದ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗಳನ್ನು ಹಿಂದಕ್ಕೆ ಪಡೆದು ಭೂ ಸೇನಾ ನಿಗಮಕ್ಕೆ ನೀಡಿ ಎಂದು ಶಾಸಕರು ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಸೂಚಿಸಿದರು. ತೆಲಗಿ, ಅರಸಿಕೇರಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದೆ ಎಂದು ತಾಲೂಕು ವೈದ್ಯಾಧಿಕಾರಿ ರೇಣುಕಾರಾಧ್ಯ ಸಭೆಯ ಗಮನಕ್ಕೆ ತಂದರು.

ಸಭೆಗೆ ಗೈರಾದ ಅಂಬೇಡ್ಕರ, ದೇವರಾಜ ಅರಸು ಹಾಗೂ ಎಸ್ಟಿ ಅಭಿವೃದ್ದಿ ನಿಗಮಗಳ ಅಧಿಕಾರಿಗಳಿಗೆ ಶೋಕಾಸ್‌ ನೋಟಿಸ್‌ ನೀಡಲು ಶಾಸಕ ಕರುಣಾಕರರೆಡ್ಡಿ ಅವರು ತಾಲೂಕು ಪಂಚಾಯತ್‌ ಇಒ ತಿಪ್ಪೇಸ್ವಾಮಿ ಅವರಿಗೆ ಸೂಚಿಸಿದರು. ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರಪ್ಪ,ತಾಪಂ ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪಾಧ್ಯಕ್ಷ ಎಲ್‌.
ಮಂಜನಾಯ್ಕ, ಜಿಪಂ ಸದಸ್ಯರಾದ ಡಾ| ಮಂಜುನಾಥ ಉತ್ತಂಗಿ, ಎಚ್‌.ಬಿ. ಪರಶುರಾಮಪ್ಪ, ಕೆ.ಆರ್‌. ಜಯಶೀಲಾ, ಸುವರ್ಣಾ ನಾಗರಾಜ, ರಶ್ಮಿ ರಾಜಪ್ಪ, ತಹಶೀಲ್ದಾರ್‌ ಗುರುಬಸವರಾಜ, ಯೋಜನಾಧಿಕಾರಿ ವಿಜಯಕುಮಾರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next