Advertisement

ಆ್ಯಡ್‌ ಬ್ಯಾಚ್‌ ರದ್ದತಿಗೆ ದಂತವೈದ್ಯವಿದ್ಯಾರ್ಥಿಗಳಿಂದ ಅಭಿಯಾನ

12:07 PM Oct 16, 2017 | Team Udayavani |

ಬೆಂಗಳೂರು: ಆ್ಯಡ್‌ ಬ್ಯಾಚ್‌ ಪದ್ಧತಿಯನ್ನು ವೈದ್ಯಕೀಯ ವಿದ್ಯಾರ್ಥಿಗಳಿಗೆ ರದ್ದು ಮಾಡಿದಂತೆ ದಂತವೈದ್ಯಕೀಯ ವಿದ್ಯಾರ್ಥಿಗಳಿಗೂ ಅನ್ವಯಿಸುವಂತೆ ಮಾಡಬೇಕೆಂದು ದಂತವೈದ್ಯಕೀಯ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.

Advertisement

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿವಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಆ್ಯಡ್‌ಬ್ಯಾಚ್‌ ವ್ಯವಸ್ಥೆ ತೆಗೆದುಹಾಕಿದೆ. ಕೆಲವೊಂದು ತಾಂತ್ರಿಕ ಸಮಸ್ಯೆಯಿಂದಾಗಿ ದಂತವೈದ್ಯಕೀಯ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ನೀಡಿಲ್ಲ. ಇದರಿಂದ ಆಕ್ರೋಶಗೊಂಡಿರುವ ಆ್ಯಡ್‌ ಬ್ಯಾಚ್‌ನ ದಂತವೈದ್ಯಕೀಯ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದ ಮೂಲಕ ಅಭಿಯಾನ ಆರಂಭಿಸಿದ್ದಾರೆ.  ಫೇಸ್‌ಬುಕ್‌ ಪೇಜ್‌ ಮತ್ತು ವಾಟ್ಸ್‌ ಆ್ಯಪ್‌ ಗ್ರೂಪ್‌ಗ್ಳ ಮೂಲಕ ಅರ್ಹ ವಿದ್ಯಾರ್ಥಿಗಳ ಬೆಂಬಲಕ್ಕಾಗಿ ಸಹಿ ಸಂಗ್ರಹ ಮಾಡುತ್ತಿದ್ದಾರೆ.

ರಾಜಕಾರಣಿಗಳ ಮೊರೆ: ವಿದ್ಯಾರ್ಥಿಗಳು ರಾಜಕಾರಣಿಗಳ ಮೂಲಕ ರಾಜೀವ್‌ಗಾಂಧಿ ಆರೋಗ್ಯ ವಿವಿಯ ಆಡಳಿತ ಮಂಡಳಿಯ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಈ ವಾರದಲ್ಲಿ ರಾಜ್ಯದ ಹಾಗೂ ಕೇಂದ್ರದ ಕೆಲವು ಸಚಿವರನ್ನು ಭೇಟಿ ಮಾಡಲಿದ್ದಾರೆ. ಕಾನೂನು ಹೋರಾಟಕ್ಕೂ ಮುಂದಾಗಿದ್ದು, ವಕೀಲರಿಂದಲೂ ಸೂಕ್ತ ಸಲಹೆ  ಪಡೆದುಕೊಂಡಿದ್ದಾರೆ.

ಅನ್ಯಾಯ ಸರಿಯಲ್ಲ: ವೈದ್ಯಕೀಯ ವಿದ್ಯಾರ್ಥಿಗಳಿಗೆ ಆ್ಯಡ್‌ಬ್ಯಾಚ್‌ ಪದ್ಧತಿ ರದ್ದು ಮಾಡಿ, ದಂತವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾತ್ರ ಮುಂದುವರಿಸುವುದು ಸರಿಯಲ್ಲ. ಇದು ಸಾಮಾಜಿಕ ನ್ಯಾಯದ ವಿರುದ್ಧ ಮತ್ತು ವಿದ್ಯಾರ್ಥಿಗಳ ಮನೋಬಲ ಕುಗ್ಗಿಸುತ್ತದೆ. ಆ್ಯಡ್‌ಬ್ಯಾಚ್‌ ಎಂದು ಹೇಳಿಕೊಳ್ಳಲು ಮುಜುಗರ ಆಗುತ್ತದೆ. ಈ ಮಧ್ಯೆ ಕೆಲವು ವಿದ್ಯಾರ್ಥಿಗಳಿಗೆ ಆ್ಯಡ್‌ ಬ್ಯಾಚ್‌ ತೆಗೆದು, ಇನ್ನು ಕೆಲವರಿಗೆ ಮಾತ್ರ ಅನ್ವಯಿಸುವಂತೆ ಮಾಡುವುದು ಸರಿಯಲ್ಲ. ಹಾಗೆಯೇ ಆ್ಯಡ್‌ ಬ್ಯಾಚ್‌ ವಿದ್ಯಾರ್ಥಿಗಳಿಂದ ದುಬಾರಿ ಪರೀಕ್ಷಾ ಶುಲ್ಕ ಪಡೆಯುತ್ತಿದ್ದಾರೆ. ದಂತವೈದ್ಯಕೀಯ ವಿದ್ಯಾರ್ಥಿಗಳಿಗೆ ಆ್ಯಡ್‌ಬ್ಯಾಚ್‌ ತೆಗೆದು, ಪ್ರತಿ ಸೆಮಿಸ್ಟರ್‌ನಲ್ಲಿಯೂ ಸಪ್ಲಿಮೆಂಟ್ರಿ ಬರೆಯಲು ಅವಕಾಶ ನೀಡಬೇಕೆಂದು ರಾಜೀವ್‌ ಗಾಂಧಿ ವಿವಿ ಆಡಳಿತ ಮಂಡಳಿಗೆ ಪತ್ರ ಬರೆದಿದ್ದೇವೆ.

ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಸಪ್ಲಿಮೆಂಟ್ರಿ ಪರೀಕ್ಷೆ ನಡೆಸಲು ಸಾಧ್ಯವಾಗದೇ ಇದ್ದರೆ, ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ನಡೆಸಬಹುದು. ದಂತವೈದ್ಯಕೀಯ ವಿದ್ಯಾರ್ಥಿಗಳಿಗೆ ಈ ವರ್ಷ ಆ್ಯಡ್‌ ಬ್ಯಾಚ್‌ ರದ್ದು ಮಾಡದೇ ಇದ್ದರೆ ಮುಂದಿನ ಮೂರು ವರ್ಷ ತೆಗೆಯಲು ಸಾಧ್ಯವಾಗುವುದಿಲ್ಲ ಎಂದು ನೊಂದ ವಿದ್ಯಾರ್ಥಿಗಳು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

Advertisement

ಇಂದಿನಿಂದ ಹೋರಾಟ ?
ವೈದ್ಯಕೀಯ ವಿದ್ಯಾರ್ಥಿಗಳಂತೆ ದಂತವೈದ್ಯಕೀಯ ವಿದ್ಯಾರ್ಥಿಗಳಿಗೂ ಆಡ್‌ಬ್ಯಾಚ್‌ನಿಂದ ಮುಕ್ತಿ ನೀಡಬೇಕೆಂದು
ಆಗ್ರಹಿಸಿ ಹೋರಾಟ ನಡೆಸಲು ನೊಂದ ವಿದ್ಯಾರ್ಥಿಗಳು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಹಾಗೂ ಎಐಡಿಎಸ್‌ಒ ಮೊದಲಾದ ವಿದ್ಯಾರ್ಥಿ ಸಂಘಟನೆಗಳ ಮೊರೆ ಹೋಗಿದ್ದಾರೆ. ವಿದ್ಯಾರ್ಥಿ ಸಂಘಟನೆಗಳ ಸಹಯೋಗದಲ್ಲಿ ಸೋಮವಾರದಿಂದ ರಾಜ್ಯಾದ್ಯಂತ
ಹೋರಾಟ ರೂಪಿಸುವ ಸಾಧ್ಯತೆಯಿದೆ.

ದಂತವೈದ್ಯಕೀಯ ವಿದ್ಯಾರ್ಥಿಗಳಿಗೆ ಕ್ಯಾರಿಒವರ್‌ ಪದ್ಧತಿ ಜಾರಿಯಲ್ಲಿರುವುದರಿಂದ ಮತ್ತು ಭಾರತೀಯ ದಂತವೈದ್ಯಕೀಯ ಪರಿಷತ್‌ ಆ್ಯಡ್‌ ಬ್ಯಾಚ್‌ ಪದ್ಧತಿ ತೆಗೆದು ಹಾಕಲು ಅವಕಾಶ ನೀಡದೇ ಇರುವುದರಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾತ್ರ ಇದನ್ನು ಜಾರಿಗೆ ತಂದಿದ್ದೇವೆ.
 ●ಡಾ.ಎಂ.ಕೆ.ರಮೇಶ್‌, ಕುಲಪತಿ (ಹಂಗಾಮಿ) ಆರ್‌ಜಿಯುಎಚ್‌ಎಸ್‌  

Advertisement

Udayavani is now on Telegram. Click here to join our channel and stay updated with the latest news.

Next