ಗಂಗಾವತಿ: ರಾಜ್ಯ ಸರಕಾರ ಸೆ.15 ರಂದು ವಿಶ್ವ ಪ್ರಜಾಪ್ರಭುತ್ವ ದಿನದ ಸಂದರ್ಭದಲ್ಲಿ ಶಾಲೆಯ ಪ್ರಾರ್ಥನೆಯ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆ ಓದಿಸುವ ಯೋಜನೆ ಅನುಷ್ಠಾನ ಮಾಡಲಿದ್ದು ಈ ಕಾರ್ಯವನ್ನು 2020 ರಲ್ಲೇ ನಗರದ ಕೊಲ್ಲಿನಾಗೇಶ್ವರರಾವ್ ಸರಕಾರಿ ಮಹಾವಿದ್ಯಾಲಯದಲ್ಲಿ ಸಂವಿಧಾನದ ಪೀಠಿಕೆ ಓದಿಸುವ ಅಭಿಯಾನ ಆರಂಭ ಮಾಡಲಾಯಿತು.
ಭಾರತದ ಸಂವಿಧಾನದ ಕುರಿತು ಜಾಗೃತಿ ಮೂಡಿಸಲು ಹಾಗೂ ನಾಡಿನಲ್ಲಿ ಸಹಬಾಳ್ವೆಗೆ ಅವಕಾಶ ಕೊಡುತ್ತ, ಪರಸ್ಪರರನ್ನು ಸಮಾನತೆಯ ನೆಲೆಯಲ್ಲಿ ಬೆಸೆಯುವ ಪ್ರಯತ್ನದ ಭಾಗವಾಗಿ ಕರ್ನಾಟಕ ರಾಜ್ಯ ಸರ್ಕಾರ ಸಂವಿಧಾನದ ಪೂರ್ವಪೀಠಿಕೆ ಯನ್ನು ಪಠಿಸುವುದರ ಮೂಲಕ ಸೆಪ್ಟೆಂಬರ್ 15 ನ್ನು ಪ್ರಜಾಪ್ರಭುತ್ವ ದಿನಾಚರಣೆಯನ್ನಾಗಿ ಆಚರಿಸಬೇಕೆಂದು ಅದೇಶಿಸಿದೆ.
2020 ಜನವರಿ 26 ಗಣರಾಜ್ಯೋತ್ಸವದ ದಿನದಂದು ಆಗ ರಾಜ್ಯಶಾಸ್ತ್ರ ವಿಭಾಗದ ಪ್ರಭಾರ ವಹಿಸಿಕೊಂಡಿದ್ದ ಪ್ರೊ. ಕರಿಗೂಳಿಯವರು ಇಡೀ ಕಾಲೇಜಿನ ಎಲ್ಲಾ ವಿಭಾಗಗಳನ್ನು ಕೋರ್ಸ್ ಗಳನ್ನು ಒಳಗೊಂಡಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಭಾರತ ಸಂವಿಧಾನದ ಪೂರ್ವಪೀಠಿಕೆ ಯನ್ನು ಪಠಿಸಲು ಎರಡು ಪ್ರತ್ಯೇಕ ತಂಡಗಳನ್ನು ರಚಿಸಿ ಒಂದು ವಾರದ ವರೆಗೂ ಸೂಕ್ತ ಮಾರ್ಗದರ್ಶನ ನೀಡಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ 2020 ಜನೇವರಿ 26ರಂದು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪೂರ್ವಪೀಠಿಕೆ ಓದಿಸಿದ್ದರು, ಎಂಬುದು ದೂರದೃಷ್ಟಿಯ ಹಾಗೂ ರಾಜ್ಯಕ್ಕೆ ಮಾದರಿಯ ಕಾರ್ಯವನ್ನು ಗಂಗಾವತಿ ಕಾಲೇಜಿನಲ್ಲಿ ಮಾಡುವ ಮೂಲಕ ಸಂವಿಧಾನದ ಪೀಠಿಕೆಯನ್ನು ಎಲ್ಲಾ ಕೋರ್ಸಿನ ವಿದ್ಯಾರ್ಥಿಗಳಿಗೆ ಪರಿಚಯ ಮಾಡಲಾಗಿದೆ. ಅಲ್ಲದೇ ಪತ್ರಿಕೋದ್ಯಮ ವಿದ್ಯಾರ್ಥಿನಿಯಾಗಿದ್ದ ಕೆ. ಚೈತ್ರಾ. ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಕಾಣಿಕೆಯಾಗಿ ಪೂರ್ವಪೀಠಿಕೆಯ ಚಿತ್ರಪಟವನ್ನು ಕೊಡುಗೆಯಾಗಿ ನೀಡಿದ್ದರು .
“ರಾಜ್ಯಶಾಸ್ತ್ರ ವಿಭಾಗದಲ್ಲಿ ಖಾಯಂ ಪ್ರಾಧ್ಯಾಪಕರು ಇಲ್ಲದ್ದರಿಂದ ಅಂದಿನ ಪ್ರಾಚಾರ್ಯರು ನನಗೆ ತಾತ್ಕಾಲಿಕವಾಗಿ ಪ್ರಭಾರ ವಹಿಸಿಕೊಳ್ಳಲು ಸೂಚಿಸಿದ್ದರು, ತಕ್ಷಣ ಗಣರಾಜ್ಯೋತ್ಸವ ಕಾರ್ಯಕ್ರಮ ಇದ್ದುದ್ದರಿಂದ ವಿದ್ಯಾರ್ಥಿಗಳಿಂದ ಏನಾದರು ಸಾರ್ಥಕ ಮತ್ತು ವಿಶಿಷ್ಟ ಕಾರ್ಯಕ್ರಮ ಮಾಡಿಸಿ ನಾವೆಲ್ಲರೂ ಒಂದೇ ಎಂಬ ಸಮಾನತ ಭಾವನೆ ಮೂಡಿಸಿ ಸಾಮಾಜಿಕ ಸಂದೇಶವನ್ನು ಕೊಡುತ್ತ ರಾಜ್ಯಶಾಸ್ತ್ರ ವಿಭಾಗದ ಘನತೆ ಹೆಚ್ಚಿಸಬೇಕೆಂದು ಸಂವಿಧಾನ ಪೀಠಿಕೆ ಕಂಠಪಾಠ ಮಾಡಿ ಹೇಳುವ ಕಾರ್ಯಕ್ರಮ ನಡೆಸಲಾಯಿತು. ಇದರಿಂದ ಪದವಿ ಸ್ನಾತಕೋತ್ತರ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಸ್ಪಂದಿಸಿ ಸಂವಿಧಾನದ ಪೀಠಿಕೆ ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಹೇಳುವ ಮೂಲಕ ಕಿರಿಯ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದರು. ಸರಕಾರ ಸೆ.15 ರಿಂದ ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದಿಸುವ ಕಾರ್ಯ ಆರಂಭಿಸುತ್ತಿರುವುದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನಿತ್ಯವೂ ಮಕ್ಕಳು ಶಿಕ್ಷಕರು ಸ್ಮರಣೆ ಮಾಡಿಕೊಳ್ಳಲು ಅನುವು ಮಾಡಿದಂತಾಗಿದೆ. ಈ ಮೂಲಕ ಜಾತಿ, ಧರ್ಮ, ಭಾಷೆ, ಆಚಾರ, ವಿಚಾರಗಳಲ್ಲಿ ಅನೇಕತೆ ಇದ್ದರೂ ದೇಶದ ವಿಷಯ ಬಂದಾಗ ಭಾರತ ಸಾರ್ವಭೌಮತ್ವ ಮೆರೆಸಲು ಇದರಿಂದ ನೆರವಾಗುತ್ತದೆ.
-ಪ್ರೊ.ಕರಿಗೂಳಿ ಸಂವಿಧಾನ ಪೀಠಿಕೆ ಓದಿಸುವ ಕಾರ್ಯಕ್ರಮ ಆಯೋಜಕರು.
-ಕೆ.ನಿಂಗಜ್ಜ