Advertisement
ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳು ತಮ್ಮ ಆದಾಯ ಮೂಲವನ್ನು ಘೋಷಿಸಬೇಕೆಂದು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನ ಒಂದು ರೀತಿಯಲ್ಲಿ ಸರಿಯಾದ ಸಮಯದಲ್ಲೇ ಹೊರಬಿದ್ದಿದೆ. ಇನ್ನೇನು ಮೂರು ತಿಂಗಳಲ್ಲಿ ನಮ್ಮ ರಾಜ್ಯ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದೆಯಷ್ಟೆ? ಮುಂಬರುವ ವಿಧಾನಸಭೆಗೆ ಯಾವ ರೀತಿಯ ಶಾಸಕರು ಆಯ್ಕೆಯಾಗಬಹುದೆಂಬ ಬಗೆಗಿನ ತೀವ್ರ ಆತಂಕ ಈಗಾಗಲೇ ಮತದಾರರಲ್ಲಿ ಮೂಡಲಾರಂಭಿಸಿದೆ. ಕಾರಣ, 2013ರಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಕೆಲ ಶಾಸಕರುಗಳಿಂದ ಈ ರಾಜ್ಯಕ್ಕೆ “ಸಾಕು ಬೇಕೆಂಬಷ್ಟು’ ಸಿಕ್ಕಿದೆ!
ಚುನಾವಣಾ ಪ್ರಕ್ರಿಯೆಯ ಸುಧಾರಣೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪು “ಅಭೂತಪೂರ್ವ’ ವೆಂದೇ ಹೇಳಬೇಕು. ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್ ಹಾಗೂ ಎಸ್. ಅಬ್ದುಲ್ ನಜೀರ್ ಇವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠ, “ಚುನಾವಣಾ ಕಣಕ್ಕಿಳಿಯುವ ಅಭ್ಯರ್ಥಿಗಳ ಅರ್ಹತೆಯನ್ನು ನಿರ್ಧರಿಸಬೇಕಿದ್ದರೆ, ರಾಜಕಾರಣಿಗಳು, ಅವರ ಪತ್ನಿ/ಪತಿ ಹಾಗೂ ಅವರ ನಿಕಟವರ್ತಿಗಳ ಆದಾಯ ಮೂಲಗಳ ವಿವರಗಳನ್ನು ಘೋಷಿಸಬೇಕು ಎಂದು ಆದೇಶಿಸಿ ಹೊರಡಿಸಿರುವ ತೀರ್ಪು ಇದು. ಹಾಲಿ ಸಂಸತ್ ಸದಸ್ಯರು, ಶಾಸಕರು, ಅವರ ಸಂಬಂಧಿಗಳು ಹಾಗೂ ನಿಕಟವರ್ತಿಗಳು ಶೇಖರಿಸಿರುವ ಸಂಪತ್ತಿನ (ಆಸ್ತಿಪಾಸ್ತಿಗಳ) ವಿವರವನ್ನು ಪರಿಶೀಲಿಸಲು ಒಂದು ಖಾಯಂ ಸಮಿತಿಯನ್ನು ರೂಪಿಸುವಂತೆಯೂ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ಸೂಚಿಸಿದೆ. ಶಾಸಕರ ಸಂಪತ್ತಿನ ಶೇಖರಣೆಯ ಪ್ರಮಾಣ ಹಲವು ಪಟ್ಟು ಹೆಚ್ಚಾಗಿದ್ದಲ್ಲಿ, ಇಂಥ ಅಕ್ರಮ ಹಾಗೂ ಅನಗತ್ಯ ಶೇಖರಣೆ ಇಂಥ ಶಾಸಕರನ್ನು ಅನರ್ಹಗೊಳಿಸುವ ಪ್ರಕ್ರಿಯೆಗೆ ಅನುವು ಮಾಡಿಕೊಡುವ ಒಂದು ಉತ್ತಮ ಪುರಾವೆಯಾಗಿ ಪರಿಣಮಿಸುತ್ತದೆ ಎಂದೂ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಲೆಕ್ಕದಲ್ಲಿ ತೋರಿಸಿದಷ್ಟು ಪ್ರಮಾಣದ ಆಸ್ತಿಪಾಸ್ತಿಗಳ ಶೇಖರಣೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಕುಸಿತದ ದ್ಯೋತಕ. ಇದು ಪ್ರಜಾ ಪ್ರಭುತ್ವದ ವಿನಾಶಕ್ಕೆ, ಮಾಫಿಯಾ ಆಡಳಿತಕ್ಕೆ ಹಾದಿ ಮಾಡಿ ಕೊಡುತ್ತದೆ ಎಂದೂ ನ್ಯಾಯಾಲಯ ಎಚ್ಚರಿಸಿದೆ.
Related Articles
Advertisement
ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಟಕ್ಕಿಳಿದಿರುವ ನಮ್ಮ ನ್ಯಾಯಾಂಗ ಚುನಾವಣಾ ವ್ಯವಸ್ಥೆಯನ್ನು ಸ್ವತ್ಛಗೊಳಿಸುವ ನಿಟ್ಟಿನಲ್ಲಿ ಈಗ ಚುನಾಯಿತ ಸರಕಾರಗಳ ಲೋಪದೋಷಗಳನ್ನು ಸರಿಪಡಿಸುವ ಕಾರ್ಯಕ್ಕೆ ಮುಂದಾಗಿದೆ. ಸಾರ್ವಜನಿಕ ಜೀವನ ದಲ್ಲಿ ತೊಡಗಿಕೊಂಡಿರುವ ಮಂದಿಯಲ್ಲಿನ ಪ್ರಾಮಾಣಿಕತೆಯ ಕೊರತೆಯೇ ದೇಶದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರದ ತಾಂಡವಕ್ಕೆ ಹಾದಿ ಮಾಡಿಕೊಟ್ಟಿದೆ ಎಂಬ ಸತ್ಯ ಎಲ್ಲರಿಗೂ ಗೊತ್ತಿದೆ. ವಾಸ್ತವವಾಗಿ ಸಂಸತ್ತು ತಾನೇ ಮಾಡಬೇಕಾಗಿದ್ದ ಕೆಲಸವನ್ನು ನ್ಯಾಯಾಲಯಗಳು ಮಾಡುತ್ತಿವೆ. ನಮ್ಮ ಸಂಸತ್ತು ಪಕ್ಷಾಂತರ ಕಾಯ್ದೆಯನ್ನು ಅಂಗೀಕರಿಸಿತೇನೋ ಹೌದು; ಎಷ್ಟೋ ವರ್ಷಗಳ ಮೀನ-ಮೇಷದ ಬಳಿಕ ಅದಕ್ಕೆ ತಿದ್ದುಪಡಿಯನ್ನು ತಂದಿತು. ಈ ಕಾಯ್ದೆಯ ಜಾರಿ ಕುರಿತಂತೆ ಪ್ರಪ್ರಥಮ ಬಾರಿಗೆ ಕೋಲಾಹಲ ಕಾಣಿಸಿಕೊಂಡುದು 1977ರಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ ಒಬ್ಬ ಸಂಸದ ಅಥವಾ ಶಾಸಕ ತನ್ನ ಪಕ್ಷದ ಆಯ್ಕೆಗೆ ಸಂಬಂಧಿಸಿ ದಂತೆ ಆತ್ಮಸಾಕ್ಷಿ ಹಕ್ಕನ್ನು ಹೊಂದಿರುತ್ತಾನೆಂಬ ವಾದವನ್ನು ಮುಂದೊಡ್ಡಿ ಈ ಕಾಯ್ದೆಯ ಅಳವಡಿಕೆಯನ್ನು ಭಗ್ನಗೊಳಿಸಿದವರು ಮಧು ಲಿಮಯೆ ಹಾಗೂ ಇತರರು. ಮುಂದೆ ಈ ಕಾಯ್ದೆಗೆ 52ನೆಯ ಸಂವಿಧಾನ ತಿದ್ದುಪಡಿಯ ಮೂಲಕ ಅಂಗೀಕಾರ ದೊರಕಿಸುವ ಹೊಣೆ ರಾಜೀವ್ ಗಾಂಧಿಯವರ ಸರಕಾರದ ಹೆಗಲಿಗೆ ಬಿತ್ತು. ಸಂವಿಧಾನಕ್ಕೆ ಹತ್ತನೆಯ ಪರಿಚ್ಛೇದವನ್ನು ಸೇರ್ಪಡೆಗೊಳಿಸಲಾಯಿತು. ಭಾರತದ ಪ್ರಜಾಪ್ರಭುತ್ವದ ಸ್ವತ್ಛತಾ ಅಭಿಯಾನಕ್ಕೆ ಮುಂದಾಗಿ ಇಂಥ ಧೈರ್ಯದ ಕ್ರಮ ಕೈಗೊಂಡ ಕೀರ್ತಿ ರಾಜೀವ್ ಗಾಂಧಿಯವರಿಗೆ ಸಲ್ಲಲೇಬೇಕು. ಈ ಕಾಯ್ದೆಯನ್ನು ಅನ್ವಯಿಸಿ ಇತ್ತೀಚೆಗೆ ಅನುಷ್ಠಾನಗೊಳಿಸಲಾದ ಪ್ರಕರಣವೆಂದರೆ ಸಂಯುಕ್ತ ಜನತಾದಳದ ನಾಯಕ ಶರದ್ ಯಾದವ್ ಹಾಗೂ ಅವರ ಪಕ್ಷದ ಸದಸ್ಯ ಅಲಿ ಅನ್ವರ್ ಅವರನ್ನು ರಾಜ್ಯಸಭೆಯಿಂದ ಅನರ್ಹಗೊಳಿಸಿದ ವಿದ್ಯಮಾನ. ಸರ್ವೋಚ್ಚ ನ್ಯಾಯಾಲಯ ಮೊನ್ನೆಯ ತೀರ್ಪು ಜನ/ಸಮುದಾಯ ಸೇವೆಯ ಗಂಧಗಾಳಿಯೂ ಇಲ್ಲದ ಹಣದ ಮೂಟೆಗಳನ್ನು ಚುನಾವಣಾ ಕಣದಿಂದ ದೂರಗೊಳಿಸುವ ನಿಟ್ಟಿನಲ್ಲಿ ದೊಡ್ಡ ರೀತಿಯ ಪರಿಣಾಮ ಬೀರಿಯೇ ಬೀರುತ್ತದೆ. ನಮ್ಮ ಚುನಾವಣಾ ವ್ಯವಸ್ಥೆ ಎಷ್ಟು ಹದಗೆಟ್ಟಿದೆಯೆಂದರೆ ಬಡವರು ಬಿಡಿ ಸಾಧಾರಣ ಶ್ರೀಮಂತ ಕುಟುಂಬದಿಂದ ಬಂದ ವ್ಯಕ್ತಿಯೊಬ್ಬ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಯಾವ ಕನಸನ್ನೂ ಕಾಣಲು ಸಾಧ್ಯವಿಲ್ಲ. ನಮ್ಮ ಪ್ರಜಾಪ್ರಭುತ್ವ ಸೂಪರ್ ಶ್ರೀಮಂತರಿಗಷ್ಟೇ ಮೀಸಲಾಗಿರುವ ಕ್ಷೇತ್ರವೇ ಆಗಿದೆ. ಈ ಅಂಕಣದಲ್ಲಿ ಪದೇ ಪದೇ ಹೇಳಿದ್ದೇನೆ, ಕರ್ನಾಟಕದಲ್ಲಿ ಇಂದು ಹೆಚ್ಚಾಗಿ ಕಬ್ಬಿಣದ ಅದಿರು ಗಣಿಗಳ ಒಡೆಯರು, ಶ್ರೀಮಂತ ಉದ್ಯಮಿಗಳು, ತೆರಿಗೆ ತಪ್ಪಿಸುವವರು, ಮದ್ಯದ ದೊರೆಗಳು, ನಿವೃತ್ತ ಭ್ರಷ್ಟ ಅಧಿಕಾರಿಗಳು, ಮಧ್ಯವರ್ತಿಗಳು ಅಥವಾ ದಲ್ಲಾಳಿಗಳು, ಭೂ ವ್ಯವಹಾರ ಏಜೆಂಟರು, “ಲ್ಯಾಂಡ್ ಡೆವೆಲಪರ್’ ಗಳು (ನಗರ ಪ್ರದೇಶಗಳ ಮತದಾನ ಕ್ಷೇತ್ರಗಳಲ್ಲಿ ), ಕ್ಯಾಪಿಟೇಶನ್ ಶುಲ್ಕ ಮಾಫಿಯಾ ಕುಳಗಳು, ಹಗರಣ ಶೂರರು… ಇಂಥವರೇ ನಮ್ಮ ವಿಧಾನಮಂಡಲದ ಉಭಯ ಸದನಗಳಿಗೆ ನಡೆಯುವ ಚುನಾವಣೆಗಳಿಗೆ ನಿಲ್ಲುವವರು. ಇಂಥವರು ಚುನಾಯಿತರಾಗಿ ಬಂದಾಗ ವಿವಿಧ ಭ್ರಷ್ಟ ಲಾಬಿಗಳಿಗೆ ತಾವೇ ವಕ್ತಾರರಾಗಿಬಿಡುತ್ತಾರೆ. ಸಾರ್ವಜನಿಕ ಸೇವಾಸಕ್ತಿಯ ಮಂದಿಯನ್ನು ಹಾಗೂ ಸಾಮಾಜಿಕ ಚಳವಳಿಯಲ್ಲಿ ನಿರತರಾಗಿರುವವರನ್ನು ಸಾಮಾನ್ಯವಾಗಿ ಸ್ಪರ್ಧೆಯ ಕಣದಿಂದ ದೂರವೇ ಇರಿಸಲಾಗುತ್ತದೆ. ಎಷ್ಟೋ ಬಾರಿ ರಾಜ್ಯಸಭೆಗೆ ಸೂಪರ್ ಶ್ರೀಮಂತ ಕುಳಗಳನ್ನು ಚುನಾಯಿಸಲು ಪ್ರಮುಖ ರಾಜಕೀಯ ಪಕ್ಷಗಳೇ ಒಟ್ಟಾಗಿ ಪ್ರಯತ್ನಿಸುತ್ತವೆ. ಚಾಣಾಕ್ಷ ಮದ್ಯದ ದೊರೆ ವಿಜಯ ಮಲ್ಯ ಒಂದಲ್ಲ ಎರಡು ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದುದು ಒಂದು ಉದಾಹರಣೆ. ಚುನಾ ವಣಾ ಅಭ್ಯರ್ಥಿಗಳು ತಮ್ಮ ಆದಾಯ ಮೂಲ ಘೋಷಿಸಬೇಕೆಂಬ ಸರ್ವೋಚ್ಚ ನ್ಯಾಯಾಲಯದ ಈಗಿನ ತೀರ್ಪಿನ ಅನುಷ್ಠಾನಕ್ಕೆ ಚುನಾವಣಾ ಆಯೋಗ ತಕ್ಕ ಕ್ರಮ ಕೈಗೊಳ್ಳುವುದೆಂಬುದೇ ಎಲ್ಲರ ನಿರೀಕ್ಷೆ. ಅಡ್ಡ ಮಾರ್ಗದಿಂದ ಸಂಪಾದಿಸಿದ ದುಡ್ಡು – ದೌಲತ್ತಿನ ಬಲದಿಂದ ಮರೆಯುವ ವ್ಯಕ್ತಿಗಳಿಗೆ ಯಾವ ಕಾಲಕ್ಕೂ ಕರ್ನಾಟಕವನ್ನು ಆಳಲು ಅವಕಾಶ ದೊರೆಯದಂತೆ ಮಾಡಬೇಕು.
ನರೇಂದ್ರ ಮೋದಿಯವರ ಸರಕಾರ ಸರ್ವೋಚ್ಚ ನ್ಯಾಯಾಲಯ ಕಳೆದ ವರ್ಷ ನೀಡಿದ ಇನ್ನೊಂದು ಮಹಣ್ತೀದ ತೀರ್ಪಿನ ಅನುಷ್ಠಾನಕ್ಕೂ ಇನ್ನೂ ಮುಂದಾಗಿಲ್ಲ. ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಜನ ಪ್ರತಿನಿಧಿಗಳ (ಸಂಸದರು, ಶಾಸಕರು ಇತ್ಯಾದಿ) ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಸರ್ವೋಚ್ಚ ನ್ಯಾಯಾಲಯದ ಪೀಠ (ನ್ಯಾ| ರಂಜನ್ ಗೊಗೋಯ್ ಹಾಗೂ ಇನ್ನೊಬ್ಬರು) ಕೇಂದ್ರ ಸರಕಾರಕ್ಕೆ ನಿರ್ದೇಶವಿತ್ತಿತ್ತು. ಇಂಥ ಪ್ರಕರಣಗಳನ್ನು ಒಂದು ವರ್ಷದೊಳಗೆ ಇತ್ಯರ್ಥ ಮಾಡಬೇಕಾಗುತ್ತದೆ. ನಮ್ಮ ಸಂಸದರು ಹಾಗೂ ಶಾಸಕರುಗಳ ವಿರುದ್ಧ ದಾಖಲಾಗಿರುವ 1587 ಪ್ರಕರಣಗಳು ಇನ್ನೂ ವಿಚಾರಣೆಗೆ ಬಾಕಿಯಿವೆ.
ಚುನಾವಣಾ ವ್ಯವಸ್ಥೆಯ ಸುಧಾರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟು ಹೊರಡಿಸಿರುವ ತೀರ್ಪುಗಳೇನೋ ಹೇರಳ ವಾಗಿವೆ. ಅರ್ಥಾತ್ ತೀರ್ಪುಗಳ ಮಟ್ಟಿಗೆ ಏನೇನೂ”ಕೊರತೆ’ಯಿಲ್ಲ; ಕೊರತೆಯೇನಿದ್ದರೂ ಕ್ರಮ ಕೈಗೊಳ್ಳಬೇಕಾದ ಸರಕಾರದ ಕರ್ತವ್ಯ ಪರತೆಯದೇ. ರಾಜಕೀಯ ಪಕ್ಷಗಳಿಗೆ ಕಾರ್ಪೋರೇಟ್ ಕಂಪೆನಿಗಳು ದೇಣಿಗೆ ನೀಡುವುದನ್ನು ನಿಷೇಧಿಸಬೇಕೆಂದು ಶಿಫಾರಸು ಮಾಡಿರುವ ದಿನೇಶ್ ಗೋಸ್ವಾಮಿಯವರ ವರದಿ (1990), ನ್ಯಾ| ವಿ. ಎಂ. ತಾರ್ಕುಂಡೆಯವರ ವರದಿ (1975) ಚುನಾವಣೆಗೆ ಹಣ ಒದಗಣೆ ಕುರಿತ ಇಂದ್ರಜಿತ್ ಗುಪ್ತಾ ವರದಿ, ಕಾನೂನು ಆಯೋಗದ 1999ರ ವರದಿ, ಭಾರತೀಯ ಸಂವಿಧಾನದ ಮರು ಸಮೀಕ್ಷೆ ನಡೆಯಬೇಕೆಂದು ಶಿಫಾರಸು ಮಾಡಿರುವ ರಾಷ್ಟ್ರೀಯ ಆಯೋಗದ ವರದಿ (2002)… ಇವುಗಳ ಬಗ್ಗೆ ಕ್ರಮ ಕೈಗೊಳ್ಳಲು ಯಾವ ಸರಕಾರಗಳೂ ಮುಂದಾಗಿಲ್ಲ.
ಇಂದಿರಾ ಗಾಂಧಿ ಸರಕಾರ ತುರ್ತು ಪರಿಸ್ಥಿತಿಯಲ್ಲಿ ಕೈಗೊಂಡ ಚುನಾವಣಾ ಸುಧಾರಣಾ ಕ್ರಮವಂತೂ ತೀರಾ ಆಘಾತಕಾರಿ ಯಾದುದು. ಪ್ರಧಾನಿ, ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಗಳ ಆಯ್ಕೆ ವಿಧಾನವನ್ನು ಪ್ರಶ್ನಿಸುವ ದೂರು/ಮನವಿಗಳನ್ನು ನ್ಯಾಯಾಲಯಗಳು ಕೈಗೆತ್ತಿಕೊಳ್ಳುವುದನ್ನು ನಿಷೇಧಿಸುವ ನಿರ್ಣಯವನ್ನು ಸಂಸತ್ತು ತೆಗೆದುಕೊಂಡಿತ್ತು. 1975ರಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯ (ನ್ಯಾ| ಜೆ.ಎಂ.ಎಲ್.ಸಿನ್ಹಾ) ಅವರು ರಾಯ್‌ಬರೇಲಿ ಕ್ಷೇತ್ರದಿಂದ ಇಂದಿರಾಗಾಂಧಿಯವರ ಆಯ್ಕೆಯನ್ನು ಅಸಿಂಧುಗೊಳಿಸಿದ್ದರು; ಇಂದಿರಾ ಸಂವಿಧಾನದ ತಿದ್ದುಪಡಿಗೆ ಮುಂದಾದುದು ಈ ಹಿನ್ನೆಲೆಯಲ್ಲಿ.
ಅರಕೆರೆ ಜಯರಾಮ್