Advertisement

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

05:42 PM Nov 15, 2024 | Team Udayavani |

ಬೆಳಗಾವಿ: ಚುನಾವಣೆ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಬೆಳಗಾವಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಆಪರೇಷನ್ ಕಮಲ ಮಾಡುವ ಪರಿಸ್ಥಿತಿ ಅಥವಾ ಅನಿವಾರ್ಯತೆ ಇಲ್ಲ. ಕಾಂಗ್ರೆಸ್‌ದವರೇ ಅತಂತ್ರದಲ್ಲಿದ್ದಾರೆ. ನನ್ನನ್ನು ಮುಟ್ಟಿದರೆ ಕರ್ನಾಟಕದ ಜನರು ಸುಮ್ಮನೆ ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ತಮ್ಮ ಪಕ್ಷದವರನ್ನು ಉದ್ದೇಶಿಸಿಯೇ ಹೇಳಿದ್ದಾರೆ. ಅವರು ಹೇಳಿರುವದು ಬಿಜೆಪಿಯವರಿಗೆ ಅಲ್ಲ. ಉಪಚುನಾವಣೆ ಫಲಿತಾಂಶದ ನಂತರ ಮುಖ್ಯಮಂತ್ರಿ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ. ಹೀಗಾಗಿ ಸಿದ್ದರಾಮಯ್ಯ ತಮ್ಮವರನ್ನು ಉದ್ದೇಶಿಸಿ ಈ ರೀತಿ ಹೇಳಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹೋರಾಟದಿಂದ ಬಂದವರು. ಆದರೆ ಮುಡಾ ಹಗರಣದಲ್ಲಿ ತಮ್ಮ ಪತ್ನಿಯ ಹೆಸರು ಬಂದ ನಂತರ ಮಾನಸಿಕವಾಗಿ ಗೊಂದಲದಲ್ಲಿದ್ದಾರೆ. ಮುಡಾ ಹಗರಣದ ನಂತರ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಅವರ ಪಕ್ಷದಲ್ಲೇ ಗುಸುಗುಸು ಅರಂಭವಾಗಿತ್ತು. ಈ ಆತಂಕ ಸಿದ್ದರಾಮಯ್ಯಗಿದೆ. ಅದೇ ಕಾರಣಕ್ಕೆ ಸಿದ್ದರಾಮಯ್ಯ ತಮ್ಮ ಪಕ್ಷದವರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಕಡಾಡಿ ಹೇಳಿದರು.

ಜಮೀರ್ ಅಹಮದ್ ಅವರಂತಹ ಅಪ್ರಬುದ್ಧ ನಾಯಕನನ್ನು ಸಚಿವರನ್ನಾಗಿ ಮಾಡಿದ್ದು ಈ ರಾಜ್ಯದ ದೌಭಾರ್ಗ್ಯ. ಈ ಹಿನ್ನೆಲೆಯಲ್ಲಿ ಅವರನ್ನು ಕೂಡಲೇ ಮಂತ್ರಿಮಂಡಲದಿಂದ ವಜಾ ಮಾಡಬೇಕು. ಈ ಮೊದಲು ವಕ್ಪ್ ವಿಷಯ ಮುಂದಿಟ್ಟುಕೊಂಡು ರಾಜ್ಯದಲ್ಲಿ ಎಷ್ಟು ಗದ್ದಲ ಎಬ್ಬಿಸಿದ್ದರು. ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಕೆಲಸ ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಇದಾದ ಮೇಲೆ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಅವಮಾನಕಾರಿ ರೀತಿಯಲ್ಲಿ ಮಾತನಾಡಿದ್ದಾರೆ. ಇಂತಹ ಅಪ್ರಬುದ್ಧ ನಾಯಕರನ್ನು ತಕ್ಷಣ ಕೈಬಿಡಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next