ಮೈಸೂರು: ಮೈಸೂರು ಫೋಟೋಗ್ರಾಫಿಕ್ ಅಸೋಸಿಯೇಷನ್ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನಕ್ಕೆ ಶಾಸಕ ಎಂ.ಕೆ.ಸೋಮಶೇಖರ್ ಚಾಲನೆ ನೀಡಿದರು.
ನಗರದ ಕಲಾಮಂದಿರದ ಆವರಣದಲ್ಲಿರುವ ಸುಚಿತ್ರ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿರುವ ಮೂರು ದಿನಗಳ ಛಾಯಾಚಿತ್ರ ಪ್ರದರ್ಶನದಲ್ಲಿ ಕಾಡಿನಲ್ಲಿ ಕಾಣ ಸಿಗುವ ವನ್ಯಜೀವಿಗಳ ಬದುಕು, ಮರಿಗಳೊಂದಿಗೆ ಅಡ್ಡಾಡುವ, ಆಹಾರ ಒದಗಿಸುವ ಶೈಲಿ, ಪ್ರಾಚೀನ ದೇವಾಲಯಗಳ ಸೊಬಗು ಸೇರಿದಂತೆ ಇನ್ನಿತರ ಆಕರ್ಷಕ ಛಾಯಾಚಿತ್ರಗಳು ನೋಡುಗರನ್ನು ಸೆಳೆಯುತ್ತಿವೆ.
ಪ್ರದರ್ಶನದಲ್ಲಿ ಹಿರಿಯ ಛಾಯಾಗ್ರಾಹಕರಾದ ಎಸ್.ರಾಮಪ್ರಸಾದ್, ಹಯಗ್ರೀವ, ಎ.ಶಾಂತಪ್ಪ, ಜಿ.ಎಸ್.ರವಿಶಂಕರ್, ಜಿ.ಎಸ್.ಬಾಬು, ವಿ.ಶೇಷಾದ್ರಿ, ಕೆ.ಜಿ.ಸಿದ್ದಲಿಂಗಪ್ರಸಾದ್, ಸುಬ್ರಹ್ಮಣ್ಯ, ಎನ್. ಮುರಳೀಧರನ್, ಮನುಮಹೇಶ್, ಅರುಣ್ ಅರಸ್, ಎಚ್.ಕೆ.ಮಲ್ಲೇಶ್ ಸೆರೆಹಿಡಿದಿರುವ 70ಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ಪ್ರದರ್ಶನದಲ್ಲಿ ನೋಡಬಹುದಾಗಿದೆ.
ಮೂರು ದಿನಗಳ ಛಾಯಾಚಿತ್ರ ಪ್ರದರ್ಶನ ಆ.20ರವರೆಗೆ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಛಾಯಾಗ್ರಾಹಕರು ಕ್ಯಾಮರಾದಲ್ಲಿ ಸೆರೆಹಿಡಿದಿರುವ ಚಿತ್ರಗಳೆಲ್ಲವೂ ಅದ್ಭುತವಾಗಿದ್ದು, ಸಾಕಷ್ಟು ಪರಿಶ್ರಮ ಹಾಗೂ ತಾಳ್ಮೆಯಿಂದ ಸೆರೆಹಿಡಿದಿರುವ ಛಾಯಾಚಿತ್ರಗಳನ್ನು ಎಲ್ಲರು ನೋಡಬೇಕಿದೆ ಎಂದರು.
ಫ್ರಾನ್ಸ್‌ನ ಮಾನವಹಕ್ಕು ಆಯೋಗದ ರಾಯಭಾರಿ ಗುರು ಎಸ್.ಡಿಸೋಜಾ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ, ಬಿಜೆಪಿ ಮುಖಂಡ ಎನ್.ಎಂ.ನವೀನ್‌ಕುಮಾರ್ ಇನ್ನಿತರರು ಹಾಜರಿದ್ದರು.