Advertisement

Road Accident: ರಾಜಧಾನಿ, ಸುತ್ತ ಮುತ್ತ ಅಪಘಾತದ ಹಾಟ್‌ಸ್ಪಾಟ್‌!

03:47 PM Sep 09, 2024 | Team Udayavani |

ರಾಮನಗರ: ರಾಜಧಾನಿ ಬೆಂಗಳೂರು ಹಾಗೂ ಇದಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳು ರಸ್ತೆ ಅಪಘಾತದ ಹಾಟ್‌ಸ್ಪಾಟ್‌ ಆಗಿದೆಯಾ..? ಹೌದು ಎನ್ನುತ್ತಿದೆ ಪೊಲೀಸ್‌ ಇಲಾಖೆಯ ಅಂಕಿ ಅಂಶ!.

Advertisement

3 ವರ್ಷಗಳ ಅಪಘಾತ ಪ್ರಮಾಣ ಪರಿಶೀಲಿಸಿದರೆ ಬೆಂಗಳೂರು ನಗರ ಹಾಗೂ ರಾಜಧಾನಿಗೆ ಹೊಂದಿಕೊಂಡಿರುವ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಹೆಚ್ಚು ರಸ್ತೆ ಅಪಘಾತ ಸಂಭವಿಸುತ್ತಿವೆ. ಇಡೀ ರಾಜ್ಯದಲ್ಲಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗುವ ಜನರ ಪೈಕಿ ಈ ನಾಲ್ಕು ಜಿಲ್ಲೆಗಳಲ್ಲಿ ಶೇ.25 ಮಂದಿ ಸಾವಿಗೀಡಾಗುತ್ತಿದ್ದಾರೆ ಎಂಬುದು ಪೊಲೀಸ್‌ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ದೃಢಪಟ್ಟಿದೆ.

3 ವರ್ಷಗಳಲ್ಲಿ 5 ಸಾವಿರ ಮಂದಿ ಸಾವು: ಬೆಂಗಳೂರು ನಗರ ಹಾಗೂ ರಾಜಧಾನಿಗೆ ಹೊಂದಿ ಕೊಂಡಿರುವ 3 ಜಿಲ್ಲೆಗಳಲ್ಲಿ ಕಳೆದ 3 ವರ್ಷದ ಅವಧಿಯಲ್ಲಿ ಆಗಸ್ಟ್‌ ಅಂತ್ಯದ ವೇಳೆಗೆ ರಸ್ತೆ ಅವ ಘಡದಲ್ಲಿ 5335 ಮಂದಿ ಸಾವಿಗೀಡಾಗಿದ್ದಾರೆ. ಇಡೀ ರಾಜ್ಯದಲ್ಲಿ ಈ ಅವಧಿಗೆ 23,738 ಮಂದಿ ಸಾವಿ ಗೀ ಡಾಗಿದ್ದಾರೆ. ಈ ಭಾಗದಲ್ಲಿ ಹೆಚ್ಚಿನ ವಾಹನ ದಟ್ಟಣೆ ಇರುವುದೇ ಅಪಘಾತ ಪ್ರಮಾಣ ಹೆಚ್ಚುವುದಕ್ಕೆ ಕಾರಣ ಎಂಬುದು ಪೊಲೀಸ್‌ ಮೂಲಗಳ ವಿವರಣೆ ಆಗಿದೆ.

ಸಂಚಾರ ಸುರಕ್ಷತೆಗೆ ಗಮನ ಹರಿಸಬೇಕಿದೆ: ಮಿತಿಮೀರಿದ ವೇಗ, ಸಂಚಾರ ನಿಯಮಗಳ ಉಲ್ಲಂಘನೆ, ಅಸುರಕ್ಷಿತ ರಸ್ತೆಗಳು ಅಪಘಾತಕ್ಕೆ ಮುಖ್ಯ ಕಾರಣ. ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಬೆಂಗಳೂರು ನಗರಕ್ಕೆ ಹೊಂದುಕೊಂಡಂತೆ ಇರುವ ಗ್ರಾಮಾಂತರ, ರಾಮನಗರ, ತುಮಕೂರು ಜಿಲ್ಲೆಯಲ್ಲಿ ಅಪಘಾತ ಹೆಚ್ಚಳಕ್ಕೆ ವಾಹನ ದಟ್ಟಣೆ ಹೆಚ್ಚಿರುವುದೇ ಕಾರಣ.

ಸಂಚಾರ ಸುರಕ್ಷತಾ ನಿಯಮಗಳ ಜಾರಿಗೆ ಪೊಲೀಸ್‌ ಇಲಾಖೆ ಮುಂದಾಗುವ ಜತೆಗೆ ನಾಗರಿಕರು ತಮ್ಮ ಸುರಕ್ಷತೆಗಾಗಿ ಸಂಚಾರ ನಿಯಮ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಿದೆ. ಇನ್ನು ರಸ್ತೆ ಸುರಕ್ಷತೆ ಬಗ್ಗೆಯೂ ಸಂಬಂಧಿಸಿದ ಇಲಾಖೆ ಗಮನಹರಿಸಬೇಕಿದೆ.

Advertisement

ರಾಜ್ಯದಲ್ಲಿ ಕಡಿಮೆಯಾದ ಅಪಘಾತ ಮರಣ ಸಂಖ್ಯೆ:

ರಾಜ್ಯದಲ್ಲಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗುವವರ ಸಂಖ್ಯೆ ಕಳೆದ 3 ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಕಡಿಮೆಯಾಗಿದೆ. 2022ರಲ್ಲಿ ಆಗಸ್ಟ್‌ ತಿಂಗಳವರೆಗೆ7996 ಮಂದಿ ರಾಜ್ಯದಲ್ಲಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದರು. 2023ರಲ್ಲಿ ಈ ಸಂಖ್ಯೆ 8,146 ಇತ್ತು. ಈ ವರ್ಷದ ಆಗಸ್ಟ್‌ ಅಂತ್ಯಕ್ಕೆ 7596 ಮಂದಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ 550 ಸಾವಿನ ಪ್ರಮಾಣ ಕಡಿಮೆಯಾಗಿದೆ.

ಕಮಿಷನರೆಟ್‌ಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚು :  ರಾಜ್ಯದಲ್ಲಿ ಬೆಂಗಳೂರು ನಗರ ಸೇರಿ 6 ಪೊಲೀಸ್‌ ಕಮಿಷನರೆಟ್‌ಗಳಿವೆ. ಕಳೆದ 3 ವರ್ಷಗಳಲ್ಲಿ ಹುಬ್ಬಳ್ಳಿ ಮತ್ತು ಕಲಬುರಗಿ ಕಮಿಷನರೇಟ್‌ ಹೊರತು ಪಡಿಸಿದರೆ ಬೆಂಗಳೂರು ನಗರ, ಮೈಸೂರುನಗರ, ಹುಬ್ಬಳ್ಳಿ ಧಾರವಾಡ, ಬೆಳಗಾವಿ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಅಪಘಾತ ಪ್ರಮಾಣ ಈ ಹಿಂದಿನ ಸಾಲಿಗಿಂತ ಈ ಬಾರಿ ಹೆಚ್ಚಾಗಿದೆ.ರಾಜ್ಯದ 32 ಪೊಲೀಸ್‌ ವಿಭಾಗಗಳ ಪೈಕಿ(ರೈಲ್ವೆ, ಕೆಜಿಎಫ್‌) ಸೇರಿ 15ರಲ್ಲಿ ಅಪಘಾತ ಪ್ರಮಾಣ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಹೆಚ್ಚಾಗಿದೆ. ಉಳಿದಂತೆ 17 ವಿಭಾಗಗಳಲ್ಲಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗುವವರ ಪ್ರಮಾಣ ಕಡಿಮೆಯಾಗಿದೆ.

ರಸ್ತೆ ಅಪಘಾತಗಳು ಮತ್ತು ಸಾವು ನಿಯಂತ್ರಣದಲ್ಲಿರಿಸುವುದು ಕಠಿಣವಾದ ಕೆಲಸ. ರಸ್ತೆ ಸುರಕ್ಷತೆ ಖಚಿತಪಡಿಸುವುದು ಸವಾಲಿನ ಕೆಲಸ. ಪೊಲೀಸ್‌ ಅಧಿಕಾರಿಗಳು ಅಪಘಾತದಿಂದಾಗುವ ಸಾವುಗಳನ್ನು ಕಡಿಮೆಮಾಡಲು ಸಾಕಷ್ಟು ಪರಿಶ್ರಮ ವಹಿಸಿದ್ದಾರೆ. ಅವರಿಗೆ ಅಭಿನಂದನೆ. – ಅಲೋಕ್‌ಕುಮಾರ್‌, ಎಡಿಜಿಪಿ ರಸ್ತೆ ಸುರಕ್ಷತೆ ಮತ್ತು ಸಂಚಾರ

-ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next