ಬೆಂಗಳೂರು: ನಾನು ಶಾಖೆಯಿಂದ ಹೊರ ಬಂದು ಸೈನ್ಯ ಸೇರಿದೆ. ಅದೇ ರೀತಿ ಶಾಖೆಯಿಂದ ಬಂದು ಹಲವರು ಬೇರೆ ಬೇರೆ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಸಮಾಜ ಸೇವೆ, ರಾಷ್ಟ್ರ ನಿರ್ಮಾಣವನ್ನು ಸಿದ್ದರಾಮಯ್ಯರಿಂದ ಕಲಿಯುವ ಅಗತ್ಯ ಇಲ್ಲ ಎಂದು ಮಾಜಿ ಪರಿಷತ್ ಸದಸ್ಯ, ಬಿಜೆಪಿ ನಾಯಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ ಎಸ್ಎಸ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದರು.
ನಾನು ಸೈನ್ಯದಲ್ಲಿ ಕೆಲಸ ಮಾಡಿದೆನೆಂದರೆ ಅದಕ್ಕೆ ಕಾರಣ ಆರ್ ಎಸ್ಎಸ್. ಇಬ್ಬರು ಮಾಜಿ ಸಿಎಂಗಳು ಮುಂದಿನ ಚುನಾವಣೆಯಲ್ಲಿ ಒಂದು ಸಮುದಾಯದ ಮತಕ್ಕಾಗಿ ಆರ್ ಎಸ್ಎಸ್ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಮಾಡುವ ಕೆಲಸ ಬಿಟ್ಟು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಇದನ್ನೂ ಓದಿ:ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ.. : ಸರಕಾರದ ವಿರುದ್ಧ ಎಚ್ ಡಿಕೆ ಧಿಕ್ಕಾರ
ಅತ್ಯಂತ ಜಾತಿವಾದಿ, ಕೋಮುವಾದಿ ಸಿದ್ದರಾಮಯ್ಯ ಅಧಿಕಾರಕ್ಕಾಗಿ ಕಾಂಗ್ರೆಸ್ ಸೇರಿದರು. ಜಿ ಪರಮೇಶ್ವರ್ ರನ್ನು ಸೋಲಿಸಿದರು, ಖರ್ಗೆಯನ್ನು ಸೈಡ್ ಲೈನ್ ಮಾಡಿದರು. ಈಗ ಡಿಕೆ ಶಿವಕುಮಾರ್ ಹಿಂದೆ ಬಿದ್ದಿದ್ದಾರೆ. ಕೇವಲ ಅಧಿಕಾರಕ್ಕೆ ಮಾತ್ರ ಸಿದ್ದರಾಮಯ್ಯ ಹೋರಾಟ ಎಂದು ವ್ಯಂಗ್ಯವಾಡಿದರು.
24 ಹಿಂದೂ ಕಾರ್ಯಕರ್ತರ ಕೊಲೆ ಆದರೂ ಅವರು ಮಾತಾಡಿಲ್ಲ. ಗೋ ಕಳ್ಳತನ ಮಾಡಲು ಹೋಗಿ ಸತ್ತ ಕಬೀರ್ ಗೆ 10 ಲಕ್ಷ ಪರಿಹಾರ ನೀಡಿದರು. ರಾಜಕೀಯ ಮಾಡೋದಿದ್ರೆ ನೇರವಾಗಿ ಮಾಡಿ ಎಂದು ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದರು.