ಇತ್ತೀಚೆಗೆ ಕಾಲೇಜು ಮುಗಿಸಿ ಸಂಜೆ ಹೊತ್ತಲ್ಲಿ ಬಸ್‌ಗಾಗಿ ಬಸ್ ನಿಲ್ದಾಣದಲ್ಲಿ ಕುಳಿತಿದ್ದೆ. ಪಕ್ಕದಲ್ಲಿದ್ದ ಮಹಿಳೆಯೊಬ್ಬರು ತನ್ನ ಸಹೋದ್ಯೋಗಿಯೊಂದಿಗೆ ಮಾತುಕತೆ ನಡೆಸುತ್ತಿದ್ದರು. ಪರರ ಸಂವಹನ ಆಲಿಸುವುದು ತಪ್ಪಾದರೂ ನನ್ನ ಪಕ್ಕವೇ ಅವರಿಬ್ಬರು ಕುಳಿತಿದ್ದರಿಂದ ಸಹಜವಾಗಿಯೇ ಅವರ ಮಾತುಗಳು ನನ್ನ ಕಿವಿ ಕೇಳಿಸುತ್ತಿತ್ತು.
ಈ ಮಾತುಕತೆಗಳ ನಡುವೆ ಮಹಿಳೆಯು ತನ್ನ ಮೈದುನನಿಗೆ ಮದುವೆ ನಿಶ್ಚಯವಾಗಿದ್ದು, ಹುಡುಗಿಗೆ ಇದು ಎರಡನೇ ಮದುವೆ ಎಂದು ಹೇಳಿದಾಗ, ಇನ್ನೊಬ್ಟಾಕೆ ಪರವಾಗಿಲ್ಲ ಬಿಡಿ ಒಂದು ಹೆಣ್ಣಿಗೆ ಬದುಕು ಕೊಟ್ಟ ಹಾಗೇ ಆಯ್ತು ಎಂಬ ಉತ್ತರವನ್ನಿಟ್ಟು ಇಬ್ಬರೂ ಬಸ್ ಹತ್ತಿದರು. ಆದರೆ ಇದನ್ನು ಆಳಿಸಿದ ನನಗೆ ಕಲಿಯುಗದಲ್ಲೂ ನಾವು ನಮ್ಮ ಬದಲಾದ ಪ್ರಶ್ನೆಪತ್ರಿಕೆಗೆ ಹಿರಿಯರ ನೋಟ್ಸ್‌ಗಳ ಉತ್ತರವನ್ನೇ ಕಾಪಿ ಹೊಡೆಯುತ್ತಿದ್ದೇವೆ ಎಂದೆನಿಸಿ ನಾಚಿಕೆಯಾಯಿತು.
ನಮ್ಮ ಸಮಾಜದಲ್ಲಿ ಅನಾಥ ಹುಡುಗಿಗೆ, ವಿಧವೆಗೆ, ಅಥವಾ ವಿಚ್ಛೇದಿತ ಮಹಿಳೆಗೆ ವಿವಾಹವಾಗುತ್ತಿದೆ ಎಂದಾಗ ಬಾಳು ಕೊಡುವ ಮಾತು ಸಹಜವಾಗಿಯೇ ಕೇಳಿಬರುತ್ತದೆ. ಇಪ್ಪತ್ತೂಂದನೇ ಶತಮಾನದಲ್ಲೂ ಪುರುಷರ ದರ್ಪದ ಹೆಜ್ಜೆಗಳು ಅಲ್ಲಲ್ಲಿ ಕಾಣಸಿಗುತ್ತವೆ ಎಂದಾಗ ಇಂತಹ ಮಾತುಗಳೇ ಎಲ್ಲೋ ಒಂದು ಕಡೆ ಪ್ರೋತ್ಸಾಹದಾಯಕವಾಗಿರಬಹುದು ಎಂಬ ಊಹೆ ಕೂಡ ಮೂಡಿ ಮರೆಯಾಗುತ್ತದೆ.
ಇನ್ನು ಇಲ್ಲಿ ಯಾರು ಯಾರಿಗೆ ಬಾಳು ಕೊಡುತ್ತಿದ್ದಾರೆ ಎಂಬ ಪ್ರಶ್ನೆಗೆ ಮಾತ್ರ ನಾವು ಹೆಚ್ಚು ಯೋಚಿಸದೇ ಬಾಳು ಕೊಡುವ ಕ್ರೆಡಿಟ್ ಅನ್ನು ಪುರುಷ ವರ್ಗಕ್ಕೆ ಸಲ್ಲಿಸುತ್ತೇವೆ. ಆದರೆ ಒಂದು ಗಂಡು ಪುನರ್ ವಿವಾಹವಾಗುತ್ತಿದ್ದಾನೆ ಎಂದಾಗ ಹೆಣ್ಣಿಗೆ ಕೊಡಬೇಕಾದ ಕ್ರೆಡಿಟನ್ನು ಮಾತ್ರ ಗುರುತಿಸದೆ ಹೋಗುತ್ತಿದ್ದೇವೆ.
ಏನೇ ಇರಲಿ ಮದುವೆ ಎಂಬುದು ಎರಡು ಮನಸ್ಸುಗಳ ನಡುವೆ ಏರ್ಪಾಟ್ಟಾಗ ಅದು ಎರಡು ಜೀವಗಳ ಬದುಕಿನಲ್ಲಿ ಧನಾತ್ಮಕ ಬದಲಾವಣೆಯಾಗುತ್ತದೆ. ಇದು ಬಾಳು ಕೊಡುವುದಾ ಅಥವಾ ಬದುಕು ಕಟ್ಟಿಕೊಳ್ಳುವುದಾ ಎಂಬುದನ್ನು ಮಾತ್ರ ನಾವು ಗಂಭೀರವಾಗಿ ಯೋಚಿಸಲೇಬೇಕು.
-ವಿಧಿಶ್ರೀ
ಮಂಗಳೂರು ವಿ.ವಿ.