Advertisement

ಇಂಧನ ಉಳಿತಾಯ ಜಾಗೃತಿಗೆ ಅಭಿಯಾನ

08:40 AM Jul 05, 2017 | |

ಹುಬ್ಬಳ್ಳಿ: ಇಂಧನ ಉಳಿತಾಯದ ಜಾಗೃತಿ, ಪರ್ಯಾಯ ಇಂಧನ ಬಳಕೆ ಹೆಚ್ಚಳ, ವಿದ್ಯುತ್‌ ಸಮಸ್ಯೆ ಪರಿಹಾರಕ್ಕೆ ಮೊಬೈಲ್‌ ಆ್ಯಪ್‌ ಕುರಿತಾಗಿ ಐದು ವರ್ಷಗಳಲ್ಲಿ ಸುಮಾರು 2000 ಯುವಕರಿಗೆ ತಾಂತ್ರಿಕ ಕೌಶಲ ತರಬೇತಿ ನೀಡುವ ಜಂಟಿ ಕಾರ್ಯಾಚರಣೆ ಕೈಗೊಳ್ಳಲು ದೇಶಪಾಂಡೆ ಪ್ರತಿಷ್ಠಾನದ ಸುಸಂಧಿ ಇಲೆಕ್ಟ್ರಿಕ್‌ ಪ್ರೊಜೆಕ್ಟ್ 
(ಡಿಎಸ್‌ಇಪಿ) ಹಾಗೂ ಹೆಸ್ಕಾಂ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿವೆ. ಕೌಶಲ ಅಭಿವೃದ್ಧಿ ಯೋಜನೆಯಡಿ ದೇಶಪಾಂಡೆ ಪ್ರತಿಷ್ಠಾನ ಯುವಕರಿಗೆ ಇಲೆಕ್ಟ್ರಿಕಲ್‌ ತರಬೇತಿ ಕೇಂದ್ರ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ದೇಶಪಾಂಡೆ ಪ್ರತಿಷ್ಠಾನದ ಸಂಸ್ಥಾಪಕ ಡಾ| ಗುರುರಾಜ ದೇಶಪಾಂಡೆ ಸಮ್ಮುಖದಲ್ಲಿ ಪ್ರತಿಷ್ಠಾನದ ಸಿಇಒ ನವೀನ್‌ ಝಾ, ಹೆಸ್ಕಾಂ ಪ್ರಧಾನ ವ್ಯವಸ್ಥಾಪಕ (ತಾಂತ್ರಿಕ) ಮನೋಹರ ಬೇವಿನಮರದ ಒಡಂಬಡಿಕೆಗೆ ಸಹಿ ಹಾಕಿದ್ದಾರೆ.

Advertisement

ಇಂಧನ ಉಳಿತಾಯಕ್ಕೆ ಫೋಕಸ್‌: ವಾರ್ಷಿಕ 300-400  ಯುವಕರಿಗೆ ನಾಲ್ಕು ತಿಂಗಳ ತರಬೇತಿ ನೀಡಲಾಗುತ್ತಿದೆ.
ಯುವಕರಿಗೆ ವಸತಿ ಸೌಲಭ್ಯ ಸಹಿತ ತರಬೇತಿಗಾಗಿ ದೇಶಪಾಂಡೆ ಪ್ರತಿಷ್ಠಾನ ಗೋಕುಲ ರಸ್ತೆಯ ವಿಮಾನ ನಿಲ್ದಾಣ ಬಳಿ ಶಾಶ್ವತ ಕಟ್ಟಡ ನಿರ್ಮಿಸಿದೆ. ಟ್ರಾನ್ಸ್‌ಫಾರರ್‌, ಎಸಿ, ಡಿಸಿ ಮೋಟಾರ್, ಜನರೇಟರ್‌, ಸೋಲಾರ್‌, ಪವನಶಕ್ತಿ, ಬಯೋಗ್ಯಾಸ್‌ ಉಪಕರಣಗಳು, ಗೃಹೋಪಯೋಗಿ ಉಪಕರಣಗಳು, ಕೇಬಲಿಂಗ್‌, ಮೀಟರಿಂಗ್‌ ಸೇರಿ 10 ಮಾದರಿಗಳಲ್ಲಿ ತರಬೇತಿ ನೀಡಲಾಗುತ್ತದೆ. ಹೆಸ್ಕಾಂ ತಜ್ಞರು, ತಾಂತ್ರಿಕ ಅಧಿಕಾರಿಗಳು ಒಂದು ತಂಡಕ್ಕೆ ಕನಿಷ್ಠ
10 ದಿನಗಳವರೆಗೆ ತರಬೇತಿ ನೀಡುವ ಜತೆಗೆ, ಕಾರ್ಯಾಗಾರ, ಉಪ ವಿತಕರಣಾ ಕೇಂದ್ರಗಳಿಗೂ ಕರೆದ್ಯೊಯ್ದು ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಮೂರು ತಿಂಗಳಿಗೊಮ್ಮೆ ಡಿಎಸ್‌ಇಪಿ ಬೋಧಕ ಸಿಬ್ಬಂದಿಗೂ ತರಬೇತಿ ನೀಡಲಿದ್ದಾರೆ.

ಸಾಂಪ್ರದಾಯಿಕ ಇಂಧನ ಬಳಕೆ ಮೇಲಿನ ಒತ್ತಡ ತಗ್ಗಿಸುವ ನಿಟ್ಟಿನಲ್ಲಿ ಶಿಬಿರಾರ್ಥಿಗಳಿಗೆ ಮನೆ ಮನೆಗೆ ತೆರಳಿ
ಜಾಗೃತಿ ಮೂಡಿಸಲಿದ್ದು, ಶಿಬಿರಾರ್ಥಿಗಳಿಗೆ ಹೆಸ್ಕಾಂ ಹಾಗೂ ಡಿಎಸ್‌ಇಪಿಯಿಂದ ಗುರುತಿನ ಚೀಟಿ ಹಾಗೂ ಟಿ-ಶರ್ಟ್‌
ನೀಡಲಾಗುತ್ತದೆ. ಐದು ಸ್ಟಾರ್‌ ಇರುವ ಗೃಹೋಪಯೋಗಿ ವಸ್ತುಗಳಲ್ಲಿ ಬಳಕೆಯಿಂದಾಗುವ ಪ್ರಯೋಜನ, ಲಾಭದ ಜತೆಗೆ ಪರ್ಯಾಯ ಇಂಧನ ಬಳಕೆಯ ಮಹತ್ವ, ಉಳಿತಾಯ ಬಗ್ಗೆಯೂ ತಿಳಿಸಲಿದ್ದು, ಪ್ರತಿ ಮನೆಯಿಂದ ವಿದ್ಯುತ್‌ ಬಳಕೆಯ ಕುರಿತ ಅಂಕಿ-ಅಂಶ, ಮಾಹಿತಿ ಸಂಗ್ರಹಿಸಲಿದ್ದಾರೆ.

20 ಸಾವಿರ ರೈತರ ಭೇಟಿಗೆ ಚಿಂತನೆ: ರೈತರು ಬಳಸುವ ಕೃಷಿ ಪಂಪ್‌ಸೆಟ್‌ಗಳಲ್ಲಿ ಇಂಧನ ಉಳಿತಾಯ, ಸೌರಶಕ್ತಿ ಪರಿಣಾಮಕಾರಿ ಬಳಕೆ ಕುರಿತು ಜಾಗೃತಿ ಮೂಡಿಸುವ ಯೋಜನೆ ಹೊಂದಲಾಗಿದೆ. ಹೆಸ್ಕಾಂ ವ್ಯಾಪ್ತಿಯಲ್ಲಿ 20 ಸಾವಿರ ರೈತರನ್ನು ಭೇಟಿ ಮಾಡಿ ಅವರಿಗೆ ಮಾಹಿತಿ ನೀಡುವ, ಮನವೊಲಿಸುವ ಕುರಿತಾಗಿ ಚಿಂತಿಸಲಾಗಿದೆ. ಇಂಧನ ಉಳಿತಾಯ ಹಾಗೂ ಪರ್ಯಾಯ ಇಂಧನ ಮೂಲಗಳ ಬಳಕೆ ಹೆಚ್ಚಳ ನಿಟ್ಟಿನಲ್ಲಿ ಶಿಬಿರಾರ್ಥಿಗಳಿಂದ ವರ್ಷಕ್ಕೊಂದು ಬೃಹತ್‌ ರ್ಯಾಲಿ, ವಿದ್ಯುತ್‌ ಸಮಸ್ಯೆಗಳ ಪರಿಹಾರ ಕುರಿತು 24 ಗಂಟೆಗಳ ಹ್ಯಾಕಥಾನ್‌ ಕೈಗೊಳ್ಳಲಾಗುತ್ತದೆ.

ಕಥಾನ್‌ನಲ್ಲಿ ಶಿಬಿರಾರ್ಥಿಗಳು ವಿದ್ಯುತ್‌ನ ಹಲವು ಸಮಸ್ಯೆ, ವಿದ್ಯುತ್‌ ಅಡೆತಡೆ ಬಗ್ಗೆ, ನಿಗದಿತ ಪ್ರಮಾಣಕ್ಕಿಂತ ಅಧಿಕ ವಿದ್ಯತ್‌ ಬಳಕೆ ಆಗುತ್ತಿದ್ದರೆ ಗ್ರಾಹಕರಿಗೆ ಎಸ್‌ಎಂಎಸ್‌ ರವಾನೆಯಂತಹ ಪರಿಹಾರ ರೂಪದ ವಿವಿಧ ಆ್ಯಪ್‌ಗ್ಳನ್ನು ರೂಪಿಸಲಿದ್ದಾರೆ. ಹೆಸ್ಕಾಂ, ವಿವಿಧ ಖಾಸಗಿ ಕಂಪನಿಗಳು ಅಲ್ಲದೆ ಗೃಹೋಪಯೋಗಿ ಉಪಕರಣಗಳ ದುರಸ್ತಿ ವಿಷಯವಾಗಿ ಕೌಶಲಯುತ ಮಾನವಸಂಪನ್ಮೂಲದ ಬೇಡಿಕೆ ಇದೆ. ನಮ್ಮಲ್ಲಿ ತರಬೇತಿ ಪಡೆಯುವ ಶಿಬಿರಾರ್ಥಿಗಳಿಗೆ ಹೆಸ್ಕಾಂನಿಂದ ಪ್ರಮಾಣ ಪತ್ರವೂ ದೊರೆಯಲಿದೆ. ಶಿಬಿರಾರ್ಥಿಗಳಿಗೆ ಉದ್ಯೋಗ ಸಂಪರ್ಕ ನಿಟ್ಟಿನಲ್ಲೂ 
ಯತ್ನಿಸಲಾಗುತ್ತದೆ ಎಂಬುದು ಡಿಎಸ್‌ಇಪಿಯ ಟಿ.ರಜಬ್‌ಅಲಿ ಅವರ ಅನಿಸಿಕೆ.

Advertisement

ದೇಶಪಾಂಡೆ ಪ್ರತಿಷ್ಠಾನ ಕೌಶಲ ಅಭಿವೃದ್ಧಿಯಡಿ ಇಲೆಕ್ಟ್ರಿಕಲ್‌ ವಿಭಾಗದಲ್ಲಿ ಯುವಕರಿಗೆ ತರಬೇತಿಗೆ ಮುಂದಾಗಿದ್ದು,
ಉತ್ತರ ಕರ್ನಾಟಕದ ಯುವಕರಿಗೆ ಇದು ಪ್ರಯೋಜನಕಾರಿ ಆಗಲಿದೆ. ಹೆಸ್ಕಾಂ ಇನ್ನಿತರ ವಿದ್ಯುತ್‌ ನಿಗಮಗಳಲ್ಲಿ ಹಾಗೂ
ಖಾಸಗಿ ಕಂಪನಿ-ಕಾರ್ಖಾನೆಗಳಲ್ಲಿ ಉದ್ಯೋಗ ಪಡೆಯಲು ಕೌಶಲಯುತ ತರಬೇತಿ ಹೊಂದಬಹುದಾಗಿದೆ. ಮುಖ್ಯವಾಗಿ
ಗ್ರೀನ್‌ ಎನರ್ಜಿಗೆ ಒತ್ತು ನೀಡುವ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತದೆ.
ಎಸ್‌.ಕೆ. ಸುನಿಲ್‌ಕುಮಾರ, ಮುಖ್ಯಸ್ಥರು, ದೇಶಪಾಂಡೆ ಪ್ರತಿಷ್ಠಾನ ಐಟಿ ವಿಭಾಗ.

ಅಮರೇಗೌಡ ಗೋನವಾರ
 

Advertisement

Udayavani is now on Telegram. Click here to join our channel and stay updated with the latest news.

Next