Advertisement

ಗಡಿ ಸಮಸ್ಯೆ ಚರ್ಚೆಗೆ ಸಭೆ ಕರೆಯಿರಿ

06:12 PM Dec 22, 2019 | Team Udayavani |

ಬೆಂಗಳೂರು: ಮಹಾರಾಷ್ಟ್ರ ಮತ್ತೆ ಬೆಳಗಾವಿ ಗಡಿ ಸಮಸ್ಯೆ ಕುರಿತು ತಕರಾರು ಎತ್ತಿದೆ. ಹೀಗಾಗಿ, ರಾಜ್ಯ ಸರ್ಕಾರ ಕೂಡ ತಕ್ಷಣ ಗಡಿ ಸಮಸ್ಯೆಯ ಬಗ್ಗೆ ಅಧ್ಯಯನ ಮಾಡಿದವರು ಹಾಗೂ ಗಡಿ ವಿವಾದ ಕುರಿತು ಸೇವೆ ಸಲ್ಲಿಸಿದವರ ವಿಶೇಷ ಸಭೆ ಕರೆಯಬೇಕು ಎಂದು ಮಾಜಿ ಸಚಿವ ಎಚ್‌.ಕೆ.ಪಾಟೀಲ್‌ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

Advertisement

ನೂತನವಾಗಿ ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದಿರುವ ಶಿವಸೇನೆ ನೇತೃತ್ವದ ಸರ್ಕಾರವೂ ಗಡಿ ಸಮಸ್ಯೆಯ ಮೂಲ ದಾಖಲೆಗಳನ್ನು ಸಂಗ್ರಹಿಸಿ ಹೋರಾಟ ನಡೆಸಲು ಇಬ್ಬರು ಸಂಪುಟ ದರ್ಜೆಯ ಸಚಿವರ ಸಮಿತಿ ರಚನೆ ಮಾಡಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಯವರು ಕಾರವಾರ, ನಿಪ್ಪಾಣಿ ಹಾಗೂ ಬೆಳಗಾವಿ ಕರ್ನಾಟಕ ಆಕ್ರಮಿತ ಪ್ರದೇಶವೆಂದು ಉದ್ದಟತನದ ಹೇಳಿಕೆ ನೀಡಿದ್ದಾರೆ.

ಈ ಹಿಂದೆ ಗಡಿ ವಿಷಯದಲ್ಲಿ ಕರ್ನಾಟಕ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಿದ್ದರಿಂದ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆಗೆ ಕಾರಣವಾಗಿತ್ತು. ಆಗ ಮಹಾರಾಷ್ಟ್ರ ಸರ್ಕಾರ ದಾಖಲಿಸಿದ್ದ ಮೂಲ ದಾವೆಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌, ಗಡಿ ಪ್ರದೇಶಗಳ ಸೇರ್ಪಡೆ ನಿರ್ಧರಿಸಲು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮನಮೋಹನ್‌ ಸಿರಿನ್‌ ಅವರನ್ನು ನೇಮಕ ಮಾಡಿತ್ತು.

ಆದರೆ, 2016ರಲ್ಲಿ ರಾಜ್ಯ ಸರ್ಕಾರ ನನ್ನನ್ನು ಗಡಿ ಸಲಹಾ ಸಮಿತಿ ಸಚಿವನನ್ನಾಗಿ ನೇಮಕ ಮಾಡಿತ್ತು. ಆಗ ನಿವೃತ್ತ ನ್ಯಾಯಮೂರ್ತಿ ದಿವಂಗತ ವಿ.ಎಸ್‌.ಮಳಿಮಠ ಅವರು ರಾಜ್ಯದ ಪರವಾಗಿ ಸಮರ್ಥವಾಗಿ ವಾದ ಮಂಡಿಸಿದ್ದರು. ಹೀಗಾಗಿ, ಸುಪ್ರೀಂಕೋರ್ಟ್‌ ಮನಮೋಹನ್‌ ಸಿರಿನ್‌ ನೇತೃತ್ವದ ಸಮಿತಿಯ ವರದಿ ಜಾರಿಗೆ ತಡೆ ನೀಡಿತ್ತು.

ಕಸಾಪ ಖಂಡನೆ
ಬೆಂಗಳೂರು: ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿ ಗಡಿ ಪ್ರದೇಶಗಳನ್ನು ಕರ್ನಾಟಕದ ಆಕ್ರಮಿತ ಪ್ರದೇಶಗಳು ಎಂಬ ರೀತಿಯಲ್ಲಿ ಹೇಳಿಕೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರ ಹೇಳಿಕೆಯನ್ನು ಕನ್ನಡ ಸಾಹಿತ್ಯ ಪರಿ ಷತ್ತು ಖಂಡಿಸಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌, ಉದ್ಧವ ಠಾಕ್ರೆ ಅವರ ಪ್ರಚೋದನಕಾರಿ ಹೇಳಿಕೆ ಬಗ್ಗೆ ಹಿಂದೆ ರಾಜಕೀಯ ಲಾಭದ ಕಾರಣಗಳು ಕೂಡ ಇವೆ ಎಂದು ದೂರಿದ್ದಾರೆ. ಪದೇ, ಪದೇ ಇಂತಹ ವಿಷಯಗಳನ್ನು ಕೆದಕುವುದರಿಂದ ಯಾವುದೇ ಲಾಭವಾಗದು ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next